ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಪಕ್ಷದ ಟಿಕೆಟ್ ದೊರೆತಿದ್ದರೂ, ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆಂದು ತಿಳಿದು ಬಂದಿದೆ. ಆದರೂ, ಪಕ್ಷದ ನಾಯಕರು ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ.
ಮಾಜಿ ಸಚಿವ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಪಕ್ಷದ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಮಲ್ಲಿಕಾರ್ಜುನ್ ಅವರು ಸ್ಪರ್ಧೆಗೆ ಹಿಂದೇಟು ಹಾಕಿದ್ದರು.
ಆದರೆ, ದಾವಣಗೆರೆಯಲ್ಲಿ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ವಿರುದ್ಧ ಸ್ಪರ್ಧೆಗೆ ಪ್ರಬಲ ಅಭ್ಯರ್ಥಿ ದೊರೆಯದ ಕಾರಣ ಶಾಮನೂರು ಶಿವಶಂಕರಪ್ಪ ಅವರನ್ನು ಕೇಳದೆಯೇ ಪಕ್ಷ ಅವರ ಹೆಸರನ್ನು ಅಧಿಕೃವಾಗಿ ಪ್ರಕಟ ಮಾಡಿದೆ.
ಆದರೆ, ಶಾಮನೂರು ಶಿವಶಂಕರಪ್ಪ ಅವರು ತಮಗೆ ಚುನಾವಣೆಯಲ್ಲಿ ಓಡಾಡಲು ಸಾಧ್ಯವಾಗದ ಕಾರಣ ತಮ್ಮ ಪುತ್ರ ಮಲ್ಲಿಕಾರ್ಜುನ್‌ಗೆ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯ ನಾಯಕರಿಗೆ ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಮಲ್ಲಿಕಾರ್ಜುನ್ ಸ್ಪರ್ಧೆ ಮಾಡಿದರೂ ಗೆಲುವು ಕಷ್ಟ ಎಂಬ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಶಾಮನೂರು ಅವರನ್ನೇ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದ್ದು, ಒಂದು ವೇಳೆ ತಾವು ಸ್ಪರ್ಧಿಸಲು ಸಾಧ್ಯವಿಲ್ಲವೆಂದಾದರೆ,
-ನೀವೇ ಸೂಕ್ತ ಅಭ್ಯರ್ಥಿಯನ್ನು ಸೂಚಿಸಿ ಎಂದು ರಾಜ್ಯ ನಾಯಕರು ಶಾಮನೂರು ಶಿವಶಂಕರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಂಜುನಾಥ್ ಅವರ ಹೆಸರು ಚಾಲ್ತಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.