Advertisement

ಬೇಸಗೆ ಮುನ್ನವೇ ಬತ್ತಿಹೋದ ಶಾಂಭವಿ ನದಿ

03:31 PM Oct 31, 2018 | |

ಬೆಳ್ಮಣ್‌ : ಮುಂಡ್ಕೂರು- ಸಂಕಲಕರಿಯ-ಕಡಂದಲೆ ಭಾಗದ ಕೃಷಿಕರ ಪಾಲಿನ ಪ್ರಮುಖ ಜಲಮೂಲ ಇದೀಗ ಬೇಸಗೆ ಮುನ್ನವೇ ಬತ್ತಿ ಹೋಗಿದೆ. ಸಾಮಾನ್ಯವಾಗಿ ಡಿಸೆಂಬರ್‌ ಕೊನೆಯವರೆಗೂ ಕೃಷಿಭೂಮಿಗಳಿಗೆ ನೀರುಣಿಸುತ್ತಿದ್ದ ನಂದಿನಿ ನದಿ ಬತ್ತಿ ಹೋಗಿರುವುದರಿಂದ ಕೃಷಿಕರಲ್ಲಿ ಆತಂಕ ಮನೆ ಮಾಡಿದೆ.

Advertisement

ಮಳೆಯ ಪ್ರಮಾಣ ಕಡಿಮೆಯಾದ ಕೂಡಲೇ ಜಲ ಬತ್ತಿಹೋಗಿದ್ದು, ಈಗ ನದಿಯಲ್ಲಿ ಮರಳು ಕಾಣುತ್ತಿದೆ. ನದಿ ಬತ್ತಿದ್ದರಿಂದ ಈ ಭಾಗದ ಬಾವಿಗಳ ನೀರಿನ ಪ್ರಮಾಣವೂ ಏಕಾಏಕಿಯಾಗಿ ಕಡಿಮೆಯಾಗಿದ್ದು ಜಲಕ್ಷಾಮದ ಭೀತಿ ಎದುರಾಗಿದೆ. ಕಾರ್ಕಳದ ಸಾಣೂರು, ಬೋಳ, ಸಚ್ಚೇರಿಪೇಟೆ, ಸಂಕಲಕರಿಯ, ಮುಂಡ್ಕೂರು, ಪಲಿಮಾರು ಭಾಗದಲ್ಲಿ ಹರಿದು ಅರಬ್ಬೀ ಸಮುದ್ರ ಸೇರುವ ಶಾಂಭವಿ ನದಿ ಬಹುಬೇಗನೆ ಬತ್ತಿ ಹೋಗಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.

ಅಣೆಕಟ್ಟುಗಳಲ್ಲೂ ನೀರಿಲ್ಲ
ಈಗಾಗಲೇ ಶಾಂಭವಿ ನದಿಗೆ ಬೋಳ, ಪಾಲಿಂಗೇರಿ, ಸಚ್ಚೇರಿಪೇಟೆ, ಸಂಕಲಕರಿಯ , ಹೀಗೆ ಅನೇಕ ಕಡೆಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದರೂ ಯಾವುದೇ ಅಣೆಕಟ್ಟು ಪ್ರದೇಶದಲ್ಲಿಯೂ ಬೇಕಾದಷ್ಟು ನೀರಿಲ್ಲ. ಮಾರ್ಚ್‌ ಎಪ್ರಿಲ್‌ ತಿಂಗಳಲ್ಲಿ ಅಣೆಕಟ್ಟಿಗೆ ಹಲಗೆ ಹಾಕುವ ಕೃಷಿಕರು ನವೆಂಬರ್‌ನಲ್ಲೇ ಇದಕ್ಕೆ ತಯಾರಿ ನಡೆಸುವಂತಾಗಿದೆ.

ಸಂಕಲಕರಿಯದಲ್ಲಿ ಸಾಮಾಜಿಕ ಕಳಕಳಿಯ ಯುವಕ ಸುಧಾಕರ ಸಾಲ್ಯಾನ್‌ ಶ್ರಮ ವಹಿಸಿ ಊರಿನವರು, ಕೃಷಿಕರ ನೆರವಿನಿಂದ ಅಣೆಕಟ್ಟಿನ ನಿರ್ವಹಣೆ ಮಾಡುತ್ತಿದ್ದರು. ಈ ಹಿಂದೆ ಅಣೆಕಟ್ಟಿಗೆ ಹಲಗೆ ಹಾಕುವ ಮೂಲಕ ಸುಮಾರು 20 ಕಿ.ಮೀ.ವ್ಯಾಪ್ತಿಯವರೆಗೆ ನದಿ ನೀರು ನಿಲ್ಲುವಂತೆ ಮಾಡಿದ್ದರು. ಆದರೆ ಈಗಲೇ ನೀರು ಬತ್ತಿರುವುದರಿಂದ ರೈತರು ದಿಕ್ಕೇ ತೋಚದಂತಾಗಿದ್ದಾರೆ.

