Advertisement

ಚೀನಾದ ಬಿಆರ್‌ಐಗೆ ಭಾರತ ಮತ್ತೆ ತಿರಸ್ಕಾರ

06:00 AM Jun 11, 2018 | |

ಖೀಂಗಾxವೋ: ಐರೋಪ್ಯ ರಾಷ್ಟ್ರಗಳನ್ನು ಏಷ್ಯಾ ರಾಷ್ಟ್ರಗಳೊಂದಿಗೆ ಬೆಸೆಯುವ ಚೀನಾದ ಮಹತ್ವಾ ಕಾಂಕ್ಷಿ ಆರ್ಥಿಕ ಕಾರಿಡಾರ್‌ ಯೋಜನೆ ಯಾದ ಬೆಲ್ಟ್ ಆ್ಯಂಡ್‌ ರೋಡ್‌ (ಬಿಆರ್‌ಐ)ಅನ್ನು ಭಾರತ ಮತ್ತೂಮ್ಮೆ ತಿರಸ್ಕರಿಸಿದೆ.

Advertisement

ಈ ಯೋಜನೆಯಡಿ ಪಾಕ್‌ ಆಕ್ರಮಿತ ಕಾಶ್ಮೀರದ ಮೂಲಕ ರಸ್ತೆ ಹಾದು ಹೋಗುತ್ತದೆ ಎಂಬ ಕಾರಣಕ್ಕೆ ಭಾರತ ಆರಂಭದಿಂದಲೂ ಇದನ್ನು ವಿರೋಧಿಸುತ್ತಲೇ ಬಂದಿದೆ.

ಎಸ್‌ಸಿಒ ಶೃಂಗದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಬೃಹತ್‌ ಸಂಪರ್ಕ ಯೋಜನೆಗಳು ದೇಶದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯಬೇಕು. ಈ ಅಂಶಗಳನ್ನು ಒಳಗೊಂಡಿರುವ ಯಾವುದೇ ಯೋಜನೆಗೆ ಭಾರತ ಬೆಂಬಲಿಸುತ್ತದೆ ಎಂದು ಚೀನಾಕ್ಕೆ ಟಾಂಗ್‌ ನೀಡಿದ್ದಾರೆ.

ಶಾಂಘೈ ಸಹಕಾರ ಸಂಘಟನೆಯ (ಎಸ್‌ ಸಿಒ) ಸಮ್ಮೇಳನದಲ್ಲಿ ಈ ಯೋಜನೆಯನ್ನು ಒಪ್ಪಿಕೊಳ್ಳದೇ ಇರುವ ದಿಟ್ಟ ನಿರ್ಧಾರ ಕೈಗೊಂಡಿದ್ದು ಭಾರತ ಮಾತ್ರ. ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಕೈಗೊಂಡ ನಿಲುವಳಿಯಲ್ಲಿ ರಷ್ಯಾ, ಪಾಕ್‌ ಸಹಿತ ಹಲವು ದೇಶಗಳು ಬಿಆರ್‌ಐಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಚೀನಾ ಒಟ್ಟು 80 ದೇಶ ಹಾಗೂ ಸಂಸ್ಥೆಗಳ ಜೊತೆಗೆ ಸಹಭಾಗಿತ್ವ ಸಾಧಿಸಿದೆ. ಈ ಯೋಜನೆಗೆ 32 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ.

Advertisement

ಭಯೋತ್ಪಾದನೆ ತಡೆಗಾಗಿ ಯುವಕರಿಗೆ ಶಿಕ್ಷಣ: ಭಯೋತ್ಪಾದನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯುವಕರಿಗೆ ಸಾಮಾನ್ಯ ಶಿಕ್ಷಣದ ಜೊತೆಗೆ ಧಾರ್ಮಿಕ ಹಾಗೂ ನೈತಿಕ ಶಿಕ್ಷಣವನ್ನು ಒದಗಿಸಲು ಕಾರ್ಯಕ್ರಮ ರೂಪಿಸಲು ಎಸ್‌ಸಿಒ ಸದಸ್ಯ ರಾಷ್ಟ್ರಗಳು ಸಮ್ಮತಿಸಿವೆ. ಈ ಸಂಬಂಧ ಖೀಂಗಾxವೋ ಘೋಷಣೆಗೆ ಸಹಿ ಹಾಕಿವೆ. ಈ ಪ್ರಸ್ತಾಪವನ್ನು 2017ರಲ್ಲಿ ಉಜ್ಬೆಕಿಸ್ತಾನದ ಅಧ್ಯಕ್ಷ ಶೌಕತ್‌ ಮಿರ್ಜಿಯೋಯೆವ್‌ ಮಂಡಿಸಿದ್ದರು.

