ಇಸ್ಲಾಮಾಬಾದ್ : ಪಾಕಿಸ್ಥಾನ ಕ್ರಿಕೆಟ್ ತಂಡದ ವೇಗಿ ಶಾಹೀನ್ ಶಾ ಅಫ್ರಿದಿ ಗಾಯದಿಂದ ಗುಣಮುಖರಾಗಿ ಫಿಟ್ ಆಗಿದ್ದು, ಟಿ 20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಆಡಲಿದ್ದಾರೆ ಎಂದು ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.
ಪಾಕ್ ಮೊದಲ ಪಂದ್ಯವನ್ನು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತದ ವಿರುದ್ಧ ಅಕ್ಟೋಬರ್ 23 ರಂದು ಆಡಲಿದೆ.
ಏಷ್ಯಾ ಕಪ್ 2022 ಮತ್ತು ಇಂಗ್ಲೆಂಡ್ ಟಿ20 ಸರಣಿ, ಬಾಂಗ್ಲಾದೇಶವನ್ನು ಒಳಗೊಂಡಿರುವ ನ್ಯೂಜಿಲೆಂಡ್ ಟಿ 20 ತ್ರಿಕೋನ ಸರಣಿಯಲ್ಲಿ ಅಫ್ರಿದಿ ಆಡಲು ಸಾಧ್ಯವಾಗಿರಲಿಲ್ಲ.
ಪಾಕಿಸ್ಥಾನದ ಚಾನೆಲ್ ಡಾನ್ ನ್ಯೂಸ್‌ನೊಂದಿಗೆ ಮಾತನಾಡಿದ ರಮೀಜ್, ಅಫ್ರಿದಿ ವಿಶ್ವಕಪ್‌ಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ. ಇದೆ ವೇಳೆ ಲೆಗ್ ಸ್ಪಿನ್ನರ್ ಉಸ್ಮಾನ್ ಖಾದಿರ್ ಗಾಯಗೊಂಡಿರುವ ಕಹಿ ಸುದ್ದಿ ಇದೆ ಎಂದು ಹೇಳಿದ್ದಾರೆ.
“ಉಸ್ಮಾನ್ ಖಾದಿರ್ ಗಾಯಗೊಂಡಿದ್ದಾರೆ, ಬೆರಳಿನಲ್ಲಿ ಮುರಿತ, ನಾವು ಯಾವ ಆಯ್ಕೆಯನ್ನು ಹೊಂದಿದ್ದೇವೆ ಎಂಬುದನ್ನು ನೋಡುತ್ತೇವೆ, ಫಖರ್ ಜಮಾನ್ ಕೂಡ ಉತ್ತಮವಾಗುತ್ತಿದ್ದಾರೆ, ಅವರು ಬಹಳ ಮುಖ್ಯವಾಗಬಹುದು ಎಂದು ನಾನು ಭಾವಿಸುತ್ತೇನೆ, ಎಂದು ರಮೀಜ್ ರಾಜಾ ತಿಳಿಸಿದರು.
ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ನಂತರ ಶಾಹೀನ್ ಮೊಣಕಾಲಿನ ತೊಂದರೆಗೆ ಒಳಗಾಗಿದ್ದರು.ನಂತರ ಅವರು ಚೇತರಿಸಿಕೊಳ್ಳಲು ಲಂಡನ್‌ಗೆ ಹೋಗಿದ್ದರು.
ಎರಡನೇ ಬಾರಿ ಪ್ರಶಸ್ತಿಯನ್ನು ಗೆಲ್ಲಲು ತಮ್ಮ ಬೌಲಿಂಗ್ ದಾಳಿಯ ಮೇಲೆ ಅವಲಂಬಿತವಾಗಿರುವ ಪಾಕಿಸ್ಥಾನಕ್ಕೆ ಶಾಹೀನ್ ಮರಳಿರುವುದು ದೊಡ್ಡ ಉತ್ತೇಜನವಾಗಿದೆ. ಈಗಾಗಲೇ ನಸೀಮ್ ಶಾ, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ವಾಸಿಮ್ ರೂಪದಲ್ಲಿ ಉತ್ತಮ ವೇಗದ ದಾಳಿಯನ್ನು ಹೊಂದಿದೆ.