ಬಸೂÅರು: ಊರಿನಿಂದ ತೆರಳುವಾಗ ಪರಿಚಿತರು ನೀಡಿದ ಪಾರ್ಸೆಲನ್ನು ಕೊಂಡೊಯ್ದು ಅದರಲ್ಲಿ ನಿಷೇಧಿತ ಮಾತ್ರೆಗಳಿವೆ ಎಂಬ ಕಾರಣಕ್ಕೆ ಕುವೈಟ್‌ನಲ್ಲಿ ಜೈಲುಪಾಲಾಗಿದ್ದ ಬಸೂÅರು ಕಳಂಜಿ ನಿವಾಸಿ ಶಂಕರ ಪೂಜಾರಿ ಅವರು 7 ತಿಂಗಳ ಬಳಿಕ ಬಂಧಮುಕ್ತರಾಗಿದ್ದು, ಸೋಮವಾರ ಬೆಳಗ್ಗೆ ಹುಟ್ಟೂರು ತಲುಪಿದ್ದಾರೆ.
ಶಂಕರ ಪೂಜಾರಿ ಅವರು ರವಿವಾರ ಮುಂಬಯಿ ತಲುಪಿದ್ದು, ಅಲ್ಲಿಂದ ರೈಲಿನಲ್ಲಿ ಊರು ಸೇರಿದ್ದಾರೆ. ಮುಂಜಾನೆ 6.30ಕ್ಕೆ ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಕಂಡಾಗ ಮನೆ ಮಂದಿಯ ಸಂಭ್ರಮ ಮುಗಿಲು ಮುಟ್ಟಿತ್ತು. ಆನಂದ ಬಾಷ್ಪದೊಂದಿಗೆ ಸ್ವಾಗತಿಸಿದರು.
ಈ ಮಧ್ಯೆ ಶಂಕರ ಪೂಜಾರಿ ಅವರ ಪತ್ನಿ ಜ್ಯೋತಿ ಅವರು ಶನಿವಾರ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಶಂಕರ ಅವರು ಆಸ್ಪತ್ರೆಗೆ ತೆರಳಿ ಪತ್ನಿಯ ಆರೋಗ್ಯ ವಿಚಾರಿಸಿದರು.
ತನ್ನನ್ನು ಭೇಟಿಯಾದ “ಉದಯವಾಣಿ’ ಪ್ರತಿನಿಧಿ ಜತೆ ಮಾತನಾಡಿದ ಶಂಕರ ಪೂಜಾರಿ ಅವರು, ಅಮಾ ಯಕ ನಾದ ನನ್ನನ್ನು ವಿದೇಶಿ ನೆಲದ ಕಾನೂನಿನಂತೆ ಬಂಧಿಸಲಾಗಿತ್ತು. 7 ತಿಂಗಳ ಹಿಂದೆ ನಾನು ಊರಿಗೆ ಬಂದು ಮರಳುವಾಗ ಕುವೈಟ್ ನಲ್ಲಿರುವ ಫಾತಿಮಾ ಎನ್ನುವವರಿಗೆ ಕೊಡಿ ಎಂದು ಊರಿನ ಪರಿಚಿತರೊಬ್ಬರು ಕಟ್ಟೊಂದನ್ನು ನೀಡಿದ್ದರು. ಅದರೊಳಗೆ ಕುವೈಟ್‌ನಲ್ಲಿ ನಿಷೇಧಕ್ಕೊಳಗಾಗಿರುವ ಮಾತ್ರೆ ಇದೆ ಎಂಬುದು ನನಗೆ ಗೊತ್ತಿರಲಿಲ್ಲ. ಅಲ್ಲಿ ತಪಾಸಣೆ ವೇಳೆ ನನ್ನನ್ನು ಬಂಧಿಸಿದರು ಎಂದರು.
ಗಲ್ಫ್ ಉದ್ಯೋಗ ನಷ್ಟ: 15 ದಿನಗಳಿಗೊಮ್ಮೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆಯುತ್ತಿದ್ದರು. ಆದರೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಹಿತ ವಿವಿಧ ಸಂಘ – ಸಂಸ್ಥೆಗಳು, ಸ್ನೇಹಿತರ ಪ್ರಯತ್ನದಿಂದ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿ ನಿರಪರಾಧಿ ಎಂದು ಬಿಡುಗಡೆಯಾದೆ. ಆದರೆ ಕೆಲಸ ಮಾಡುತ್ತಿದ್ದ ಅಗ್ರಿಕಲ್ಚರಲ್ ಫುಡ್ ಪ್ರಾಡಕ್ಟ್ ಕಂಪೆನಿಯ ಉದ್ಯೋಗ ಹೋಯಿತು. 5 ವರ್ಷ ಕೆಲಸ ಮಾಡಿದ ಅನುಭವ (ಸರ್ವಿಸ್) ನಷ್ಟವಾಯಿತು. ಮತ್ತೆ ವಿದೇಶಕ್ಕೆ ತೆರಳಿ ಕೆಲಸ ಮಾಡುವ ಕುರಿತು ಇನ್ನೂ ನಿರ್ಧರಿಸಿಲ್ಲ. ಸದ್ಯ ಮನೆಮಂದಿಯೊಂದಿಗೆ ಕಳೆಯಲು ನಿರ್ಧರಿಸಿದ್ದೇನೆ ಎಂದಿದ್ದಾರೆ.