ನಟ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಿಧಿ ಹೆಗ್ಡೆ, ವಿನಯ್, ಸುಜಯ್ ಶಾಸ್ತ್ರಿ, ಶ್ರೀ ಹರ್ಷ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ “ಶಾಖಾಹಾರಿ’ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಸದ್ಯ ಭರದಿಂದ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಸಿನಿಮಾ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದು, ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿತು.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಿರ್ದೇಶಕ ದುನಿಯಾ ಸೂರಿ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು, “ಶಾಖಾಹಾರಿ’ ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇನ್ನು “ಶಾಖಾಹಾರಿ’ ಅಪ್ಪಟ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಒಂದು ಮರ್ಡರ್ ಮಿಸ್ಟರಿ, ಅದರ ಹಿಂದಿನ ನಿಗೂಢ ಹುಡುಕಾಟದ ಸುತ್ತ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ. ಆಕಸ್ಮಿಕ ಘಟನೆಗಳು ಹೇಗೆ ಮುಗ್ಧನೊಬ್ಬನನ್ನು ಅಪರಾಧಿಯನ್ನಾಗಿ ಮಾಡುತ್ತದೆ. ತನ್ನ ಅಸ್ತಿತ್ವಕ್ಕಾಗಿ ಆತ ಹೇಗೆ ಹೋರಾಡುತ್ತಾನೆ ಎಂಬುದೇ ಸಿನಿಮಾದ ಎಳೆ. ಪ್ರತಿಯೊಂದು ಪಾತ್ರಗಳಿಗೂ ಅದರದ್ದೇ ಆದ ಮಹತ್ವವಿದ್ದು, ಇಡೀ ಸಿನಿಮಾದ ಕಥೆ ಮಲೆನಾಡು ಹಿನ್ನೆಲೆಯಲ್ಲಿ ಸಾಗಲಿದೆ ಎಂಬುದು ಸಿನಿಮಾದ ಬಗ್ಗೆ ಚಿತ್ರತಂಡದ ಮಾತು.
ತೀರ್ಥಹಳ್ಳಿ ಸುತ್ತಮುತ್ತ “ಶಾಖಾಹಾರಿ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಹಾಸ್ಯ ನಟನಾಗಿ, ಖಳನಟ ನಾಗಿ, ಪೋಷಕ ನಟನಾಗಿ ನೂರಾರು ಪಾತ್ರಗಳನ್ನು ಲೀಲಾಜಾಲವಾಗಿ ನಿಭಾಯಿ ಸಿರುವ ನಟ ರಂಗಾಯಣ ರಘು, “ಶಾಖಾಹಾರಿ’ ಸಿನಿಮಾದಲ್ಲಿ ಮುಖ್ಯಪಾತ್ರ ದಲ್ಲಿ ಹೋಟೆಲ್‌ನ ಅಡುಗೆ ಭಟ್ಟನಾಗಿ ತುಂಬ ಗಂಭೀರ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.
ಶಿವಮೊಗ್ಗ ಮೂಲದ ಸಂದೀಪ್ ಸುಂಕದ್ ಮೊದಲ ಬಾರಿಗೆ “ಶಾಖಾಹಾರಿ’ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. “ಕೀಳಂಬಿ ಮೀಡಿಯಾ ಲ್ಯಾಬ್ (ಪ್ರೈ) ಲಿ’ ಬ್ಯಾನರ್‌ನಲ್ಲಿ ಮಲೆನಾಡು ಮೂಲದ ಉದ್ಯಮಿ ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ
ಜಿ. ಎಸ್. ಕಾರ್ತಿಕ ಸುಧನ್