Advertisement

ಅಣಜಿಗೆ ವಲಸೆ ಬಂದ ಮಾರಮ್ಮ

02:19 PM Oct 20, 2018 | |

ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ಶಕ್ತಿ ದೇವತೆ ಮಾರಮ್ಮ ಅತ್ಯಂತ ಪ್ರಭಾವಿ ಅದಿ ದೇವತೆ ಎನ್ನುವ ನಂಬಿಕೆ ಇದೆ. ಧರ್ಮ ಮತ್ತು ಜಾತಿ ಭೇದವಿಲ್ಲದೇ ಎಲ್ಲರೂ ಈ ದೇವಿಗೆ ನಡೆದುಕೊಳ್ಳುವುದೇ ಇದಕ್ಕೆ ಕಾರಣ. ಗಡಿ ಮೀರಿ ಭಕ್ತರ ಮನೆ ಮನೆಗಳಲ್ಲಿ ನೆಲೆಸಿರುವ ಈ ದೇವಿಯ ಪುಷ್ಪ ಪ್ರಸಾದ ಪಡೆದುಕೊಂಡೇ ಮುಂದಿನ ಹೆಜ್ಜೆ ಇಡುವ ಅಸಂಖ್ಯಾತ ಭಕ್ತರಿದ್ದಾರೆ.  ಹೂವಿನ ಪ್ರಸಾದ ರೂಪದಲ್ಲಿ ದೇವಿ ನೀಡುವ ಅನುಗ್ರಹ ಮತ್ತು ಹೇಳಿಕೆಯೇ ಭಕ್ತರಿಗೆ ಅಂತಿಮ.

Advertisement

  ಅಂದಹಾಗೆ, ಈ ದೇವಿ ಮೂಲತಃ ಇಲ್ಲಿಯವಳಲ್ಲ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ನಾಣ್ಯಕೆರೆ, ಈಕೆಯ ಮೂಲವಂತೆ. ಕಾಲನಂತರ ಈಕೆ ಭಕ್ತರಿಂದ ಉಪೇಕ್ಷಿಸಲ್ಪಟ್ಟು, ನೊಂದು ನಾಣ್ಯಕೆರೆ ತೊರೆದು ಬಂದಿದ್ದು ಅಣಜಿ ಸಮೀಪದ ಗಿರಿಯಾಪುರದ ಆರಾಧ್ಯದೈವ ಆಂಜನೇಯನ ಬಳಿ. ಆಂಜನೇಯನಲ್ಲಿ ತನಗೂ ಗ್ರಾಮದಲ್ಲಿ ನೆಲೆಸಲು ಜಾಗ ಕೇಳಿದಳೆಂದೂ, ಆಂಜನೇಯನು “ಇದು ಸಣ್ಣ ಊರು. ಹಾಗಾಗಿ ನೀನು ಸಮೀಪದಲ್ಲಿ ಏಳು ಸಾವಿರ ಮನೆ ಇರುವ ಅಣಜಿ ಗ್ರಾಮದಲ್ಲಿ, ನನ್ನ ತಂಗಿ ಕೆರೆ ಹೊನ್ನಮ್ಮಳಿದ್ದಾಳೆ. ಅವಳನ್ನು ಹೋಗಿ ಕೇಳು. ಅಣಜಿಯಲ್ಲಿ ಜಾಗವಿದೆಯಾ ಎಂದು’ ಅಂತ ಹೇಳಿ ಕಳುಹಿಸಿದನಂತೆ. 

