Advertisement

ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ

10:50 AM Dec 05, 2017 | |

ಚಿಂಚೋಳಿ: ತಾಲೂಕಿನ ಗಾರಂಪಳ್ಳಿಯಲ್ಲಿ ರವಿವಾರ ರಾತ್ರಿ ಕಿಡಿಗೇಡಿಗಳು ಡಾ| ಬಿ.ಆರ್‌. ಅಂಬೇಡ್ಕರ ಅವರ ಭಾವಚಿತ್ರವುಳ್ಳ ಫಲಕ್ಕೆ ಅವಮಾನಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.

Advertisement

ಘಟನೆ ಸುದ್ದಿ ಕೇಳಿದ ತಾಲೂಕು ದಲಿತ ಮುಖಂಡರಾದ ಮಾರುತಿ ಗಂಜಗಿರಾ, ಅಮರ ಲೊಡನೋರ, ಜಗದೇವ ಗೌತಮ, ಪಾಂಡುರಂಗ ಲೊಡನೋರ, ವಾಮನರಾವ ಕೊರವಿ, ಶಿವಯೋಗಿ ರುಸ್ತಂಪುರ, ಗೌತಮ ಬೊಮ್ಮನಳ್ಳಿ, ಸಂತೋಷ ಗುತ್ತೇದಾರ, ರುದ್ರಮುನಿ ರಾಮತೀರ್ಥಕರ, ಭರತ ಬುಳ್ಳ, ಸೋಮಶೇಖರ ಬೆಡಕಪಳ್ಳಿ, ಆನಂದ ಟೈಗರ್‌ ಸೋಮವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

ಕಳೆದ ವರ್ಷ ಡಿ. 24ರಂದು ಸಹ ಇದೇ ರೀತಿ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೂ ಆ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಅಮರಲೊಡನೋರ ಆರೋಪಿಸಿದರು.

ಚಿಂಚೋಳಿ ಸಿಪಿಐ ಇಸ್ಮಾಯಿಲ್‌ ಶರೀಫ್‌, ಪಿಎಸ್‌ಐ ಸುರೇಶಕುಮಾರ ಚವ್ಹಾಣ, ಮಿರಿಯಾಣ ಪಿಎಸ್‌ಐ ಎ.ಎಸ್‌. ಪಟೇಲ್‌ ಗ್ರಾಮಕ್ಕೆ ಭೇಟಿ ನೀಡಿ ದಲಿತ ಮುಖಂಡರ ಮನವೊಲಿಸಿದರು. ಆದರೆ ಆರೋಪಿಗಳನ್ನು ಬಂಧಿಸುವರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯಲ್ಲ ಎಂದು ಪಟ್ಟು ಹಿಡಿದಾಗ ಸಿಪಿಐ ಇಸ್ಮಾಯಿಲ್‌ ಶರೀಫ್‌ಮಾತನಾಡಿ, ಆರೋಪಿಗಳ
ಪತ್ತೆ ಹಚ್ಚಲು ಕಲಬುರಗಿಯಿಂದ ಶ್ವಾನದಳ ಕರೆಯಿಸಲಾಗಿದೆ. ಆರೋಪಿಗಳನ್ನ ಬಂಧಿಸಿ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಧ್ಯಾಹ್ನ 12:00ರ ಸುಮಾರಿಗೆ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿ(ಚಿಮ್ಮಾಇದಲಾಯಿ) ಕ್ರಾಸ್‌‌ನಲ್ಲಿ ಎರಡು ತಾಸು ರಸ್ತೆ ತಡೆ ನಡೆಸಿದರು. ಇದರಿಂದಾಗಿ ಕಲಬುರಗಿ ಸೇಡಂ, ಹುವåನಾಬಾದಗೆ ಸಂಚರಿಸುವ ವಾಹನಗಳು ಹಾಗೂ ಪ್ರಯಾಣಿಕರು ಪರದಾಟ ಮಾಡಬೇಕಾಯಿತು.

Advertisement

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಗ್ರೇಡ್‌ -2 ತಹಶೀಲ್ದಾರ ಮಾಣಿಕರಾವ, ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಭರವಸೆ ನೀಡಿದ ನಂತರ ರಸ್ತೆ ತಡೆ ಹಿಂದಕ್ಕೆ ಪಡೆದುಕೊಳ್ಳಲಾಯಿತು.
ಘಟನೆ ಖಂಡಿಸಿ ಡಿ.5ರಂದು ಚಿಂಚೋಳಿ ಪಟ್ಟಣದ ಬಂದ್‌ ಕರೆ ನೀಡಲಾಗಿದೆ ಎಂದು ದಲಿತ ಮುಖಂಡ ಮಾರುತಿ ಗಂಜಗಿರಿ ತಿಳಿಸಿದ್ದಾರೆ. 

ಓರ್ವ ವಶಕ್ಕೆ 
ಘಟನೆಗೆ ಸಂಬಂಧಿಸಿದಂತೆ ಗಾರಂಪಳ್ಳಿಯ ಒಬ್ಬನನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಿರಯಾಣ ಪಿಎಸ್‌ಐ ಎ. ಎಸ್‌.ಪಟೇಲ್‌ ತಿಳಿಸಿದ್ದಾರೆ.

ಖಂಡನೀಯ
ಚಿಂಚೋಳಿ: ತಾಲೂಕಿನ ಗಾರಂಪಳ್ಳಿಯಲ್ಲಿಡಾ|ಬಿ.ಆರ್‌. ಅಂಬೇಡ್ಕರ ಅವರ ಭಾವಚಿತ್ರವುಳ್ಳ ಫಲಕ ಅವಮಾನ
ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ತಿಳಿಸಿದ್ದಾರೆ. 

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲಿಸಿದ್ದಾರೆ. ಈಗಾಗಲೇ ಜಿಲ್ಲಾ ಪೊಲೀಸರಿಗೆ ವಿಷಯ ತಿಳಿಸಿದ್ದು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಕೊಳ್ಳುವಂತೆ ಸೂಚಿಸಲಾಗಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಕೆಲವು ಕಿಡಿಗೇಡಿಗಳು ಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುತ್ತಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next