Advertisement

ವಿ.ಐ.ಪಿ ಸಂಸ್ಕೃತಿಯಿಂದ ಹೊರಬಂದು ಉತ್ಸವ ಆಚರಿಸಿ:ಶಂಕರ್‌ ಶೆಟ್ಟಿ

02:27 PM Mar 13, 2018 | Team Udayavani |

ಮುಂಬಯಿ: ಹವಾನಿಯಂತ್ರಿತ, ವಿಶಾಲ ಸಭಾಗೃಹಗಳು ಕೇವಲ ಆಹ್ವಾನಿತರಿಗೆ, ಅತಿಥಿ ಗಣ್ಯರಿಗೆ ಮೀಸಲಿಡುವುದರಿಂದ ಜನಸಾಮಾನ್ಯರಿಗೆ ಇಚ್ಛೆ ಇದ್ದರೂ ಪಾಲ್ಗೊಳ್ಳುವಿಕೆ ಅಸಾಧ್ಯವಾಗಿರುತ್ತದೆ. ಇಂತಹ ವಿ.ಐ.ಪಿ ಸಂಸ್ಕೃತಿಯಿಂದ ಹೊರಬಂದು ಆಯಾಯ ಸ್ಥಳಗಳ ಮಂದಿರ, ಸಂಘ ಸಂಸ್ಥೆಗಳ ಕಚೇರಿಗಳ ಸಮೀಪದ ಮೈದಾನದಲ್ಲಿ ವಿವಿಧ ಕಲಾವೈಭವಗಳು, ಆಧ್ಯಾತ್ಮಿಕ, ಧಾರ್ಮಿಕ , ಸಾಂಸ್ಕೃತಿಕ ಸಮಾರಂಭಗಳನ್ನು ಆಯೋಜಿಸಿ ಸಮಾನತೆಯ ಉತ್ಸವವನ್ನು ಆಚರಿಸಬೇಕೆಂದು ಛತ್ರಪತಿ ಶಿವಾಜಿ ಮಹಾರಾಜ್‌ ಸಾಧನಾ ಪುರಸ್ಕಾರ ವಿಜೇತ, ಸಮಾಜ ಸೇವಕ ವಿರಾರ್‌ ಶಂಕರ್‌ ಶೆಟ್ಟಿ ನುಡಿದರು.

Advertisement

ಮಾ.10ರಂದು ದಹಿಸರ್‌ ಪೂರ್ವದ ರಾವಲ್ಪಾಡ ರಾಧಾಕೃಷ್ಣ ನಗರದಲ್ಲಿರುವ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದ 18ನೇ ವಾರ್ಷಿಕ ಮಹಾಪೂಜೆಯ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಕ್ಕಟ್ಟಾದ ಸ್ಥಳದಲ್ಲಿ ಚಾಳ್‌ ಸಂಸ್ಕೃತಿಯಲ್ಲಿ ಮನುಷ್ಯತ್ವ ಜೀವಂತವಾಗಿದೆ ಎಂಬುದಕ್ಕೆ ಇಲ್ಲಿನ ಜನರು ಸಾಕ್ಷಿಯಾಗಿದ್ದಾರೆ. ದೇವಸ್ಥಾನಗಳು ಊರಿನ ಅಭಿವೃದ್ಧಿಯ ತಾಣವಾಗಿವೆ. ಒಬ್ಬರಿಗೊಬ್ಬರು ಅರಿತು ಬಾಳುವ ಸಂಸ್ಕಾರ ನಮ್ಮದಾಗಿದೆ ಎಂಬುದನ್ನು ಇಂದಿನ ಬೃಹತ್‌ ಜನಸಮೂಹವು ಸ್ಪಷ್ಟಪಡಿಸಿದೆ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಹಾರಾಷ್ಟ್ರ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್‌ ಬಿ. ಶೆಟ್ಟಿ ಮಾತನಾಡಿ, ಪೌರಾಣಿಕ ಕಥೆಗಳು ಉತ್ತಮ ಸಂದೇಶಗಳ ಆಗರವಾಗಿದೆ. ಇದರ ಅನುಷ್ಠಾನ ನಮ್ಮೆಲ್ಲರ ಕರ್ತವ್ಯವಾಗಿದೆ. ಭಗವಂತನಲ್ಲಿ ವಿಶ್ವಾಸ, ಭರವಸೆ ಇಡುವಂತೆ ತಮ್ಮಲ್ಲಿರುವ ಆತ್ಮಸ್ಥೆರ್ಯವನ್ನು ವೃದ್ಧಿಸಿ ಬದುಕಿನಲ್ಲಿ ಯಶಸ್ಸನ್ನು ಕಾಣಬೇಕೆಂದರು.