3 ದೇಶಗಳ ಮುಖ್ಯಸ್ಥರ ಭೇಟಿ: ಎಸ್‌ಸಿಒ ಸಮ್ಮೇಳನದ ವೇಳೆ ಪ್ರಧಾನಿ ಮೋದಿ ಮೂರು ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ. ಕಜಕಿಸ್ತಾನ, ಕಿರ್ಗಿಸ್ತಾನ ಮತ್ತು ಮಂಗೋಲಿಯಾದ ಅಧ್ಯಕ್ಷರನ್ನು ಭೇಟಿ ಮಾಡಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.

ಶೃಂಗದ ನಿರ್ಣಯ
– ಉಗ್ರವಾದ, ಪ್ರತ್ಯೇಕತಾವಾದ, ತೀವ್ರವಾದದ ವಿರುದ್ಧ ಸಮರಕ್ಕೆ ವಿಶ್ವಸಂಸ್ಥೆ ಸಹಭಾಗಿತ್ವದಲ್ಲಿ ಏಕೀಕೃತ
ಜಾಗತಿಕ ಉಗ್ರ ನಿಗ್ರಹ ಸಂಸ್ಥೆ ಸ್ಥಾಪನೆ
– ಉಗ್ರ ಸಿದ್ಧಾಂತವು ಪಸರಿಸದಂತೆ ತಡೆಯಲು ಕ್ರಮ
– ಪ್ರತ್ಯೇಕವಾದದ ಸಿದ್ಧಾಂತದತ್ತ ಆಕರ್ಷಣೆಗೊಳಗಾಗದಂತೆ ಯುವಜನತೆಗೆ ಕರೆ ನೀಡುವುದು
– ಉಗ್ರರ ಚಲನವಲನ ಕುರಿತು ಪರಸ್ಪರ ಮಾಹಿತಿ ವಿನಿಮಯ

ಮೋದಿ ಹೇಳಿದ್ದೇನು?
– ನಾಗರಿಕರು, ಆರ್ಥಿಕ ಅಭಿವೃದ್ಧಿ, ಸಂಪರ್ಕ, ಸಮಗ್ರತೆ, ಗೌರವ ಹಾಗೂ ಪರಿಸರ ರಕ್ಷಣೆಯನ್ನು ಒಳಗೊಂಡ ಸುಭದ್ರತೆ ಅಗತ್ಯ 
– ಸಂಪರ್ಕ ಎಂಬುದು ಕೇವಲ ಭೌತಿಕವಾದದ್ದಲ್ಲ. ಮಾನವೀಯ ಸಂಪರ್ಕವೂ ಅತ್ಯಂತ ಅಗತ್ಯ
– ಎಸ್‌ಸಿ ಗುರಿಗಳನ್ನು ನಿಗದಿಗೊಳಿಸಬೇಕು ಮತ್ತು ಅದನ್ನು ಸಾಧಿಸಲು ಸಣ್ಣ ಸಮಿತಿಗಳನ್ನು ರಚಿಸಿ ರೂಪುರೇಷೆ ನಿಗದಿಗೊಳಿಸಬೇಕು 
– ಭಾರತದಲ್ಲಿ ಶೀಘ್ರ ಎಸ್‌ಸಿಒ ಆಹಾರ ಮೇಳ ಮತ್ತು ಬೌದ್ಧ ಪರಂಪರೆಯ ಸಮಗ್ರ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ
– ಭಾರತಕ್ಕೆ ಎಸ್‌ಸಿಒ ದೇಶಗಳಿಂದ ಆಗಮಿಸುವ ಪ್ರವಾಸಿಗರ ಪ್ರಮಾಣ ಶೇ. 6ರಷ್ಟು ಮಾತ್ರ, ಇದು ದ್ವಿಗುಣಗೊಳ್ಳುವ ಅವಕಾಶ ಹೊಂದಿದೆ. 

ನೆರೆ ದೇಶಗಳ ಜತೆ ಸಂಪರ್ಕ ಸಾಧಿಸುವುದು ಭಾರತದ ಪ್ರಥಮ ಆದ್ಯತೆ. ಸುಸ್ಥಿರ ಮತ್ತು ದಕ್ಷ ಸಂಪರ್ಕ
ಯೋಜನೆಗಳನ್ನು ನಾವು ಸ್ವಾಗತಿಸುತ್ತೇವೆ. ಇವು ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನೂ
ಗೌರವಿಸಬೇಕು

–  ನರೇಂದ್ರ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next