ಪಂಚಾಯತ್‌ ಆಡಳಿತ ಅಲರ್ಟ್‌ ಆಗಬೇಕು
ಈಗಾಗಲೇ ಜಲಕ್ಷಾಮದ ಬಗ್ಗೆ ಪ್ರತಿಯೊಂದು ಪಂಚಾಯತ್‌ಗಳೂ ಹೈ ಅಲರ್ಟ್‌ ಆಗುವ ಪರಿಸ್ಥಿತಿ ಎದುರಾಗಿದೆ. ಮುಂಡ್ಕೂರು ಗ್ರಾಮ ಪಂಚಾಯತ್‌ನಲ್ಲಿ ಯಶಸ್ವಿ ಸ್ವಜಲಧಾರಾ ಯೋಜನೆಯ ಮೂಲಕ ಜಾರಿಗೆಕಟ್ಟೆ ಅಲಂಗಾರು ಬಳಿ ನದಿಯಲ್ಲಿ ಬೃಹತ್‌ ಬಾವಿ ತೋಡಲಾಗಿ ಇಡೀ ಪಂಚಾಯತ್‌ ವ್ಯಾಪ್ತಿಗೆ ನೀರುಣಿಸಲಾಗುತ್ತಿದೆ.

Advertisement

ಆದರೆ ಈ ಬಾರಿ ಬಹುಬೇಗನೇ ಬತ್ತಿದ ನದಿಯ ನೀರಿನ ಪ್ರಮಾಣದಿಂದ ಈ ಭಾಗದ ಜನರು ಹಾಗೂ ಪಂಚಾಯತ್‌ ನೀರಿನ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವ ಅನಿವಾರ್ಯತೆ ಎದುರಾಗಿದೆ. ಐಕಳ, ಪಾಲಡ್ಕ, ಮುಂಡ್ಕೂರು ಗ್ರಾಮ ಪಂಚಾಯತ್‌ ಆಡಳಿತ ಕೂಡ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. 

ನೀರಿನ ಮಿತ ಬಳಕೆ ಪರಿಹಾರ
ನದಿಯಲ್ಲಿ ನೀರಿನ ಕೊರತೆ ತೀವ್ರವಾಗಿರುವುದರಿಂದ ನೀರು ಮಿತವಾಗಿ ಬಳಸಬೇಕಾಗಿದೆ. ಕಿಂಡಿ ಆಣೆಕಟ್ಟುಗಳ ನಿರ್ವಹಣೆಯ ಜೊತೆಗೆ, ಅಣೆಕಟ್ಟೆಗೆ ಈಗಲೇ ಹಲಗೆ ಹಾಕಿ ನೀರು ಶೇಖರಿಸಿಡುವುದು ಸದ್ಯದ ಪರಿಹಾರವಾಗಿದೆ. 

ನೀರು ಅಲಭ್ಯತೆಯ ಮುನ್ಸೂಚನೆ
ಭಾರೀ ಬಿಸಿಲ ಬೇಗೆಯಿಂದ ನದಿ ನೀರು ಸಂಪೂರ್ಣ ಬತ್ತಿದೆ. ಹೀಗಾಗಿ ಕೃಷಿಗೆ ತುಂಬಾ ತೊಂದರೆ ಯಾಗಲಿದೆ ಹಾಗೂ ಕುಡಿಯುವ ನೀರಿಗೂ ಸಮಸ್ಯೆ ಬರಲಿದೆ.
-ಅಶೋಕ ಶೆಟ್ಟಿ ಕಂಡಿಗ, ಕೃಷಿಕರು

ಇಲಾಖೆ ಎಚ್ಚೆತ್ತುಕೊಳ್ಳಲಿ
ನೀರಿನ ಮಿತ ಬಳಕೆ ಮಾಡಬೇಕು. ನದಿ ನೀರು ಬಹುಬೇಗನೇ ಬತ್ತಿ ಹೋಗುತ್ತಿದ್ದು ಹೀಗೇ ಮುಂದುವರಿದಲ್ಲಿ ನೀರಿಗಾಗಿ ನಾವು ಪರದಾಟ ನಡೆಸುವಂತಾಗುತ್ತದೆ. ಸಣ್ಣ ನೀರಾವರಿ ಇಲಾಖೆ ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ.
-ಸುಧಾಕರ್‌ ಸಾಲ್ಯಾನ್‌,
ಐಕಳ ಗ್ರಾ.ಪಂ. ಸದಸ್ಯ

ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next