ನಿರ್ದೇಶಕ ನಿಖೀಲ್ ಮಂಜು ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ದಂಪತಿ ಕುರಿತು “ಶಾಲಿನಿ ಐ.ಎ.ಎಸ್’ ಎಂಬ ಸಿನಿಮಾ ಮಾಡಲು ಹೊರಟಿರೋದು ನಿಮಗೆ ಗೊತ್ತೇ ಇದೆ. ಶನಿವಾರ ಈ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಚಾಲನೆ ನೀಡಿದ್ದಾರೆ. ಆರಂಭದಲ್ಲಿ ಚಿತ್ರದಲ್ಲಿನ ಶಾಲಿನಿ ಅವರ ಪಾತ್ರವನ್ನು ಯುಎಸ್‌ಎನಲ್ಲಿರುವ ಯಾನರಾಜ್ ಅವರು ಮಾಡುತ್ತಾರೆಂದು ಹೇಳಲಾಗಿತ್ತು.
ಆದರೆ, ಈಗ ಯಾನರಾಜ್ ಬದಲಾಗಿದ್ದಾರೆ. ಅವರ ಜಾಗಕ್ಕೆ ಸೋನು ಬಂದಿದ್ದಾರೆ. “ಇಂತಿ ನಿನ್ನ ಪ್ರೀತಿಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಸೋನು ಆ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗ ಸೋನುಗೆ “ಶಾಲಿನಿ ಐಎಎಸ್’ ಸಿನಿಮಾ ಸಿಕ್ಕಿದೆ.
ಅಷ್ಟಕ್ಕೂ ಯಾನರಾಜ್ ಬದಲಾಗಿದ್ದು ಯಾಕೆ ಎಂಬ ಪ್ರಶ್ನೆ ಬರಬಹುದು. ಯುಎಸ್‌ಎನಲ್ಲಿರುವ ಯಾನರಾಜ್ ಅವರಿಗೆ ರಜಾ ಸಮಸ್ಯೆ ಎದುರಾಗಿರುವುದರಿಂದ ಆವರ ಜಾಗಕ್ಕೆ ಸೋನು ಅವರನ್ನು ಕರೆತರಲಾಗಿದೆ. ಶಾಲಿನಿ ಅವರ ಪಾತ್ರದಲ್ಲಿ ಸೋನು ನಟಿಸುತ್ತಿದ್ದಾರೆ ನಿಜ. ರಜನೀಶ್ ಅವರ ಪಾತ್ರವನ್ನು ಯಾರು ಮಾಡುತ್ತಾರೆಂದು ನೀವು ಕೇಳಬಹುದು.
ಅದಕ್ಕೆ ಉತ್ತರ ರೋಜರ್ ನಾರಾಯಣ್. “ಯು ಟರ್ನ್’ ಸಿನಿಮಾದಲ್ಲಿ ನಟಿಸಿರುವ ರೋಜರ್ ನಾರಾಯಣ್ ಅವರು ರಜನೀಶ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ವಿಶ್ವ ಸಂಸ್ಥೆಯ ಯುವ ಶೌರ್ಯ ಪ್ರಶಸ್ತಿ ಪುರಸ್ಕೃತೆ ಹಾಗೂ ಬೆಳಕು ಅಕಾಡೆಮಿ ಅಂಧ ಮಕ್ಕಳ ಶಾಲೆಯ ಸಂಸ್ಥಾಪಕಿ ಅಶ್ವಿನಿ ಅಂಗಡಿ ಕೂಡಾ ಕಾಣಿಸಿಕೊಳ್ಳಲಿದ್ದಾರಂತೆ.
ಚಿತ್ರ ಬಗ್ಗೆ ಮಾತನಾಡುವ ನಿರ್ದೇಶಕ ನಿಖೀಲ್ ಮಂಜು ಅವರು, “ಹಳ್ಳಿಯಿಂದ ಬಂದವರು, ತಮ್ಮ ಮಾತೃಭಾಷೆಯಲ್ಲೇ ಐಎಎಸ್ ಮಾಡಿ ಹೇಗೆ ಸಾಧನೆ ಮಾಡಿದ್ದಾರೆ ಮತ್ತು ಆ ಕುರಿತ ಪರಿಸರವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗುತ್ತದೆ. ಇದರೊಂದಿಗೆ ಅಂಗಾಂಗ ದಾನ ವಿಷಯವೂ ಇಲ್ಲಿ ಹೇಳಲಾಗುತ್ತಿದೆ’ ಎನ್ನುತ್ತಾರೆ. ಸಮೀರ್ ಕುಲಕರ್ಣಿ ಸಂಗೀತ, ವಿ. ಮನೋಹರ್ ಸಾಹಿತ್ಯವಿದೆ.