ಶಿವಮೊಗ್ಗ: ಭ್ರಷ್ಟಾಚಾರದಲ್ಲಿ ಮುಳುಗಿದ್ದವರು ಇಂದು(ಇಂಡಿಯಾ ಮೈತ್ರಿಕೂಟ) ಒಂದಾಗಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ “ಶಕ್ತಿ” ನಾಶವನ್ನು ಬಯಸುತ್ತಿದೆ. ಇದು ಹಿಂದೂ ದ್ವೇಷದ ಮನಸ್ಥಿತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆಗೆ ಸೋಮವಾರ (ಮಾರ್ಚ್ 18) ತಿರುಗೇಟು ನೀಡಿದರು.
ಶಿವಮೊಗ್ಗದ ಅಲ್ಲಪ್ರಭು ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿಯ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ:ಎಲ್ಲ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಹೇಳಲ್ಲ, ಆದರೆ… ಸತೀಶ ಜಾರಕಿಹೋಳಿ ಹೇಳಿದ್ದೇನು?
ನಾನು ಮಹಿಳೆಯನ್ನು ಶಕ್ತಿ ಎಂದು ಪರಿಗಣಿಸುತ್ತೇನೆ. ಪ್ರತಿಯೊಬ್ಬ ಮಹಿಳೆಯೂ (ತಾಯಿ, ಮಗಳು, ತಂಗಿ) ಶಕ್ತಿಯಾಗಿದ್ದು, ನಾನು ಭಾರತ್ ಮಾತೆಯನ್ನು ಪೂಜಿಸುತ್ತೇನೆ. ಆದರೆ ಕಾಂಗ್ರೆಸ್ ಹಾಗೂ ಮೈತ್ರಿಕೂಟ ಶಕ್ತಿಯ ನಾಶದ ವಿರುದ್ಧ ಹೋರಾಡುವುದಾಗಿ ಹೇಳಿವೆ. ನಾನು ಈ ಸವಾಲನ್ನು ಸ್ವೀಕರಿಸಲು ಸಿದ್ದನಿದ್ದೇನೆ. ನಾನು ಶಕ್ತಿಯ ಆರಾಧಕನಾಗಿದ್ದೇನೆ. ಮತದಾರರು ಯಾರಿಗೆ ಶಕ್ತಿ ನೀಡಲಿದ್ದಾರೆ ಎಂಬುದು ಜೂನ್ 4ರಂದು ಜಗಜ್ಜಾಹೀರಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮೊದಲು ದೇಶ ಇಬ್ಭಾಗ ಮಾಡಿದರು, ಜಾತಿ, ಜಾತಿ ನಡುವೆ ಜಗಳ ತಂದರು. ಇಂತಹ ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನೆ ಮಾಡಬೇಕಿದೆ. ನಮ್ಮ ಸರ್ಕಾರ ಬಡತನ ನಿರ್ಮೂಲನೆಗೆ ಶ್ರಮಿಸುತ್ತಿದೆ. ರಾಜ್ಯದಲ್ಲಿ 40ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡಿದ್ದೇವೆ. ದೇಶದ ಪ್ರತಿ ಹಳ್ಳಿಗೂ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ರಾಜ್ಯ ಕಾಂಗ್ರೆಸ್ ನಲ್ಲಿ ಸೂಪರ್ ಸಿಎಂ , ಶಾಡೋ ಸಿಎಂಗಳಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನಡೆದ ಸಭೆಯಲ್ಲಿ ಹಿಂದೂ ಸಮಾಜದ ಭಾರತ ಮಾತೆಯ ಶಕ್ತಿಯ ನಾಶಕ್ಕೆ ಕಾಂಗ್ರೆಸ್ ಪಣ ತೊಟ್ಟಿದ್ದಾರೆ. ನಾವು ಚಂದ್ರಯಾನ 3 ಲ್ಯಾಂಡ್ ಆದ ಸ್ಥಳಕ್ಕೆ ಶಿವ ಶಕ್ತಿ ಅಂತ ಹೆಸರಿಟ್ಟಿದ್ದೇವು. ನಾರಿಶಕ್ತಿ ಆಶೀರ್ವಾದ ನಮ್ಮ ಮೇಲಿದೆ. ರಾಷ್ಟ್ರಕವಿ ಕುವೆಂಪು ಕರ್ನಾಟಕದ ಶಕ್ತಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.