ಸಂಘಟಕ, ಕಲಾಪೋಷಕ ರಂಗಪ್ಪ ಗೌಡ ಮಾತನಾಡಿ, ನಮ್ಮ ಆಚಾರ ವಿಚಾರ ವಿಚಾರಗಳು ಉತ್ತಮ ಸನ್ಮಾರ್ಗದಿಂದ ಕೂಡಿರಬೇಕು. ದೇವಸ್ಥಾನಕ್ಕಿಂತಲೂ ಆಂತರಿಕ ಮನಸ್ಸು ವಿಶಾಲವಾಗಿರಲು ಪ್ರಯತ್ನಿಸಬೇಕು. ದೇವಸ್ಥಾನಗಳು ಜನಸಾಮಾನ್ಯರನ್ನು ಒಗ್ಗೂಡಿಸುವ ತಾಣವಾಗಲಿದೆ ಎಂದು ನುಡಿದರು.

ಸಮ್ಮಾನ ಸಮಾರಂಭದಲ್ಲಿ ಮಂದಿರದ ಮಾಜಿ ಉಪಾಧ್ಯಕ್ಷ ಶೇಖರ ಶೆಟ್ಟಿ ದಂಪತಿ ಮತ್ತು ಪ್ರಧಾನ ಅರ್ಚಕ ಚೆನ್ನಪ್ಪ ಪೂಜಾರಿ ಅವರನ್ನು ವೇದಿಕೆಯ ಗಣ್ಯರು ಸಮ್ನಾನಿಸಿದರು.

Advertisement

ಮಂದಿರದ ಅಧ್ಯಕ್ಷ ಕೃಷ್ಣ ಎಂ. ಶೆಟ್ಟಿ, ಕಾರ್ಯದರ್ಶಿ ಸುರೇಶ್‌ ಮೊಗವೀರ, ಜೊತೆ ಕಾರ್ಯದರ್ಶಿ ಸುಕೇಶ್‌ ಶೆಟ್ಟಿ, ಕೋಶಾಧಿಕಾರಿ ಸುರೇಶ್‌ ಎಲ್‌. ಸುವರ್ಣ, ದೇವಿ ಪಾತ್ರಿ ರೋಹಿತ್‌ ಪೂಜಾರಿ, ಭುವಾಜಿ ಪ್ರಸಾದ್‌ ಸಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಂದಾ ಶೆಟ್ಟಿ ಇವರು ಗಣ್ಯರನ್ನು ಗೌರವಿಸಿದರು.ವಿಠಲ್‌ ಪ್ರಭು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಬೆಳಗ್ಗೆ ಸಾಂತಿಂಜ ಜನಾರ್ಧನ ಭಟ್‌ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ಶ್ರೀ ಅಯ್ಯಪ್ಪ ಭಕ್ತ ವೃಂದ ಸಾರ್‌ಗಾಂ ಅಂಧೇರಿಯ ಅಜೀತ್‌ ಬೆಳ್ಮಣ್‌ ಅವರ ಪ್ರಾಯೋಜಕತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಸಾಕಿನಾಕ ಇದರ ಕಲಾವಿದರಿಂದ ಮಾಯದ ಮಾಣಿ ಬಯಲಾಟ ಪ್ರದರ್ಶನಗೊಂಡಿತು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ತುಳು ಕನ್ನಡಿಗರು ರಾಜಕೀಯ ನೇತಾರರು, ಸಂಘ ಸಂಸ್ಥೆಗಳು ಪ್ರತಿನಿಧಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಚಿತ್ರ,ವರದಿ:ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next