ಢಾಕಾ: ಶ್ರೀಲಂಕಾದಲ್ಲಿ ನಡೆಯುವ “ನಿದಹಾಸ್’ ಟಿ20 ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಬಾಂಗ್ಲಾದೇಶಕ್ಕೆ ಭಾರೀ ಆಘಾತವೊಂದು ಎದುರಾಗಿದೆ. ನಾಯಕ ಹಾಗೂ ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಗಾಯಾಳಾಗಿ ಹೊರಬಿದ್ದಿದ್ದಾರೆ.
ಶಕಿಬ್ ಗೈರಲ್ಲಿ ಮಹಮದುಲ್ಲ ರಿಯಾದ್ ಬಾಂಗ್ಲಾ ತಂಡವನ್ನು ಮುನ್ನಡೆಸಲಿದ್ದಾರೆ. ಲಿಟ್ಟನ್ ಕುಮಾರ್ ದಾಸ್ ಬದಲಿ ಆಟಗಾರನಾಗಿ ತಂಡ ಸೇರಿಕೊಂಡಿದ್ದಾರೆ.
ವರ್ಷಾರಂಭದಲ್ಲಿ ಶ್ರೀಲಂಕಾ ವಿರುದ್ಧ ನಡೆದ ತವರಿನ ತ್ರಿಕೋನ ಸರಣಿ ಫೈನಲ್ ವೇಳೆ ಫೀಲ್ಡಿಂಗ್ ನಡೆಸುತ್ತಿದ್ದಾಗ ಶಕಿಬ್ ಅಲ್ ಹಸನ್ ಎಡಗೈ ಬೆರಳಿಗೆ ಪೆಟ್ಟಾಗಿತ್ತು. ಹೀಗಾಗಿ ಪಂದ್ಯದ ಉಳಿದ ಅವಧಿಯಿಂದ ಅವರು ಹೊರಗುಳಿಯಬೇಕಾಯಿತು. ಈ ನೋವು ಇನ್ನೂ ವಾಸಿಯಾಗದ ಕಾರಣ ಶಕಿಬ್ ತ್ರಿಕೋನ ಸರಣಿಯಿಂದ ದೂರ ಸರಿಯಲು ನಿರ್ಧರಿಸಿದ್ದಾರೆ.
ಬಾಂಗ್ಲಾದೇಶ ತನ್ನ ಮೊದಲ ಪಂದ್ಯವನ್ನು ಮಾ. 8ರಂದು ಭಾರತದ ವಿರುದ್ಧ ಆಡಲಿದೆ.
ಬಾಂಗ್ಲಾದೇಶ ತಂಡ: ಮಹಮದುಲ್ಲ ರಿಯಾದ್ (ನಾಯಕ), ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಂ, ಶಬ್ಬೀರ್ ರೆಹಮಾನ್, ಮುಸ್ತಫಿಜುರ್ ರೆಹಮಾನ್, ರುಬೆಲ್ ಹೊಸೈನ್, ಅಬು ಜಾಯೇದ್, ಟಸ್ಕಿನ್ ಅಹ್ಮದ್, ಇಮ್ರುಲ್ ಕಯೇಸ್, ನುರುಲ್ ಹಸನ್, ಮೆಹಿದಿ ಹಸನ್, ಅರೀಫುಲ್ ಹಕ್, ನಜ್ಮುಲ್ ಇಸ್ಲಾಮ್, ಅಬು ಹೈದರ್ ರೋನಿ, ಲಿಟ್ಟನ್ ಕುಮಾರ್ ದಾಸ್.