  ಕೆರೆ ಹೊನ್ನಮ್ಮಳನ್ನು ಭೇಟಿ ಆದ ಮಾರಮ್ಮಳಿಗೆ ಹೊನ್ನಮ್ಮ ದೇವಿಯು “ನನ್ನ ಜಾತ್ರೆಯಲ್ಲಿ ನಿನ್ನ ಜಾತ್ರೆ, ನನ್ನ ಹಬ್ಬದಲ್ಲಿ ನಿನ್ನ ಹಬ್ಬ ನಡೆಯುವುದಾದರೆ ಇಲ್ಲಿ ನೆಲೆಸು. ನಿನಗೆ ಇದು ಒಪ್ಪಿಗೆಯೇ?’ ಅಂತ ಕೇಳಿದಳಂತೆ. ಮಾರಮ್ಮ ಅದಕ್ಕೆ ಸಮ್ಮತಿಸಿ ಅಣಜಿಯಲ್ಲೇ ನೆಲೆಸಿದಳು ಎನ್ನುವುದು ಜನಪದ ನಂಬಿಕೆ. ಅದರಂತೆ ಇಂದಿಗೂ ಕೆರೆಹೊನ್ನಮ್ಮ ಮತ್ತು ಮಾರಮ್ಮ ದೇವಿಯವರು ಅಕ್ಕ- ತಂಗಿಯರೆಂದು ಜನ ನಂಬಿದ್ದಾರೆ. ಇಬ್ಬರ ಉತ್ಸವ, ಜಾತ್ರೆಗಳು ಜತೆ ಜತೆಯಲ್ಲೇ ಜರುಗುತ್ತವೆ. ಅಷ್ಟೇ ಅಲ್ಲ, ಮಾರಮ್ಮ ದೇವಿಯ ಪ್ರಾಣಿ ಬಲಿ, ನೈವೇದ್ಯ ಪರಂಪರೆ ನಾಣ್ಯಕೆರೆಯಲ್ಲೇ ಕೊನೆಗೊಂಡಿತು.

ಮಳೆ ಸುರಿಸುವ ದೇವತೆ!
 ಮಳೆ- ಬೆಳೆ ಆಗದಿದ್ದಾಗ, ಊರಿಗೆ ಕೇಡು ಆಗುತ್ತಿದೆ ಎನ್ನುವಾಗ ಭಕ್ತರು ದೇವಿಯ ಸಲಹೆ ಪಡೆಯುತ್ತಾರೆ. ಈ ವೇಳೆ ಹಾಗೂ ಭಕ್ತರು ತಮ್ಮ ಶ್ರೇಯಸ್ಸಿಗಾಗಿ ದೇವಿಯನ್ನು ಹೊರಡಿಸುವ ಪರಿಪಾಠ ಇಲ್ಲಿದೆ. ನಂತರ ಊರಿಗೆ ಮಳೆಯಾದ ನಿದರ್ಶನಗಳೂ ಇವೆ. ದೀಪಾವಳಿ, ಕಾರ್ತೀಕ ಮತ್ತು ದಸರಾದಂಥ ಹಬ್ಬ ಹರಿದಿನಗಳಲ್ಲಿ ಗ್ರಾಮದ ದುರುಗಮ್ಮ, ಮಾರಮ್ಮ, ಬೀರಪ್ಪ, ಆಂಜನೇಯ ಈ ನಾಲ್ಕು ದೇವರುಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಲಾಗುತ್ತದೆ. ದೇವಿಗೆ ಹೂವಿನ, ಬೆಳ್ಳಿಯ ವಿಶೇಷ ಅಲಂಕಾರ ನಡೆಯುತ್ತೆ. ಶುಕ್ರವಾರ ಮತ್ತು ಮಂಗಳವಾರ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ದೇವಿಗೆ ಹಣ, ಸೀರೆ, ಬೆಳ್ಳಿ- ಹೀಗೆ ವಸ್ತ್ರಾಭರಣಗಳನ್ನು ಕಾಣಿಕೆಯಾಗಿ ಒಪ್ಪಿಸುವ ಸಂಪ್ರದಾಯವಿದೆ.

ತಲುಪುವುದು ಹೇಗೆ?
ದಾವಣಗೆರೆ ಜಿಲ್ಲಾ ಕೇಂದ್ರದಿಂದ ಅಣಜಿಗೆ ಕೇವಲ 20 ಕಿ.ಮೀ. ದೂರ. ಪ್ರತಿ 15 ನಿಮಿಷಕ್ಕೆ ಖಾಸಗಿ, ಸರ್ಕಾರಿ ಬಸ್ಸುಗಳಿವೆ. ಈ ಮಾರ್ಗದಲ್ಲಿ ಆಟೋಗಳೂ ನಿರಂತರವಾಗಿ ಓಡಾಡುವುದರಿಂದ ಸುಲಭದಲ್ಲಿ ಮಾರಮ್ಮ ದೇಗುಲವನ್ನು ತಲುಪಬಹುದು.

Advertisement

ಸ್ವರೂಪಾನಂದ ಎಂ. ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.

Next