ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭಾವಂತ ನಟ, ನಿರ್ದೇಶಕ, ರಂಗಭೂಮಿ ಕಲಾವಿದ ಶಂಕರ್ ನಾಗರ್ ಕಟ್ಟೆ . ನವೆಂಬರ್ 9 ನಾಗ್ ಹುಟ್ಟು ಹಬ್ಬ, ಕರಾಟೆ ಕಿಂಗ್ ಎಂದು ಹೆಸರಾಗಿದ್ದ ಶಂಕರ್ ನಾಗ್ ಬದುಕಿದ್ದರೆ ಇಂದು( ನವೆಂಬರ್ 9, 2020) ಅವರಿಗೆ 66ನೇ ಹುಟ್ಟುಹಬ್ಬದ ಸಂಭ್ರಮವಾಗಿರುತ್ತಿತ್ತು. ಉತ್ತರಕನ್ನಡದ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿ ಜನಿಸಿದ್ದ ಶಂಕರ್ ನಾಗ್ ನಟನೆ ಮತ್ತು ನಿರ್ದೇಶನದ ಉತ್ತುಂಗದ ಶಿಖರದಲ್ಲಿದ್ದಾಗಲೇ ಅಪಘಾತದಲ್ಲಿ ತೀರಿಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿತ್ತು.
ಶಿಕ್ಷಣ ಮುಗಿದ ಬಳಿಕ ಬದುಕನ್ನು ಅರಸಿ ಹೊರಟಿದ್ದು ಮಹಾನಗರಿ ಮುಂಬೈಗೆ. ಬ್ಯಾಂಕ್ ಕ್ಲರ್ಕ್ ಆಗಿದ್ದ ಶಂಕರ್ ನಾಗ್ ತದನಂತರ ಮರಾಠಿ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಎಲ್ಲರ ಗಮನಸೆಳೆದಿದ್ದರು. ರಂಗಭೂಮಿಯಲ್ಲೇ ಆರುಂಧತಿಯ ಭೇಟಿಯಾಗಿ ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.
ಈ ಸಂದರ್ಭದಲ್ಲಿ ಅಣ್ಣ ಅನಂತ್ ನಾಗ್ ಮರಾಠಿ ರಂಗಭೂಮಿ, ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ತನ್ನ ಸಹೋದರ ಶಂಕರ ಕೂಡಾ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಬೇಕೆಂಬುದು ಆಶಯವಾಗಿತ್ತು. ಅದರಂತೆ 1978ರಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದ “ಒಂದಾನೊಂದು ಕಾಲದಲ್ಲಿ” ಸಿನಿಮಾದ ಮೂಲಕ ಶಂಕರ್ ನಾಗ್ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಒಂದಾನೊಂದು ಕಾಲದಲ್ಲಿ ಶಂಕರ್ ನಾಗ್ ಅದ್ಭುತ ಅಭಿನಯಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಇದು ಶಂಕರ್ ಅವರ ಮೊದಲ ಸಿನಿಮಾ ಎಂದು ಊಹಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಪ್ರೇಕ್ಷಕರ ಮನಗೆದ್ದು ಬಿಟ್ಟಿದ್ದರು.
ಹೀಗೆ ಶಂಕರ್ ನಾಗರಕಟ್ಟೆ ಚಿತ್ರರಂಗದಲ್ಲಿ ಶಂಕರ್ ನಾಗ್ ಆಗಿ ಬೆಳೆದುಬಿಟ್ಟಿದ್ದರು. ಸದಾ ಹೊಸತನಕ್ಕಾಗಿ ಹಂಬಲಿಸುತ್ತಿದ್ದ ಶಂಕರ್ ನಾಗ್ “ಒಂದು ಮುತ್ತಿನ ಕಥೆ”ಯಂತಹ ಸಿನಿಮಾ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. 1979ರಲ್ಲಿ ಮಿಂಚಿನ ಓಟ ಸಿನಿಮಾವನ್ನು ನಿರ್ದೇಶಿಸಿದ ನಂತರ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅವರು ಹಿಂದಿರುಗಿ ಕಂಡಿದ್ದಿಲ್ಲ. ಮಿಂಚಿನ ಓಟ ಸಿನಿಮಾ ಒಟ್ಟು ಏಳು ರಾಜ್ಯ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಜನ್ಮಜನ್ಮದ ಅನುಬಂಧ, ಗೀತಾ, ಆ್ಯಕ್ಸಿಡೆಂಟ್, ನೋಡಿ ಸ್ವಾಮಿ ನಾವಿರೋದೇ ಹೀಗೆ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ಆಟೋ ರಾಜಾ ಚಿತ್ರದಲ್ಲಿ ನಟಿಸುವ ಮುಖೇನ ಕನ್ನಡ ಚಿತ್ರರಸಿಕರ ಪಾಲಿಗೆ ಶಂಕರಣ್ಣ ಎಂದೇ ಜನಪ್ರಿಯರಾಗಿದ್ದರು.
