ಕರಾಚಿ: ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನಿಶ್ ಕನೇರಿಯ ಅವರು ಕಳೆದ ಕೆಲವು ತಿಂಗಳ ಹಿಂದೆ ತಾನು ಹಿಂದೂ ಎಂಬ ಕಾರಣಕ್ಕಾಗಿ ತಂಡದಲ್ಲಿ ಹಲವು ಮಂದಿ ನನ್ನನ್ನು ಹೀನಾಯವಾಗಿ ನೋಡಿದ್ದರು ಎಂದು ಆರೋಪ ಮಾಡಿ ಸುದ್ದಿಯಾಗಿದ್ದರು. ಇದೀಗ ತನ್ನ ಕ್ರಿಕೆಟ್ ವೃತ್ತಿಜೀವನ ಅಂತ್ಯಗೊಳ್ಳಲು ಕಾರಣಕರ್ತರಾದ ಆಟಗಾರನ ಹೆಸರನ್ನು ಬಹಿರಂಗಪಡಿಸುವ ಮೂಲಕ ಕನೇರಿಯ ಮತ್ತೆ ಸುದ್ದಿಯಾಗಿದ್ದಾರೆ.
ಕರಾಚಿಯಿಂದ ಮಾತನಾಡಿದ ಕನೇರಿಯ, ಕ್ರಿಕೆಟ್ ವೃತ್ತಿ ಜೀವನದಲ್ಲಿ ಶಾಹೀದ್ ಅಫ್ರಿದಿ ನನ್ನನ್ನು ಅತ್ಯಂತ ಹೀನಾಯವಾಗಿ ಕಂಡಿದ್ದರು. ಹಿಂದೂ ಆಟಗಾರನಾಗಿ ಪಾಕಿಸ್ಥಾನ ಕ್ರಿಕೆಟ್ ತಂಡದಲ್ಲಿ ಮಿಂಚುವುದು ಬಹಳ ಕಷ್ಟ ಎಂದು ಹೇಳಿದ್ದರು ಎಂದು ಕನೇರಿಯ ತಿಳಿಸಿದ್ದಾರೆ.
ದೇಶೀಯ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅಫ್ರಿದಿ ಹಾಗೂ ನಾನು ಒಂದೇ ಸಮಯದಲ್ಲಿ ಆಡಿದ್ದೆವು. ಆದರೆ ಅಫ್ರಿದಿ ಯಾವಾಗಲೂ ನನಗೆ ವಿರುದ್ಧವಾಗಿದ್ದರು. ನಾನು ಹಿಂದೂ ಧರ್ಮದವನಾಗಿದ್ದರಿಂದ ಅವರು ನನ್ನ ವಿರುದ್ಧ ಯಾವಾಗಲೂ ಕಿಡಿಕಾರುತ್ತಿದ್ದರು ಎಂದು ಕನೇರಿಯ ಆರೋಪಿಸಿದ್ದಾರೆ.
ಅಫ್ರಿದಿಯಿಂದಾಗಿಯೇ ನಾನು ವೃತ್ತಿ ಜೀವನದಲ್ಲಿ ಕೇವಲ 18 ಏಕದಿನ ಪಂದ್ಯಗಳಾಡಲು ಮಾತ್ರ ಸಾಧ್ಯವಾಯಿತು. ಇಲ್ಲವಾದಲ್ಲಿ ಹೆಚ್ಚಿನ ಏಕದಿನ ಪಂದ್ಯಗಳಲ್ಲಿ ಪಾಕಿಸ್ಥಾನವನ್ನು ಪ್ರತಿನಿಧಿಸುತ್ತಿದ್ದೆ ಏಕದಿನದಲ್ಲಿ ಅಫ್ರಿದಿ ಬೇರೆ ಸ್ಪಿನ್ನರ್‌ಗಳಿಗೆ ನೀಡಿದ ಪ್ರೋತ್ಸಾಹ ಹಾಗೂ ಸಹಕಾರ ನನಗೆ ನೀಡಲಿಲ್ಲ. ಆದರೂ ಪಾಕಿಸ್ಥಾನ ಪರ 10 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇನೆಂಬ ಸಂತೋಷ ಹಾಗೂ ಗೌರವ ನನಗಿದೆ ಎಂದು ಹೇಳಿದರು.
ಏನೇ ಆಗಲಿ ಇಂಝಮಾಮ್ ಉಲ್ ಹಕ್ ನನ್ನ ಬಗ್ಗೆ ಸಾರ್ವಜನಿಕವಾಗಿ ಸಕರಾತ್ಮಕವಾಗಿ ಮಾತನಾಡದಿದ್ದರೂ ಅವರು ನನಗೆ ನೀಡಿದ್ದ ಸಹಕಾರಕ್ಕೆ ನಾನು ಚಿರಋಣಿ ಎಂದು ಕನೇರಿಯ ಹೇಳಿದ್ದಾರೆ.
ಕನೇರಿಯ ಪಾಕಿಸ್ಥಾನ ಕ್ರಿಕೆಟ್ ತಂಡದ ಪರ 18 ಏಕದಿನ ಮತ್ತು 61 ಟೆಸ್ಟ್ ಪಂದ್ಯಗಳನ್ನಾಡಿ 261 ವಿಕೆಟ್ ಪಡೆದುಕೊಂಡಿದ್ದಾರೆ.