ಹೊಸದಿಲ್ಲಿ: ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ವೇಗಿ ಮೊಹಮ್ಮದ್ ಶಮಿ ಅವರು ಅತ್ಯದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಮೊದಲ ನಾಲ್ಕು ಪಂದ್ಯಗಳಲ್ಲಿ ಆಡದ ಹೊರತಾಗಿಯೂ ಶಮಿ ಅವರು ಕೂಟದಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್ ಆಗಿ ಮೂಡಿಬಂದಿದ್ದರು. ಆದರೆ ಅವರು ಇಂಜೆಕ್ಷನ್ ಪಡೆದು ಆಡುತ್ತಿದ್ದರು ಎಂದು ಇದೀಗ ತಿಳಿದು ಬಂದಿದೆ.
ದೀರ್ಘಕಾಲದ ಹಿಮ್ಮಡಿ ನೋವಿನ ನಡುವೆಯೆ ಮೊಹಮ್ಮದ್ ಶಮಿ ಅವರು ಸಂಪೂರ್ಣ ವಿಶ್ವಕಪ್ ಆಡಿದ್ದರು ಎಂದು ಪಿಟಿಐ ವರದಿಯಾಗಿದೆ.
“ಶಮಿ ದೀರ್ಘಕಾಲದ ಎಡ ಹಿಮ್ಮಡಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ವಿಶ್ವಕಪ್ ನಲ್ಲಿ ನಿಯಮಿತವಾಗಿ ಚುಚ್ಚುಮದ್ದನ್ನು ತೆಗೆದುಕೊಂಡಿದ್ದರು. ನೋವಿನಿಂದ ಇಡೀ ಪಂದ್ಯಾವಳಿಯನ್ನು ಆಡಿದರು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ” ಎಂದು ಶಮಿ ಅವರ ಪರಿಸ್ಥಿತಿಯನ್ನು ತಿಳಿದ ಬಂಗಾಳದ ಮಾಜಿ ತಂಡದ ಸಹ ಆಟಗಾರ ಪಿಟಿಐಗೆ ತಿಳಿಸಿದ್ದಾರೆ.
“ಆದರೆ ನೀವು ವಯಸ್ಸಾದಂತೆ, ಪ್ರತಿ ನಿಗಲ್ ಅಥವಾ ದೊಡ್ಡ ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು” ಎಂದು ಅವರು ಹೇಳಿದರು.
ಶಮಿ ಅವರು ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಏಳು ಪಂದ್ಯಗಳಲ್ಲಿ ಆಡಿ 24 ವಿಕೆಟ್ ಪಡೆದಿದ್ದರು. 5.26ರ ಏಕಾನಮಿಯಲ್ಲಿ ಶಮಿ ಸಾಧನೆ ಮಾಡಿದ್ದರು.
ಗಾಯದ ಕಾರಣದಿಂದ ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡಿಲ್ಲ. ಟೆಸ್ಟ್ ಸರಣಿಗೆ ಶಮಿ ಆಯ್ಕೆಯಾಗಿದ್ದರೂ, ಚೇತರಿಸಿಕೊಳ್ಳದ ಕಾರಣ ಅವರು ಹಿಂದುಳಿದರು. ಅವರ ಬದಲಿಗೆ ಆವೇಶ್ ಖಾನ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.