Advertisement
ಈಕೆಯ ಹೆಸರು ಶಾಲಿನಿ ಸರಸ್ವತಿ, ಈಗ 39 ವರ್ಷ. 5 ವರ್ಷದ ಹಿಂದೆ ಗರ್ಭಿಣಿಯಾಗಿದ್ದಾಗ ದೇಹಕ್ಕೆ ಸೇರಿದ ಬ್ಯಾಕ್ಟೀರಿಯಾ ದಾಳಿಗೊಳಗಾಗಿ ಎರಡೂ ಕೈಗಳು ಕಿತ್ತುಕೊಂಡು ಹೋದವು. ಅದು ಸಾಲದೆನ್ನುವಂತೆ ಎರಡೂ ಕಾಲುಗಳು ಮಂಡಿಯಿಂದ ಕೆಳಗೆ ಮುರಿದು ಹೋದವು. ಇಂಥ ದುರ್ಭರ ಗಳಿಗೆಯನ್ನು ಎದುರಿಸಿದ ಶಾಲಿನಿ ಬದುಕಿನ ಮರಳುಗಾಡಿನಲ್ಲಿ ಸಸಿಯೊಂದು ಚಿಗುರೊಡೆದು ಬಲಿಷ್ಠವಾಗುವಂತೆ ಮಾಡಿದರು.Related Articles
ಪುನರ್ಜನ್ಮ ಕಥೆಯಿದು: ಅಕ್ಷರಶಃ ಸಾವನ್ನು ಗೆದ್ದು ಪುನರ್ಜನ್ಮ ಪಡೆದ ಕಥೆಯನ್ನು ಸ್ವತಃಶಾಲಿನಿಯೇ “ಉದಯವಾಣಿ’ಯೆದುರು ತೆರೆದಿಟ್ಟರು. ಅದರ ನಿರೂಪಣೆ ಇಲ್ಲಿದೆ…
Advertisement
“ಮೂಲತಃ ನಾನು ಕೇರಳದವಳು. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದೇವೆ. ನನಗೀಗ 39 ವರ್ಷ. ಸದ್ಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದೇನೆ. 2012ಕ್ಕೂ ಮೊದಲು ನಾನು ಎಲ್ಲರಂತೆ ಕುಣಿದು ಕುಪ್ಪಳಿಸಿ ಸಂತೋಷದಿಂದಿದ್ದೆ. ಅದು 2012-2013ರ ಸಮಯ. ನಾನು ಮದುವೆಯಾಗಿ ಹೊಸ ಜೀವನ ಆರಂಭಿಸುತ್ತಿದ್ದ ದಿನಗಳು. ಈ ವೇಳೆ ನಾನು- ನನ್ನ ಪತಿ ಪ್ರಶಾಂತ್ ಕಾಂಬೋಡಿಯಾ ಪ್ರವಾಸಕ್ಕೆ ತೆರಳಲು ನಿರ್ಧರಿಸಿದೆವು.
ಪ್ರವಾಸದಿಂದ ಬಂದ ಬಳಿಕ ನಾನು ತಾಯಿಯಾಗುತ್ತಿದ್ದೇನೆ ಎನ್ನುವ ಸಿಹಿ ಸುದ್ದಿ ಸಿಕ್ಕಿತು. ಅದೇ ವೇಳೆ ನನಗೆ ಅತೀವ ಜ್ವರ ಬಂದಿತ್ತು. ವೈದ್ಯರು ಜ್ವರಕ್ಕೆ ಔಷಧ ನೀಡಿದರು. ಏನು ಮಾಡಿದರೂ ಜ್ವರ ಕಡಿಮೆಯಾಗಲಿಲ್ಲ. ಆಗ ವೈದ್ಯರು ರಕ್ತ ಪರೀಕ್ಷೆ ನಡೆಸಿ ಪ್ಲೇಟ್‌ಲೆಟ್ ಕಡಿಮೆ ಕಂಡುಬಂದಿದ್ದರಿಂದ ಡೆಂ à ಎಂದು ವರದಿ ನೀಡಿದರು. ಬಳಿಕ ಅದು ಡೆಂಫೀಯಲ್ಲ ಮಾರಕ ಬ್ಯಾಕ್ಟೀರಿಯಾ ಸೋಂಕು ಎನ್ನುವುದು ತಿಳಿಯಿತು.
