ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಪೆಟ್ರೋಲಿಯಂ ಸಚಿವ ಶಾಹೀದ್ ಖಾನ್ ಅಬ್ಟಾಸಿ ಅವರು ನವಾಜ್ ಷರೀಫ್ ಅವರ ಉತ್ತರಾಧಿಕಾರಿಯಾಗಿ, ಪಾಕಿಸ್ಥಾನದ 18ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಪನಾಮಾ ಗೇಟ್ ಹಗರಣದಲ್ಲಿ ಭ್ರಷ್ಟರೆಂದು ಸುಪ್ರೀಂ ಕೋರ್ಟ್ ನಿಂದ ಘೋಷಿಸಲ್ಪಟ್ಟ ಪ್ರಧಾನಿ ನವಾಜ್ ಷರೀಫ್ ಹುದ್ದೆಗೆ ಅನರ್ಹರಾದ ನಾಲ್ಕು ದಿನಗಳ ತರುವಾಯ ಪಾಕ್ ಸಂಸದರು ಅಬ್ಟಾಸಿ ಅವರನ್ನು ನೂತನ ಪ್ರಧಾನಿಯನ್ನಾಗಿ ಇಂದು ಆಯ್ಕೆ ಮಾಡಿದರು.
ಪಿಎಂಎಲ್‌ಎನ್ ನಾಯಕ ಶಾಹೀದ್ ಅಬ್ಟಾಸಿ ಅವರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಂದು ನಡೆದ ಮತದಾನದಲ್ಲಿ 221 ಮತಗಳನ್ನು ಪಡೆದು ಪ್ರಧಾನಿ ಹುದ್ದೆಗೆ ಆಯ್ಕೆಯಾದರು.
ಹಾಗಿದ್ದರೂ ಅಬ್ಟಾಸಿ ಅವರು ತತ್ಕಾಲೀನ ಪ್ರಧಾನಿ ಆಗಿದ್ದಾರೆ. ಪಂಜಾಬ್ ಮುಖ್ಯಮಂತ್ರಿಯಾಗಿರುವ ನವಾಜ್ ಷರೀಫ್ ಅವರ ಸಹೋದರ ಶಹಬಾಜ್ ಷರೀಫ್ ಅವರು ಒಕ್ಕೂಟ ಸರಕಾರದ ಅಧಿಕಾರವನ್ನು ಔಪಚಾರಿಕವಾಗಿ ವಹಿಸಿಕೊಳ್ಳುವ ತನಕದ ಅವಧಿಗೆ ಅಬ್ಟಾಸಿ ತತ್ಕಾಲೀನ ಪ್ರಧಾನಿಯಾಗಿರುತ್ತಾರೆ.
ಅಬ್ಟಾಸಿ ಅವರನ್ನು ತತ್ಕಾಲೀನ ಪ್ರಧಾನಿಯನ್ನಾಗಿ ಆಯ್ಕೆ ಮಾಡುವುದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತ ಹೊಂದಿರುವ ಪಿಎಂಎಲ್‌ಎನ್‌ಗೆ ಏನೇನೂ ಕಷ್ಟವಾಗಲಿಲ್ಲ.
ನವಾಜ್ ಷರೀಫ್ ಅವರ ಸಹೋದರ, ವಿಶಾಲ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿರುವ ಶಹಬಾಜ್ ಸಂಸದೀಯ ಚುನಾವಣೆಯನ್ನು ಗೆದ್ದ ಬಳಿಕವಷ್ಟೇ ಪಿಎಂಎಲ್‌ಎನ್ ಸಂಸದರು ಅವರನ್ನು ದೇಶದ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಬಹುದಾಗಿದೆ.