Advertisement

“ಶಕ್ತಿ’ ಯೋಜನೆಗೆ ವರ್ಷ: ಮಹಿಳೆಯರಿಗೆ ಹರ್ಷ; ಪ್ರಯಾಣಿಕರ ಸಂಖ್ಯೆ ಏರಿಕೆ

12:39 AM Jun 10, 2024 | Team Udayavani |

ಬೆಂಗಳೂರು: ಕಳೆದೊಂದು ವರ್ಷದಲ್ಲಿ “ಶಕ್ತಿ’ ಯೋಜನೆಯಿಂದ ಬಸ್‌ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಹಿಳೆಯರ ಉದ್ಯೋಗ ಹೆಚ್ಚಳವಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿದೆ. ಶ್ರಮಿಕ ವರ್ಗಗಳ ಸಂಬಂಧಗಳು ಗಟ್ಟಿಯಾಗಿವೆ. ಆದರೆ, ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಮಾತ್ರ ಹಾಗೇ ಇದೆ.

Advertisement

ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸುವ ಶಕ್ತಿ’ ಗ್ಯಾರಂಟಿ ಯೋಜನೆಗೆ ಸೋಮವಾರ (ಜೂ. 10)ಕ್ಕೆ ಒಂದು ವರ್ಷ ತುಂಬುತ್ತದೆ. ಈ ಅಲ್ಪಾವಧಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಕೊಡುಗೆ ನೀಡಿದ ಮತ್ತು ಉಳಿದ ಗ್ಯಾರಂಟಿಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಸರಕಾರಕ್ಕೆ ಹೆಚ್ಚು ಜನಪ್ರಿಯತೆಯನ್ನೂ ತಂದುಕೊಟ್ಟಿದೆ. ನಾಲ್ಕೂ ಸಾರಿಗೆ ನಿಗಮಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಆದರೆ, ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಬದಲಿಗೆ ಸರಕಾರದಿಂದಲೇ ಈ ಯೋಜನೆಗೆ ಬರಬೇಕಾದ ಸುಮಾರು 950 ಕೋಟಿ ರೂ. ಬಾಕಿ ಇದೆ. ಜತೆಗೆ 2,350 ಸೇರ್ಪಡೆಯಾಗಿದ್ದು ಒಳಗೊಂಡಂತೆ ಅಂದಾಜು 4,000 ಹೊಸ ಬಸ್‌ಗಳು ಕಾರ್ಯಾಚರಣೆಗೆ ತಗಲುವ ವೆಚ್ಚದ ಹೆಚ್ಚುವರಿ ಹೊರೆಯೂ ನಿಗಮಗಳ ಮೇಲೆ ಬೀಳಲಿದೆ.

ಸರಕಾರದಿಂದ ಬಾರದ ಬಾಕಿ ಹಣ
ಯೋಜನೆಯಡಿ ಸರಕಾರದಿಂದ ಪ್ರಸಕ್ತ ಸಾಲಿನಲ್ಲಿ ಬರಬೇಕಾದ ಯಾವುದೇ ಬಾಕಿ ಇಲ್ಲ. ಆದರೆ ಕಳೆದ ವರ್ಷದ 950 ಕೋಟಿ ರೂ. ಇನ್ನೂ ಪಾವತಿ ಆಗಿಲ್ಲ. ಈ ಪೈಕಿ ಕೆಎಸ್‌ಆರ್‌ಟಿಸಿಯದ್ದು ಸಿಂಹಪಾಲು ಇದೆ. ಜತೆಗೆ ಕೆಎಸ್‌ಆರ್‌ಟಿಸಿಯ ಸಾವಿರ ಕೋಟಿ ರೂ. ಸಾಲವೂ ಇದೆ. ಈ ಮಧ್ಯೆ ಸರಕಾರವು ಪ್ರಸಕ್ತ ವರ್ಷದ ಬಜೆಟ್‌ನಲ್ಲಿ “ಶಕ್ತಿ’ ಯೋಜನೆಗೆ ಸುಮಾರು ಐದು ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಆದರೆ ಉಳಿದ ಯಾವುದೇ ವೆಚ್ಚವನ್ನು ನಿಗಮವು ಸ್ವಂತ ಬಲದಿಂದಲೇ ನಿಭಾಯಿಸುವಂತೆ ಸೂಚಿಸಿದೆ.

ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಮುಂದಿರುವ ಗುರಿ ಬಸ್‌ಗಳ ಸಂಖ್ಯೆ ಹೆಚ್ಚಿಸಿ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನನುಕೂಲತೆ ತಪ್ಪಿಸುವುದು, ಗ್ರಾಮೀಣ ಭಾಗಗಳಿಗೆ ಇನ್ನಷ್ಟು ಉತ್ತಮ ಸೇವೆ ಕಲ್ಪಿಸುವುದಾಗಿದೆ. ನಿಯಮಿತವಾಗಿ ಸರಕಾರದಿಂದ ಯೋಜನೆ ಅಡಿ ಹಣ ಪಾವತಿ ಕೂಡ ಆಗುತ್ತಿದೆ. ಜತೆಗೆ ಈ ಯಶಸ್ಸಿಗೆ ಕಾರಣವಾದ ಸಿಬಂದಿಗೆ ಅಪಘಾತ ವಿಮೆ ಸೇರಿದಂತೆ ಇತರೆ ಸೌಲಭ್ಯಗಳನ್ನೂ ಹೆಚ್ಚಿಸಲಾಗಿದೆ.
– ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ

“ಶಕ್ತಿ’ ಯೋಜನೆ ಒಂದು. ಆದರೆ, ಅದರಿಂದ ಆಗುತ್ತಿರುವ ಪ್ರಯೋಜನಗಳು ಸಾಕಷ್ಟು. ಅದೆಲ್ಲವೂ ಈಗಾಗಲೇ ಹಲವು ಅಧ್ಯಯನ ವರದಿಗಳಲ್ಲಿ ಕಾಣಬಹುದು. ಇದೆಲ್ಲದರ ಹಿಂದೆ ಸಾರಿಗೆ ನೌಕರರ ಶ್ರಮ ಅಡಗಿದೆ. ಹೆಚ್ಚುವರಿ ಬಸ್‌ಗಳು ಕೂಡ ಸೇರ್ಪಡೆಯಾಗುತ್ತಿರುವುದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಒದಗಿಸಲಾಗುವುದು.
– ವಿ. ಅನ್ಬುಕುಮಾರ್‌,
ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ

Advertisement

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next