ಶಹಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2020-21ರಿಂದ 2024-25ರ ವರೆಗೆ ಜಲ ಜೀವನ ವಿನೂತನ ಯೋಜನೆಯಡಿ ತಾಲೂಕಿನ 198 ಗ್ರಾಮಗಳಲ್ಲಿನ ಅಂದಾಜು 68, 472 ಕುಟುಂಬದ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ನಳಗಳ ಮೂಲಕ ಪೂರೈಸಲಾಗುತ್ತಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ರಾಜಕುಮಾರ ಪತ್ತಾರ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಜಲ ಜೀವನ ಯೋಜನೆ ವಿವರ ನೀಡಿದ ಅವರು, ನಾಲ್ಕು ವರ್ಷದ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಒಟ್ಟು 84.20 ಕೋಟಿ ರೂ. ವೆಚ್ಚ ತಗುಲಲಿದೆ. ಈಗಾಗಲೇ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಸಲ್ಲಿಸಲಾಗಿದೆ. ಮೊದಲ ಹಂತದಲ್ಲಿ 2020-21ನೇ ಸಾಲಿನಲ್ಲಿ 198 ಗ್ರಾಮಗಳಲ್ಲಿ 47 ಗ್ರಾಮಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, 22,595 ಕುಟುಂಬಗಳ ಮನೆಗೆ ನಳದ ಮೂಲಕ ಶುದ್ಧ ನೀರು ಪೂರೈಸುವ ಗುರಿ ಹೊಂದಲಾಗಿದೆ. ಈ ಕೆಲಸಕ್ಕೆ ಅಂದಾಜು 29.37 ಲಕ್ಷ ರೂ. ಅನುಮೋದನೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಆನ್‌ಲೈನ್ ಕ್ಲಾಸ್ ಕುರಿತು ತಾಪಂ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕ್ಷೇತ್ರ ಶಿಕ್ಷಾಣಾಧಿಕಾರಿ ರುದ್ರಗೌಡ ಪಾಟೀಲ, ಆನ್‌ಲೈನ್ ಕ್ಲಾಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಮುಂದಿನ ಆದೇಶದವರೆಗೂ ಶಾಲೆ ಕಾಲೇಜುಗಳನ್ನು ಆರಂಭಿಸುವ ಪ್ರಸ್ತಾಪವಿಲ್ಲ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಗುರುರಾಜ, ಕೊರೊನಾ ಹಾವಳಿಯಿಂದಾಗಿ ಅಂಗನವಾಡಿ ಕೇಂದ್ರ ಬಂದ್ ಮಾಡಿರುವ ಕಾರಣ ಪ್ರತಿ ಮಗುವಿಗೂ ಆಹಾರ ಧಾನ್ಯಗಳನ್ನು ಮನೆ ಮನೆಗೆ ತೆರಳಿ ವಿತರಿಸಲಾಗಿದೆ. ಜೂನ್‌ನಿಂದ ಜುಲೈ ಅಂತ್ಯದವರೆಗೂ ಎಲ್ಲ ಅಂಗನವಾಡಿ ಕಾರ್ಯಕರ್ತರಿಗೆ ಕೋವಿಡ್ ಟೆಸ್ಟಿಂಗ್ ಮಾಡಿಸಲಾಗುತ್ತದೆ ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಗೌತಂ ಮಾತನಾಡಿ, ಏಕದಳ ಧಾನ್ಯಗಳಲ್ಲಿ 24,968 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, 220 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ದ್ವಿದಳ ಧಾನ್ಯಗಳು 33,848 ಹೆಕ್ಟೇರ್ ಬಿತ್ತನೆ ಗುರಿ ಇದೆ. 19408 ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯಾಗಿದೆ. ಎಣ್ಣೆಕಾಳು 371 ಹೆಕ್ಟೇರ್ ಗುರಿ ಇದ್ದು, 23 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ವಾಣಿಜ್ಯ ಬೆಳೆಗಳು ಒಟ್ಟು 75,550 ಹೆಕ್ಟೇರ್ ಗುರಿ ಇದ್ದು, 27, 270 ಹೆಕ್ಟೇರ್ ಭೂಮಿಯಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಒಟ್ಟು ಮುಂಗಾರು ಹಂಗಾಮು 1,34,737 ಹೆಕ್ಟೇರ್ ಜಮೀನಿನಲ್ಲಿ ಬಿತ್ತುವ ಗುರಿ ಹೊಂಡಲಾಗಿದ್ದು, ಈಗಾಗಲೇ 46,701 ಹೆಕ್ಟೇರ್ ಜಮೀನುಗಳಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಶೇ.43ರಷ್ಟು ಬಿತ್ತನೆ ಸಾಧಿಸಲಾಗಿದೆ. ರೈತರಿಗೆ ಅಗತ್ಯವಿರುವ ರಸಗೊಬ್ಬರ ರೈತ ಸಂಪರ್ಕ ಕೇಂದ್ರಗಳಲ್ಲಿ ಒಟ್ಟು 51350 ಟನ್ ಲಭ್ಯವಿದೆ ಎಂದು ವಿವರಿಸಿದರು.
ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಮೂರ್ತಿ, ತಾಪಂ ಸದಸ್ಯರಾದ ಹೊನ್ನಪ್ಪಗೌಡ, ಪರಶುರಾಮ ಕುರುಕುಂದಿ, ಬಸವಂತರಡ್ಡಿ, ಭೀಮರಡ್ಡಿ ಪೂಜಾರಿ, ಸಿದ್ಧಲಿಂಗಪ್ಪಗೌಡ ಪಾಟೀಲ, ಹಣಮಂತ್ರಾಯ ದಳಪತಿ ಇದ್ದರು.