ಆ್ಯಕ್ಸಿಡೆಂಟ್ ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಒಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಕನ್ನಡ ಸಿನಿಮಾಗಳು ತಾಂತ್ರಿಕವಾಗಿ ಪೈಪೋಟಿ ನೀಡಬೇಕೆಂಬ ಮಹದಾಸೆ ಹೊಂದಿದ್ದ ಶಂಕರ್ ನಾಗ್ ಅದಕ್ಕಾಗಿಯೇ ಅವರು ಸಂಕೇತ್ ಸ್ಟುಡಿಯೋವನ್ನು ಆರಂಭಿಸಿದ್ದರು. ಎಲ್ಲರಿಗಿಂತ ಭಿನ್ನವಾಗಿ ಆಲೋಚಿಸುತ್ತಿದ್ದ ಶಂಕರ್ ಸಿನಿಮಾವಾಗಲಿ, ಸಾಮಾಜಿಕ ಕಳಕಳಿಯಾಗಲಿ ಅದು ಭವಿಷ್ಯದ ಕೊಡುಗೆಯಾಗಬೇಕೆಂದು ಬಯಸುತ್ತಿದ್ದರಂತೆ.
ಮಾಲ್ಗುಡಿ ಡೇಸ್ ಮರೆಯಲು ಸಾಧ್ಯವೇ?
ಸದಾ ಲವಲವಿಕೆಯ ವ್ಯಕ್ತಿಯಾಗಿದ್ದ ಶಂಕರ್ ನಾಗ್ ನಿರ್ದೇಶಿಸಿ, ನಟಿಸಿದ್ದ ಕಾದಂಬರಿಕಾರ ಆರ್ ಕೆ ನಾರಾಯಣ್ ಅವರ ಸಣ್ಣ ಕಥೆ ಮಾಲ್ಗುಡಿ ಡೇಸ್ ಟಿವಿ ಸೀರಿಯಲ್ ಮರೆಯಲು ಸಾಧ್ಯವಿದೆಯೇ? ಶಂಕರ್ ನಾಗ್ ಅವರು ದಣಿವಿಲ್ಲದೇ ದುಡಿಯುವ ವ್ಯಕ್ತಿಯಾಗಿದ್ದರು. ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಸ್ನೇಹಜೀವಿಯಾಗಿದ್ದರು. ಜಾಗತೀಕರಣ ಕಾಲಿಟ್ಟ ವೇಳೆಯಲ್ಲಿಯೇ ಶಂಕರ್ ನಾಗ್ ರಂಗಭೂಮಿ ಮತ್ತು ಟೆಲಿವಿಷನ್ ಮಾಧ್ಯಮವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರು. ಅದಕ್ಕೊಂದು ಉತ್ತಮ ಉದಾಹರಣೆ ಮಾಲ್ಗುಡಿ ಡೇಸ್ ಧಾರಾವಾಹಿ!
ಅಂದು ಭಾರತದಲ್ಲಿ ಇದ್ದ ಏಕೈಕ ಟೆಲಿವಿಷನ್ ದೂರದರ್ಶನ ಮಾತ್ರ. ಅಂತೂ ದೂರದರ್ಶನ ಕೊಟ್ಟ ಆಫರ್ ಅನ್ನು ಸ್ವೀಕರಿಸಿದ್ದ ಶಂಕರ್ ನಾಗ್ ಮಾಲ್ಗುಡಿ ಡೇಸ್ ಎಂಬ ಅತ್ಯದ್ಭುತ ಟಿವಿ ಧಾರಾವಾಹಿಯನ್ನು ನಿರ್ದೇಶಿಸಿದ್ದರು. ಈ ಸರಣಿಯಲ್ಲಿ ಡಾ.ವಿಷ್ಣುವರ್ಧನ್, ಅನಂತ್ ನಾಗ್ ಕೂಡಾ ನಟಿಸಿದ್ದರು. ಅಷ್ಟೇ ಅಲ್ಲ ಮಾಸ್ಟರ್ ಮಂಜುನಾಥ್ ಪಾತ್ರವಂತು ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಮಾಲ್ಗುಡಿ ಡೇಸ್ ಚಿತ್ರೀಕರಣ ನಡೆದಿದ್ದು ಆಗುಂಬೆಯಲ್ಲಿ. ಈ ಧಾರಾವಾಹಿ ಭಾರತೀಯ ಟೆಲಿವಿಷನ್ ನಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದು ಶಂಕರ್ ನಾಗ್ ಅವರ ಪ್ರತಿಭೆಗೆ ಸಂದ ಗೌರವವಾಗಿದೆ.
ಶಂಕರ್ ನಾಗ್ ದೂರದೃಷ್ಟಿ ಯೋಜನೆಯ ನಟರಾಗಿದ್ದರು!