ಮುಂದೆ ಶಸ್ತ್ರಚಿಕಿತ್ಸೆ ನಡೆಸಿದರು. ಇನ್ನಿಲ್ಲದ ನೋವು ಅನುಭವಿಸಿದೆ. ಅದುವರೆಗೆ ಎಲ್ಲರಂತೆ ಇದ್ದ ನಾನು ಪ್ರವಾಸದ ಬಳಿಕ ಕಾಲು ಕಳೆದುಕೊಂಡೆ. ಕೆಲವು ದಿನಗಳ ಬಳಿಕ ಕೈಗಳನ್ನೂ ಕಳೆದುಕೊಂಡೆ. ಮರಗಟ್ಟಿ ಹೋಗಿದ್ದ ಕೈನ ಬೆರಳುಗಳು ಕೊಳೆತು ಉದುರುತ್ತಿದ್ದವು. ಕಣ್ಣೀರಿನಿಂದ ಕೈತೊಳೆಯುವಂತಾದೆ.
ಪತ್ನಿಗಾಗಿ ಪ್ರಶಾಂತ್ ಹೋರಾಟ: 2013ರ ಏ.5ರಂದು ನನ್ನ ಪತಿಯನ್ನು ಕರೆದು ವೈದ್ಯರು ನಿಮ್ಮ ಪತ್ನಿ ಉಳಿಯುವುದಿಲ್ಲ. ಆಕೆ ದೇಹದ ವಿವಿಧ ಅಂಗಗಳು ವಿಫಲಗೊಂಡಿವೆ. ಹೃದಯ ಬಡಿತ ನಿಲ್ಲುವ ಹಂತದಲ್ಲಿದೆ. ಜೀವಂತವಾಗಿ ಉಳಿಯುವ ಸಾಧ್ಯತೆ ಶೇ.5ಷ್ಟು ಮಾತ್ರ ಇದೆ. ಆಕೆ ತಂದೆ-ತಾಯಿಗೆ ಕೂಡಲೇ ವಿಷಯ ತಿಳಿಸಿ ಎಂದಿದ್ದರು. ನನ್ನ ಪತಿ ನನ್ನ ಸ್ನೇಹಿತರಿಗೆಲ್ಲ ವಿಷಯ ಹೇಳಿದರು. ಅವರ್ಯಾರೂ ನಂಬಲಿಲ್ಲ. ನಾವಿಬ್ಬರು ಸೇರಿಕೊಂಡು ಏಪ್ರಿಲ್ ಫೂಲ್ ಮಾಡುತ್ತಿದ್ದೇವೆ ಎಂದೆ ಅವರೆಲ್ಲ ಅಂದುಕೊಂಡಿದ್ದರು. ಅತ್ತ ಪ್ರಜ್ಞೆ ತಪ್ಪಿದ್ದ ನನಗೆ ಏನೂ ತಿಳಿದಿರಲಿಲ್ಲ. 2013ರ ಏಪ್ರಿಲ್ 5ರಂದು ನನಗೆ ಪ್ರಜ್ಞೆ ಬಂತು. ನನ್ನ ಹುಟ್ಟು ಹಬ್ಬದಂದೇ ಮರುಜನ್ಮ ಪಡೆದೆ.
ಬದುಕಿಸಿದ ಆರ್ಯುವೇದ: ಆಸ್ಪತ್ರೆಯಿಂದ ಬದುಕಿ ಬಂದ ಬಳಿಕ ಕೈಗಳಿಗೂ ರೋಗ ತಗುಲಿದ್ದು ಗೊತ್ತಾಯಿತು. ಒಂದು ದಿನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಎಡಗೈ ಮೂಳೆ ಮುರಿಯಿತು. ಮತ್ತೂಂದು ಸಲ ನನ್ನ ತಮ್ಮ ನನ್ನ ಕೈಹಿಡಿದಿದ್ದಾಗ ಬಲಗೈ ಲಟಕ್ ಎಂದು ಮುರಿಯಿತು. ಕೂಡಲೇ ನಾವು ಕೇರಳಕ್ಕೆ ತೆರಳಿ ಆರ್ಯುವೇದಿಕ್ ಚಿಕಿತ್ಸೆ ಮಾಡಿಸಿಕೊಂಡೆವು. ಇಡೀ ದೇಹಕ್ಕೆ ರೋಗಾಣು ಹರಡುವುದನ್ನು ಅಲ್ಲಿನ ಮದ್ದು ತಡೆಗಟ್ಟಿತು. ಪ್ರಾಣಾಪಾಯದಿಂದ ಬಚಾವ್ ಆದೆ.
