Advertisement

ಷೇಕ್ಸ್‌ಪಿಯರ್‌ನ ನಾಟಕ ಪ್ರಕರಣ

06:00 AM Dec 14, 2018 | Team Udayavani |

ಇತ್ತೀಚೆಗೆ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರದರ್ಶಿತವಾದ ವಿಲಿಯಂ ಷೇಕ್ಸ್‌ಪಿಯರ್‌ ಬರೆದ “A Midsummer Night’s Dream’ ನ ಕನ್ನಡ ರೂಪಾಂತರ ಪ್ರೀತಿ,ಪ್ರೇಮ ಮಾಯಾಜಾಲದ ಹಲವು ಆಯಾಮಗಳನ್ನು ತೆರೆದಿಟ್ಟಿತು. 16ನೇ ಶತಮಾನದ ನಾಟಕವಾದರೂ ಅದರಲ್ಲಿ ಅಡಕವಾಗಿರುವ ಸತ್ವ ಹಾಗೂ ಸತ್ಯ ಇಂದಿಗೂ ಹೇಗೆ ಪ್ರಸ್ತುತ ಎನ್ನುವುದನ್ನು ನಿರೂಪಿಸುವಲ್ಲಿ ಪ್ರಸಾದ್‌ ಚೇರ್ಕಾಡಿ ಈ ಏಕವ್ಯಕ್ತಿ ನಾಟಕದ ಮೂಲಕ ಯಶಸ್ವಿಯಾದರು. ಏಕವ್ಯಕ್ತಿ ಪ್ರದರ್ಶನ ಎಲ್ಲಿ ಏಕಪಾತ್ರಾಭಿನಯದಂತೆ ಏಕತಾನತೆಯಲ್ಲಿ ಕಳೆದು ಹೋಗುತ್ತದೋ ಎನ್ನುವ ಭಯವನ್ನು ಹೋಗಲಾಡಿಸಿ, ಅವರು ಪ್ರದರ್ಶನದುದ್ದಕ್ಕೂ ಹರಿಕಥೆ, ಯಕ್ಷಗಾನ, ಭರತನಾಟ್ಯ, ಸಂಗೀತ ಶೈಲಿಗಳ‌ನ್ನು ಅಳವಡಿಸಿ ಪ್ರೇಕ್ಷಕರನ್ನು ಸುಮಾರು ಒಂದು ಡಿಂಟೆ ಕಾಲ ಹಿಡಿದಿಟ್ಟುಕೊಂಡರು.

Advertisement

ಆಥೆನ್ಸ್‌ನ ಡ್ನೂಕ್‌ ಥೀಸಸ್‌ ರಾಜನು ಅಮೆಜಾನ್‌ ದ್ವೀಪದ ರಾಣಿ ಹಿಪ್ರೋಲಿಟಾಳನ್ನು ಯುದ್ಧದಲ್ಲಿ ಗೆದ್ದು ಬಂದು ಅದ್ದೂರಿ ಮದುವೆಯ ಸಿದ್ಧತೆಯಲ್ಲಿರುವನು. ತನ್ಮಧ್ಯೆ ಹರ್ಮಿಯಾ ಮತ್ತು ಲೈಸಾಂಡರ್‌ ಎನ್ನುವ ಯುವ ಪ್ರೇಮಿಗಳು ಹರ್ಮಿಯಾಳ ಅಪ್ಪ ಆಕೆಯ ಮದುವೆಯನ್ನು ಡಿಮಿಟ್ರಿಯಸ್‌ನೊಂದಿಗೆ ಬಲವಂತದಿಂದ ಮಾಡುವ ಪ್ರಯತ್ನವನ್ನು ವಿಫ‌ಲಗೊಳಿಸಲು ಕಾಡಿಗೆ ಓಡುವರು. ಅವರನ್ನು ಹಿಂಬಾಲಿಸಿಕೊಂಡು ಡಿಮಿಟ್ರಿಯಾಸ್‌ ಆತನ ಹಿಂದೆ ಆತನ ಪ್ರೇಯಸಿ ಹೆಲೆನಾ ಹೀಗೆ ಅವನು ಅವಳನ್ನು ಅವಳು ಅವನನ್ನು ಅವನವಳನ್ನು ಅವಳವನನ್ನು ಓಡಿಸಿಕೊಂಡು ಹೋಗುವುದನ್ನು ನಟ ಸ್ವಾರಸ್ಯಕರವಾಗಿ ಒಗಟಿನ ರೂಪದಲ್ಲಿ ನಿರೂಪಿಸುತ್ತಾರೆ. 

