ಶಹಾಪುರ: ಆಲಮಟ್ಟಿ ಜಲಾಶಯದಿಂದ ಬೇಸಿಗೆ ಸಮಯದಲ್ಲಿ ಜನ ಜಾನುವಾರುಗಳಿಗಾಗಿ ನೀರನ್ನು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಕಳೆದ ಏ. 25ರಿಂದ ಜೆಬಿಸಿ, ಎಸ್‌ಬಿಸಿ ಮತ್ತು ಎಂಬಿಸಿ ಕಾಲುವೆಗಳಿಗೆ ನೀರು ಹರಿ ಬಿಡಲಾಗಿದ್ದು, ಈ ನೀರನ್ನು ಕಾಲುವೆ ಮೂಲಕ ಕೆರೆಗಳನ್ನು ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ತಾಲೂಕಿನ ನಡಿಹಾಳ ಗ್ರಾಮದ ಕೆರೆಗೆ ಕಾಲುವೆ ಮೂಲಕ ನೀರನ್ನು ತುಂಬಲು ಕೈಗೊಂಡ 1 ಕೋಟಿ 42 ಲಕ್ಷ ರೂ. ವೆಚ್ಚದ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
ನಡಿಹಾಳ ಕೆರೆ ಕಾಲುವೆಗೂ ಸಾಕಷ್ಟು ದೂರ ಇರುವುದರಿಂದ ಪೈಪ್ ಲೈನ್ ಇತರೆ ಕಾಮಗಾರಿಗೆ ವೆಚ್ಚ ಮಾಡಲಾಗಿದೆ. ಇದರಿಂದ ಜನ ಜಾನುವಾರುಗಳಿಗೆ ನೀರಿನ ಅನುಕೂಲವಾಗಲಿದೆ. ಕೆರೆಗೆ ತುಂಬಿದ ನೀರಿನಿಂದ ಯಾರೊಬ್ಬರು ದುರ್ಬಳಕೆ ಮಾಡಿಕೊಳ್ಳಬಾರದು. ಜಾನುವಾರುಗಳಿಗೆ ಕುಡಿಯಲು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ನಡಿಹಾಳ, ಮುಡಬೂಳ, ಗೋಗಿ, ಹೊಸ್ಕೇರಾ ಸೇರಿದಂತೆ ಕೆಲವು ಕೆರೆಗಳಿಗೆ ಮತ್ತು ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹಣೆ ಮಾಡಲಾಗುತ್ತಿದೆ ಎಂದರು. ಸುತ್ತಮುತ್ತಲಿನ ಜನ ಜಾನುವಾರುಗಳಿಗೆ ನೀರಿನ ಸೌಕರ್ಯಗಳಿಂದ ಅಲ್ಪ ಪ್ರಮಾಣದಲ್ಲಿ ನೀರಿನ ದಾಹ ಹಿಂಗಿಸಿಕೊಳ್ಳಲು ಅನೂಕೂಲ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಬಿಜೆಎನ್ನೆಲ್ ಮುಖ್ಯ ಅಭಿಯಂತರ ಎಚ್. ಕೃಷ್ಣೇಗೌಡ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ ರಾಠೊಡ್ ಮುಖಂಡರಾದ ಶಿವಮಾಂತ ಚಂದಾಪುರ, ಚಂದಪ್ಪಗೌಡ ನಡಿಹಾಳ, ಮಹಾಂತಗೌಡ ಚಾಮನಾಳ, ದೇವಣಗೌಡ, ರಾಜು ರಾಠೊಡ್, ಶರಣಗೌಡ ಪಾಟೀಲ, ನಿಂಗಣಗೌಡ ಹದನೂರ ಸೇರಿದಂತೆ ಕಿರಿಯ ಅಭಿಯಂತರರು ನಡಿಹಾಳ ಮತ್ತು ಚಾಮನಾಳ ಗ್ರಾಮದ ಮುಖಂಡರು ಇದ್ದರು.
ತಾಲೂಕಿನ ಕೆರೆಗಳಿಗೆ ಹೂಳೆತ್ತುವ ಕಾಮಗಾರಿಗೆ 7 ಕೋಟಿ ರೂ. ಮಂಜೂರಿಯಾಗಿದ್ದು, ಇನ್ನೂ ಹೆಚ್ಚಿನ ಬೇಡಿಕೆ ಇಟ್ಟಿದ್ದು, ಅದಕ್ಕನುಗುಣವಾಗಿ ಹೆಚ್ಚುವರಿ ಅನುದಾನ ಒದಗಿಸಲಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸುವುದಕ್ಕಾಗಿ ನಡಿಹಾಳ ಕೆರೆಗೆ ಒಟ್ಟು 35 ಎಚ್.ಪಿ. 2 ಮೋಟಾರು ಯಂತ್ರಗಳನ್ನು ಅಳವಡಿಸಲಾಗಿದೆ. ನಿತ್ಯ 24 ಗಂಟೆಯೂ ವಿದ್ಯುತ್ ಸಂಪರ್ಕದೊಂದಿಗೆ ನೀರು ತುಂಬಿಸುವ ಕಾರ್ಯ ನಡೆಯುತ್ತದೆ. •
ಶರಣಬಸಪ್ಪಗೌಡ ದರ್ಶನಾಪುರ
ಶಾಸಕ