ಕೋಚ್ ಅಯ್ಯಪ್ಪ ದೇವರು: ಆರ್ಯುವೇದಿಕ್ ಚಿಕಿತ್ಸೆ ಬಳಿಕ ಆರಂಭದಲ್ಲಿ ಮನೆಯಲ್ಲೇ ಇದ್ದುದರಿಂದ ಬೊಜ್ಜು ಬರುವುದಕ್ಕೆ ಶುರುವಾಯಿತು. ಇದನ್ನು ಕರಗಿಸಲು ಜಿಮ್‌ಗೆ ಹೋದೆ. ಅಲ್ಲಿ ನನ್ನ ನೋಡಿ ಇವರಿಗೆ ವ್ಯಾಯಾಮ ಮಾಡಿಸುವುದು ಹೇಗೆ ಗೊತ್ತಾಗುತ್ತಿಲ್ಲ ಎಂದು ಜಿಮ್‌ನವರು ಹೇಳಿದರು. ಕಾಲು, ಕೈ ಇಲ್ಲದ ನನಗೆ ವ್ಯಾಯಾಮ ಏನು ಹೇಳಿಕೊಡುವುದಕ್ಕೆ ಅವರು ಭಯಪಟ್ಟರು. ಬಳಿಕ ನನ್ನ ಯಜಮಾನರ ಸ್ನೇಹಿತರ ಮೂಲಕ ಅಥ್ಲೆಟಿಕ್ಸ್ ಕೋಚ್ ಎ.ಬಿ.ಅಯ್ಯಪ್ಪ ಪರಿಚಯವಾಯಿತು. ಅವರು ನನಗೆ ತರಬೇತಿ ನೀಡಲು ಒಪ್ಪಿದರು. ಎಲ್ಲರಂತೆ ನನ್ನನ್ನೂ ಅಥ್ಲೀಟ್ ಆಗಿ ರೂಪಿಸಿದರು. ಬ್ಲೇಡ್ ಕಟ್ಟಿಕೊಂಡು 2 ಬಾರಿ ವಿಶ್ವ 10ಕೆ ಓಡಿದೆ. ಇದಕ್ಕೆಲ್ಲ ಸ್ಫೂರ್ತಿ ತುಂಬಿದ್ದು ಅಯ್ಯಪ್ಪ. ನನ್ನ ಪಾಲಿಗೆ ಅವರೇ ದೇವರು.
ನಾನೇ ಮಗು ನನಗೇಕೆ ಮಗು?ಗರ್ಭಿಣಿಯಾಗಿದ್ದ ನಾನು ರೋಗಾಣು ದೇಹದೊಳಕ್ಕೆ ಸೇರಿದ ಕಾರಣಕ್ಕೆ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡೆ. ತಾಯಿ ಆಗಬೇಕೆನ್ನುವ ನನ್ನ ಕನಸು ಕಮರಿ ಹೋಯಿತು. ಪತಿಗೆ ಈಗ ನಾನೇ ಮಗು. ನನ್ನನ್ನೇ ನೋಡಿಕೊಳ್ಳುವುದು ಅವರಿಗೆ ಕಷ್ಟ. ಹೀಗಿರುವಾಗ ನನಗ್ಯಾಕೆ ಮಗು? ನನ್ನ ಪತಿ ಪ್ರಶಾಂತ್ ಅತ್ಯಂತ ಕಷ್ಟದ ನಡುವೆಯೂ ನನ್ನನ್ನು ಉಳಿಸಿದ್ದಾರೆ. ಇಂತಹ ಪತಿ ಪಡೆಯಲು ಏಳೇಳು ಜನ್ಮದ ಪುಣ್ಯ ಮಾಡಿರಬೇಕು. ನನ್ನ ಹೆತ್ತವರು, ಪ್ರಶಾಂತ್ ಮನೆಯವರ ಹಾರೈಕೆ, ಆರೈಕೆಗಳಿಂದ ನಾನು ಈಗ ಮೊದಲಿನಂತಾಗಿದ್ದೇನೆ. – ಹೇಮಂತ್ ಸಂಪಾಜೆ ಚಿತ್ರ : ಶಿವಸುಬ್ರಹ್ಮಣ್ಯ.ಕೆ