ಆಥೆನ್ಸ್‌ನ ಆ ದಟ್ಟಕಾಡು ಡ್ನೂಕ್‌ನ ಮದುವೆಗೆ ಆಗಮಿಸಿದ ಯಕ್ಷಿಗಳಿಂದ ತುಂಬಿ ಹೋಗಿತ್ತು. ಯಕ್ಷರಾಜ ಒಬೆರಾನ್‌ ಕಾಡಿನಲ್ಲಿ ಅಲೆಯುತ್ತಿರುವ ಯುವ ಪ್ರೇಮಿಗಳ ಸಮಸ್ಯೆ ಬಗೆಹರಿಸಲು ಡಿಮಿಟ್ರಿಯಸ್‌ ಕಣ್ಣಿಗೆ ಮಾಯಕದ ಪ್ರೀತಿರಸವನ್ನು ಬಿಡುವಂತೆ ಹೇಳಿ ಅವಳ ಮುಂದೆ ಹೆಲೆನಾ ಹೋಗುವಂತೆ ಮಾಡುವಾಗ ರಸಪ್ರಯೋಗದಿಂದಾಗಿ ಅವನು ಹೆಲೆನಾಳನ್ನು ಗಾಢವಾಗಿ ಪ್ರೀತಿಸುವಂತಾಗುತ್ತದೆ ಎಂದು ತನ್ನ ತುಂಟ ಸೇವಕ ಪಕ್ಕಪೊಬುìವಿಗೆ ಹೇಳಿದ ಪ್ರಕಾರ ಅವನು ಡಿಮಿಟ್ರಿಯಾಸ್‌ ಬದಲಿಗೆ ತಪ್ಪಿ ಲೈಸಾಂಡರ್‌ನ ಕಣ್ಣಿನಲ್ಲಿ ಪ್ರೀತಿರಸವನ್ನು ಹಾಕುತ್ತಾನೆ. ನಿದ್ದೆಯಿಂದ ಎಚ್ಚೆತ್ತ ಲೈಸಾಂಡರ್‌ ಎದುರಿಗೆ ಹೆಲೆನಾಳನ್ನು ಕಂಡು ಪ್ರೀತಿರಸದ ಪ್ರಭಾವದಿಂದಾಗಿ ಆಕೆಯನ್ನು ಗಾಢವಾಗಿ ಪ್ರೀತಿಸುತ್ತಾನೆ. ತನ್ನ ಪ್ರೀತಿ ಹೆಲೆನಾಳ ಪಾಲಾದುದನ್ನು ಕಂಡ ಹರ್ಮಿಯಾ ರೋದಿಸಲಾರಂಭಿಸುತ್ತಾಳೆ. ಇತ್ತ ತನ್ನ ಹೆಂಡತಿ ಟೈಟಾನಿಯಾಳೊಂದಿಗೆ ಮುನಿಸಿಕೊಂಡ ಒಬೆರಾನ್‌ ಆಕೆಯ ಕಣ್ಣಿಗೂ ಮಾಯಕದ ಪ್ರೀತಿರಸ ಹಾಕುವಂತೆ ಪಕ್ಕಪೊಬುìವಿಗೆ ಸೂಚಿಸುತ್ತಾನೆ. ಹಾಗೆಯೇ ಮಾಡಿದ ಪಕ್ಕಪೊಬುì ಡ್ನೂಕ್ಸ್‌ನ ಮದುವೆ ತಯಾರಿಗೆ ಆಗಮಿಸಿದ್ದ ಬಡಗಿ ವೃಂದದ ನಾಯಕ ನಿಕ್‌ ಬಾಟಮ್‌ಗೆ ಆತನೇ ಮಾಡಿದ ಕತ್ತೆ ಮುಖವಾಡವನ್ನು ಕೂರಿಸಿ ಟೈಟಾನಿಯಾಳ ಮುಂದೆ ಬಿಡುತ್ತಾನೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಹಾಡಿನ ಮೂಲಕ, ನೃತ್ಯದ ಮೂಲಕ, ಯಕ್ಷಗಾನ ಹೆಜ್ಜೆಗಳಿಂದ, ಭರತನಾಟ್ಯದ ಅಡವುಗಳಿಂದ, ಸಾಂದರ್ಭಿಕವಾಗಿ ಬೆಂಗಾಲಿ ಹಾಡುಗಳಿಂದ ಕಿವಿಗಿಂಪಾದ ಸಂಗೀತ ಉಪಯೋಗಿಸಿ ಪ್ರೇಕ್ಷಕರೊಂದಿಗೆ ಸಂವಹನ ಮಾಡುವ ಪ್ರಸಾದ್‌ ಚೇರ್ಕಾಡಿಯವರ ನಟನಾ ಚಾತುರ್ಯ ಮೆಚ್ಚತಕ್ಕದ್ದು.

