Advertisement

ಶೈ ಹೋಪ್‌ ಅಜೇಯ ಶತಕ; ನೆದರ್ಲೆಂಡ್ಸ್‌ ವಿರುದ್ಧ ವೆಸ್ಟ್‌ ಇಂಡೀಸ್‌ 7 ವಿಕೆಟ್‌ಗಳ ಗೆಲುವು

06:33 PM Jun 01, 2022 | Team Udayavani |

ಆಮ್‌ಸ್ಟೆಲ್ವಿನ್‌: ಆತಿಥೇಯ ನೆದರ್ಲೆಂಡ್ಸ್‌ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಡಿ-ಎಲ್‌ ನಿಯಮದಂತೆ 7 ವಿಕೆಟ್‌ಗಳ ಗೆಲುವು ಸಾಧಿಸಿದೆ.

Advertisement

ಓಪನರ್‌ ಶೈ ಹೋಪ್‌ ಅವರ ಅಜೇಯ 119 ರನ್‌ ವಿಂಡೀಸ್‌ ಸರದಿಯ ಆಕರ್ಷಣೆ ಆಗಿತ್ತು. ಮಳೆಯಿಂದ ಅಡಚಣೆಗೊಳಗಾದ ಈ ಪಂದ್ಯವನ್ನು 45 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ನೆದರ್ಲೆಂಡ್ಸ್‌ 7 ವಿಕೆಟಿಗೆ 240 ರನ್‌ ಗಳಿಸಿದರೆ, ವೆಸ್ಟ್‌ ಇಂಡೀಸ್‌ಗೆ ಡಕ್‌ವರ್ತ್‌-ಲೂಯಿಸ್‌ ನಿಯಮದಂತೆ ಇದಕ್ಕೂ ಹೆಚ್ಚಿನ, 247 ರನ್‌ ಗುರಿ ಲಭಿಸಿತು. ಅದು 43.1 ಓವರ್‌ಗಳಲ್ಲಿ 3 ವಿಕೆಟಿಗೆ 249 ರನ್‌ ಬಾರಿಸಿ ಗೆದ್ದು ಬಂದಿತು.

ಹೋಪ್‌ 2ನೇ ಸೆಂಚುರಿ
ವಿಕೆಟ್‌ ಕೀಪರ್‌ ಬ್ಯಾಟರ್‌ ಶೈ ಹೋಪ್‌ 130 ಎಸೆತಗಳಿಂದ ಅಮೋಘ 119 ರನ್‌ ಬಾರಿಸಿ ವಿಂಡೀಸ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ ಒಳಗೊಂಡಿತ್ತು. ಇದು ಅವರ 2ನೇ ಏಕದಿನ ಶತಕ.

ಮತ್ತೋರ್ವ ಆರಂಭಕಾರ ಶಮರ್‌ ಬ್ರೂಕ್ಸ್‌ 60 ರನ್‌ ಹೊಡೆದರು. ಮೊದಲ ವಿಕೆಟಿಗೆ 23.3 ಓವರ್‌ಗಳಿಂದ 120 ರನ್‌ ಒಟ್ಟುಗೂಡಿತು. ಬಳಿಕ 13 ರನ್‌ ಅಂತರದಲ್ಲಿ 3 ವಿಕೆಟ್‌ ಉರುಳಿತಾದರೂ ವೆಸ್ಟ್‌ ಇಂಡೀಸ್‌ಗೆ ಯಾವುದೇ ಆತಂಕ ಎದುರಾಗಲಿಲ್ಲ. ಬ್ರ್ಯಾಂಡನ್‌ ಕಿಂಗ್‌ ಅಜೇಯ 58 ರನ್‌ ಹೊಡೆದು ಹೋಪ್‌ಗೆ ಉತ್ತಮ ಸಾಥ್‌ ಕೊಟ್ಟರು. ಮುರಿಯದ 4ನೇ ವಿಕೆಟಿಗೆ 116 ರನ್‌ ಒಟ್ಟುಗೂಡಿತು.

ನೆದರ್ಲೆಂಡ್ಸ್‌ ಪರ ಮೊದಲ ಏಕದಿನ ಪಂದ್ಯವಾಡಿದ ನ್ಯೂಜಿಲ್ಯಾಂಡ್‌ ಮೂಲದ ತೇಜ ನಿದಾಮನುರು ಸರ್ವಾಧಿಕ 58 ರನ್‌ ಹೊಡೆದರು (51 ಎಸೆತ, 3 ಬೌಂಡರಿ, 2 ಸಿಕ್ಸರ್‌). ಪಂಜಾಬ್‌ ಮೂಲದ ಆರಂಭಕಾರ ವಿಕ್ರಮ್‌ಜೀತ್‌ ಸಿಂಗ್‌ 47 ಮತ್ತು ಮ್ಯಾಕ್ಸ್‌ ಓಡೌಡ್‌ 39 ರನ್‌ ಹೊಡೆದರು. ಬೌಲಿಂಗ್‌ ದಾಳಿಗಿಳಿದ ವಿಂಡೀಸ್‌ನ ಎಲ್ಲ 5 ಮಂದಿಯೂ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು.

Advertisement

ಸಂಕ್ಷಿಪ್ತ ಸ್ಕೋರ್‌:
ನೆದರ್ಲೆಂಡ್ಸ್‌-45 ಓವರ್‌ಗಳಲ್ಲಿ 7 ವಿಕೆಟಿಗೆ 240 (ನಿದಾಮನುರು ಅಜೇಯ 58, ವಿಕ್ರಮ್‌ಜೀತ್‌ 47, ಓಡೌಡ್‌ 39, ಅಖೀಲ್‌ ಹೊಸೇನ್‌ 29ಕ್ಕೆ 2, ಕೈಲ್‌ ಮೇಯರ್ 50ಕ್ಕೆ 2).

ವೆಸ್ಟ್‌ ಇಂಡೀಸ್‌-43.1 ಓವರ್‌ಗಳಲ್ಲಿ 3 ವಿಕೆಟಿಗೆ 249 (ಹೋಪ್‌ ಅಜೇಯ 119, ಬ್ರೂಕ್ಸ್‌ 58, ಕಿಂಗ್‌ ಔಟಾಗದೆ 58, ವಾನ್‌ ಬೀಕ್‌ 49ಕ್ಕೆ 2). ಪಂದ್ಯಶ್ರೇಷ್ಠ: ಶೈ ಹೋಪ್‌.

Advertisement

Udayavani is now on Telegram. Click here to join our channel and stay updated with the latest news.

Next