ಹೌದು ನಟ ಶಂಕರ್ ನಾಗ್ ಕೇವಲ ರಂಗಭೂಮಿ ನಟ, ನಿರ್ದೇಶಕ, ಟಿವಿ ಸೀರಿಯಲ್ ನಿರ್ದೇಶಕ ಮಾತ್ರ ಆಗಿರಲಿಲ್ಲ. ಬೆಂಗಳೂರಿನ ಪ್ರಸಿದ್ಧ ನಂದಿಬೆಟ್ಟಕ್ಕೆ ರೋಪ್ ವೇ ಆಗಬೇಕು, ಜನ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ಟ್ರಾಫಿಕ್ ಜಾಮ್ ಗೆ ಕಡಿವಾಣ ಹಾಕಲು ಮೆಟ್ರೋ ಬೇಕು ಎಂದು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಮನವರಿಕೆ ಮಾಡಿದ್ದರಂತೆ. ಐಟಿ ನಗರವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಲಂಡನ್ ರೀತಿ ಅಂಡರ್ ಗ್ರೌಂಡ್ ರೈಲ್ವೆ ವ್ಯವಸ್ಥೆಯ ಅಗತ್ಯತೆ ಇದೆ ಎಂದಿದ್ದರು.
ಥರ್ಮಲ್ ಪ್ರಾಜೆಕ್ಟ್ ತ್ಯಾಜ್ಯದಿಂದ ಇಟ್ಟಿಗೆ ತಯಾರಿಸೋದು, ಹೆಲಿಕಾಪ್ಟರ್ ನಿಂದ ಎಮರ್ಜೆನ್ಸಿ ರೋಗಿಗಳನ್ನು ಬೆಂಗಳೂರಿಗೆ ಚಿಕಿತ್ಸೆಗಾಗಿ ಕರೆತರಲು ಮೆಡಿಕಲ್ ನೆಟ್ ವರ್ಕ್ ಹುಟ್ಟುಹಾಕಬೇಕು ಎಂಬುದು ಸೇರಿದಂತೆ ಹಲವಾರು ದೂರದೃಷ್ಟಿಯ ಪರಿಕಲ್ಪನೆಯನ್ನು ಶಂಕರ್ ಹೊಂದಿದ್ದರು. ಕನ್ನಡ ಚಿತ್ರರಂಗ ಸಿನಿಮಾ ರೆಕಾರ್ಡಿಂಗ್ ಮಾಡಲು ಮದ್ರಾಸ್ ನ್ನೇ ನೆಚ್ಚಿಕೊಂಡಿತ್ತು. ಇದನ್ನು ಗಮನಿಸಿದ ಶಂಕರ್ ನಮ್ಮವರ ಶ್ರಮದ ಹಣ ನಮಗೇ ಸಿಗಲಿ ಎಂದು ಯೋಚಿಸಿದ್ದರು. ಅದಕ್ಕಾಗಿ ಶಂಕರ್ ನಿರ್ಮಿಸಿದ ಸಂಕೇತ್ ಎಲೆಕ್ಟ್ರಾನಿಕ್ಸ್..ಕರ್ನಾಟಕದ ಮೊದಲ ಎಲೆಕ್ಟ್ರಾನಿಕ್ ರೆಕಾರ್ಡಿಂಗ್ ಸ್ಟುಡಿಯೋ ಎಂಬ ಹೆಗ್ಗಳಿಕೆ ಪಡೆದಿತ್ತು.
ಒಮ್ಮೆ ರಾಮಕೃಷ್ಣ ಹೆಗಡೆಯವರು ಚುನಾವಣಾ ಪ್ರಚಾರಕ್ಕೆಂದು ಕೊಟ್ಟಿದ್ದ ಹಣದಲ್ಲಿ ಪೈಸೆ, ಪೈಸೆಗೂ ಲೆಕ್ಕ ಇಟ್ಟು ಕೊನೆಗೆ ಉಳಿದ ಹಣವನ್ನು ಹೆಗಡೆಯವರಿಗೆ ಶಂಕರ್ ನಾಗ್ ವಾಪಸ್ ಕೊಟ್ಟಿರುವುದಾಗಿ ಪತ್ನಿ ಆರುಂಧತಿ ನಾಗ್ ನೆನಪಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇದು ಶಂಕರ್ ಅವರ ಸರಳ, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಇಂದಿಗೂ ಆಟೋಗಳ ಹಿಂದೆ ಶಂಕರ್ ನಾಗ್ ಅವರ ಫೋಟೋ ರಾರಾಜಿಸುತ್ತೆ. 1978ರಿಂದ 1990ರವರಗಿನ ಕಡಿಮೆ ಅವಧಿಯಲ್ಲಿಯೇ 80ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಜನಾನುರಾಗಿಯಾಗಿದ್ದರು. 1990ರ ಸೆಪ್ಟೆಂಬರ್ 30ರಂದು ದಾವಣಗೆರೆ ಸಮೀಪದ ಆನಗೋಡು ಎಂಬಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಶಂಕರ್ ನಾಗ್ ವಿಧಿವಶರಾಗಿದ್ದರು. ಆದರೆ ಇಂದಿಗೂ ಶಂಕರ್ ನಾಗ್ ಕನ್ನಡ ಚಿತ್ರಪ್ರೇಮಿಗಳ ಹೃದಯದಲ್ಲಿ ಅಜರಾಮರರಾಗಿದ್ದಾರೆ.
*ನಾಗೇಂದ್ರ ತ್ರಾಸಿ