ಇತ್ತ ನಿದ್ದೆಯಿಂದ ಎಚ್ಚೆತ್ತ ಟೈಟಾನಿಯಾ ಕತ್ತೆಮುಖದ ಬಾಟಮ್‌ನನ್ನು ಪ್ರೀತಿಸಲಾರಂಬಿಸಿದ್ದು ಕಂಡು ಹೌಹಾರಿದ ಆಕೆಯ ಪತಿ ಒಬೆರಾನ್‌ಗೆ ತನ್ನ ತಪ್ಪಿನ ಅರಿವಾಗುತ್ತೆ. ಕೊನೆಗೆ ತಾನೇ ಪ್ರಯೋಗಿಸಿದ್ದ ವಿಷಕ್ಕೆ (ಮಾಯಕದ ಪ್ರೀತಿರಸ) ಪ್ರತಿವಿಷ ತಯಾರಿಸಿ ಅದರ ಪ್ರಭಾವಕ್ಕೊಳಗಾದವರನ್ನು ಪಾರು ಮಾಡಿದಾಗ ನಾಟಕ ಸುಖಾಂತ್ಯವಾಗುತ್ತದೆ. ಪ್ರೀತಿ-ಪ್ರೇಮ ಅಜರಾಮರ, ಅಂದಿಗೂ ಇಂದಿಗೂ ಸಲ್ಲುವ ಒಂದೇ ವಿಷಯ ಗಾಢ ಪ್ರೀತಿ ಎನ್ನುವುದನ್ನು ನಿರೂಪಿಸುವಲ್ಲಿ ಸಫ‌ಲವಾಗುವುದು ನಾಟಕದ ಧನಾತ್ಮಕ ಅಂಶ. ಡ್ನೂಕ್ಸ್‌ನ ರಾಜ ಹಾಗೂ ಅಮೆಜಾನ್‌ ರಾಣಿ ಹಿಪ್ರೋಲಿಟಾ ಮತ್ತು ನಾಲ್ವರು ಯುವ ಪ್ರೇಮಿಗಳ ವಿವಾಹ ಯಥಾವತ್ತಾಗಿ ನಡೆಯಿತು ಎನ್ನುವಲ್ಲಿಗೆ ಕಥೆ ಮುಕ್ತಾಯ ಹೊಂದಿತು. ಆದರೆ ಹಿಂದೂ ಪದ್ಧತಿಯಂತೆ ಮದುವೆ ಮಾಡಿಸಲು ಹೊರಟ ಕಲಾವಿದ “ಮಾಂಗಲ್ಯಂ ತಂತುನಾನೇನ’ ಎನ್ನುವ ಮಂತ್ರದಿಂದ ವಧೂ-ವರರಿಗೆ ಪೂಜೆ ಮಾಡುವ ಪ್ರಯತ್ನ, ಕ್ರಿಶ್ಚಿಯನ್‌ ಸಮುದಾಯದವರಿಗೆ ಹಿಂದೂ ಸಂಸ್ಕೃತಿಯಂತೆ ಮದುವೆಯ ಯತ್ನ ಜಾತ್ಯತೀತ ಕಲ್ಪನೆಯೋ ಅಥವಾ ಅನಗತ್ಯ ಹಾಸ್ಯ ತುರುಕಲು ಹೋಗಿ ಹಾಸ್ಯಾಸ್ಪದವಾಯಿತೇ ಎನ್ನುವ ಜಿಜ್ಞಾಸೆ ಉಳಿದುಕೊಂಡಿತು. ಹಿತಮಿತವಾದ ಸಂಗೀತ, ಲವಲವಿಕೆ ತುಂಬಿದ ನಟನೆ ನಾಟಕದ ಒಪ್ಪಂದವನ್ನು ಹೆಚ್ಚಿಸಿತು. 

ಜನನಿ ಭಾಸ್ಕರ್‌ ಕೊಡವೂರು
 

Advertisement
Advertisement

Udayavani is now on Telegram. Click here to join our channel and stay updated with the latest news.

Next