Advertisement
ಗುರುವಾರದ ಶಾರ್ಜಾ ಸೆಮಿಫೈನಲ್ ಸಮರದಲ್ಲಿ ಯಶ್ ಧುಲ್ ಸಾರಥ್ಯದ ಭಾರತ ಪರಿಪೂರ್ಣ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ನಡೆಸಿ 8ಕ್ಕೆ 243 ರನ್ ಪೇರಿಸಿದ ಬಳಿಕ ಬಾಂಗ್ಲಾದೇಶವನ್ನು 38.2 ಓವರ್‌ಗಳಲ್ಲಿ 140ಕ್ಕೆ ಕೆಡವಿತು.
Related Articles
Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತಕ್ಕೆ ನಿರೀಕ್ಷಿತ ಆರಂಭ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಆರಂಭಿಕ ಜೋಡಿ 8 ಓವರ್ ನಿಭಾಯಿಸಿದರೂ ಬಂದದ್ದು 23 ರನ್ ಮಾತ್ರ. ಸರಣಿಯ ಹೀರೋ ಹರ್ನೂರ್ ಸಿಂಗ್ (15) ಮತ್ತು ಅಂಗ್‌ಕೃಷ್ ರಘುವಂಶಿ (16) ಅಬ್ಬರಿಸುವಲ್ಲಿ ವಿಫಲರಾದರು. ನಿಶಾಂತ್ ಸಿಂಧು (5) ಕೂಡ ಯಶಸ್ಸು ಕಾಣಲಿಲ್ಲ. ಸ್ಕೋರ್ ನೂರರ ಗಡಿ ಮುಟ್ಟುವಾಗ ಆಗಲೇ 30ನೇ ಓವರ್ ಜಾರಿಯಲ್ಲಿತ್ತು. ಆಗ ನಾಯಕ ಯಶ್ ಧುಲ್ (26) ವಿಕೆಟ್ ಕೂಡ ಉರುಳಿತ್ತು.
ಇಂಥ ಸ್ಥಿತಿಯಲ್ಲಿ ಆಂಧ್ರದ ಬಲಗೈ ಬ್ಯಾಟ್ಸ್‌ಮನ್ ಶೇಖ್ ರಶೀದ್ ತಂಡದ ನೆರವಿಗೆ ನಿಂತರು. 9ನೇ ಓವರ್‌ನಲ್ಲಿ ಬ್ಯಾಟ್ ಹಿಡಿದು ಬಂದ ಅವರು ಕೊನೆಯ ತನಕ ಕ್ರೀಸ್ ಆಕ್ರಮಿಸಿಕೊಂಡು ಭಾರತದ ಇನ್ನಿಂಗ್ಸ್ ಬೆಳೆಸತೊಡಗಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ವಿಚಲಿತರಾಗಲಿಲ್ಲ. ತಾಳ್ಮೆ ಹಾಗೂ ಎಚ್ಚರಿಕೆಯಿಂದ ಬ್ಯಾಟ್ ಬೀಸತೊಡಗಿದರು. ರಶೀದ್ ಕೊಡುಗೆ ಅಜೇಯ 90 ರನ್. 108 ಎಸೆತ ಎದುರಿಸಿದ ಅವರು ಕೇವಲ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಹೊಡೆದರು.
ಶೇಖ್ ರಶೀದ್‌ಗೆ ರಾಜ್ ಬಾವಾ (23), ರಾಜ್ಯವರ್ಧನ್ ಹಂಗಗೇìಕರ್ (16) ಉತ್ತಮ ಬೆಂಬಲ ನೀಡಿದರು. ಕೊನೆಯಲ್ಲಿ ವಿಕ್ಕಿ ಒಸ್ವಾಲ್ (ಅಜೇಯ 28) ನಿರೀಕ್ಷೆಗೂ ಮೀರಿದ ಆಟವಾಡಿದರು. ಈ ಜೋಡಿಯಿಂದ ಮುರಿಯದ 9ನೇ ವಿಕೆಟಿಗೆ 5 ಓವರ್‌ಗಳಿಂದ ಭರ್ತಿ 50 ರನ್ ಒಟ್ಟುಗೂಡಿದ್ದರಿಂದ ಭಾರತ ಸವಾಲಿನ ಮೊತ್ತ ಪೇರಿಸುವಂತಾಯಿತು.
ಸಂಕ್ಷಿಪ್ತ ಸ್ಕೋರ್ :
ಭಾರತ-8 ವಿಕೆಟಿಗೆ 243 (ಶೇಖ್ ರಶೀದ್ ಔಟಾಗದೆ 90, ವಿಕ್ಕಿ ಒಸ್ವಾಲ್ ಔಟಾಗದೆ 28, ಯಶ್ ಧುಲ್ 26, ರಾಜ್ ಬಾವಾ 23, ರಘುವಂಶಿ 16, ಹರ್ನೂರ್ 15, ರಖೀಬುಲ್ ಹಸನ್ 41ಕ್ಕೆ 3). ಬಾಂಗ್ಲಾದೇಶ-38.2 ಓವರ್‌ಗಳಲ್ಲಿ 140 (ಅರೀಫುಲ್ 42, ಮಹಫಿಜುಲ್ 26, ರವಿ ಕುಮಾರ್ 22ಕ್ಕೆ 2, ಒಸ್ವಾಲ್ 25ಕ್ಕೆ 2, ರಾಜ್ ಬಾವಾ 26ಕ್ಕೆ 2, ರಾಜ್ಯವರ್ಧನ್ 36ಕ್ಕೆ 2).
ಲಂಕಾ ಏಟಿಗೆ ಪಾಕ್ ಪಲ್ಟಿ :
ಪಾಕಿಸ್ಥಾನ-ಶ್ರೀಲಂಕಾ ನಡುವಿನ ಸೆಮಿಫೈನಲ್ ಪಂದ್ಯ ಸಣ್ಣ ಮೊತ್ತದ ಮೇಲಾಟವಾಗಿತ್ತು. ಶ್ರೀಲಂಕಾ 44.4 ಓವರ್‌ಗಳಲ್ಲಿ 147ಕ್ಕೆ ಕುಸಿಯಿತು. ಈ ಮೊತ್ತವನ್ನು ಹಿಂದಿಕ್ಕಲು ವಿಫಲವಾದ ಪಾಕಿಸ್ಥಾನ 49.3 ಓವರ್‌ಗಳಲ್ಲಿ 125ಕ್ಕೆ ಆಲೌಟ್ ಆಯಿತು. ಪಾಕ್ ಪರ ಜೀಶನ್ ಜಮೀರ್ 32ಕ್ಕೆ 4, ಲಂಕಾ ಪರ ಟ್ರೆವೀನ್ ಮ್ಯಾಥ್ಯೂ 14 ರನ್ನಿಗೆ 4, ನಾಯಕ ದುನಿತ್ ವೆಲ್ಲಲಗೆ 31ಕ್ಕೆ 3 ವಿಕೆಟ್ ಉಡಾಯಿಸಿದರು.