Advertisement

ಶಹಾಬಾದ ನಗರಸಭೆ : ಶೇ. 66.6 ಮತದಾನ

07:12 PM Mar 30, 2021 | Team Udayavani |

ಶಹಾಬಾದ: ನಗರಸಭೆ ವಾರ್ಡ್‌ ನಂ.18ರ ಉಪ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ 66.6 ಮತದಾನವಾಗಿದೆ. ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆ ಕೇಂದ್ರದಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿತ್ತು. ಬೆಳಗಿನ ಜಾವದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದರು.

Advertisement

ಮಧ್ಯಾಹ್ನ ಹೊತ್ತಿಗೆ ನೀರಸ ಪ್ರಕ್ರಿಯೆ ಕಂಡು ಬಂದರೂ, ಮತ್ತೆ ನಾಲ್ಕು ಗಂಟೆಯಿಂದ ಬಿರುಸಿನ ಮತದಾನ ಕಂಡುಬಂದಿತು. ಹೊಟ್ಟೆ ಪಾಡಿಗಾಗಿ ಪಟ್ಟಣಕ್ಕೆ ಗುಳೆ ಹೋಗಿದ್ದ ಜನರನ್ನು ಅಭ್ಯರ್ಥಿಗಳು ಕರೆಯಿಸಿ, ತಮ್ಮ ಪರವಾಗಿ ಮತದಾನ ಮಾಡಿಸಲು ಹರಸಾಹಸ ಪಡುತ್ತಿದ್ದರು. ಕೂಲಿಕಾರರು, ರೈತರು ಬೆಳಗ್ಗೆ ಬೇಗನೆ ಬಂದು ಮತ ಚಲಾಯಿಸಿ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಮತಗಟ್ಟೆಯ ಸಮೀಪದಲ್ಲಿ ಅಭ್ಯರ್ಥಿಗಳು ನಿಂತು ಮತದಾರರನ್ನು ಓಲೈಸಲು ಮುಂದಾಗುತ್ತಿದ್ದರು. ಗದಗ, ರಾಯಚೂರು, ಕಲಬುರಗಿ, ಯಾದಗಿರಿ, ದಾವಣೆಗೆರೆಯಲ್ಲಿ ಕೆಲಸಕ್ಕೆ ಹೋದ ಮತದಾರರನ್ನು ನಗರಕ್ಕೆ ಕರೆತರಲು ಅಭ್ಯರ್ಥಿಗಳು ವಾಹನಗಳ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಅಭ್ಯರ್ಥಿಗಳು ಮತದಾರರಿಗೆ ಕರೆ ಮಾಡಿ ಮತ ಚಲಾಯಿಸಲು ಹೇಳುತ್ತಿರುವುದು ಕಂಡು ಬಂದಿತು.

ಮತದಾನದ ವೇಳೆ ಸ್ಯಾನಿಟೈಸರ್‌, ಸ್ಕ್ರೀನಿಂಗ್‌ ಮೂಲಕ ಪರೀಕ್ಷೆ ನಡೆಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಮತ ಚಲಾಯಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಉಮೇಶ ಚಿಕ್ಕಮಠ ನೇತೃತ್ವದಲ್ಲಿ ಪಿಎಸ್‌ಐಗಳಾದ ತಿರುಮಲೇಶ, ಯಲ್ಲಮ್ಮ ಹಾಗೂ ಪೊಲೀಸ್‌ ಸಿಬ್ಬಂದಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಿದ್ದರು.

ನಗರಸಭೆಯ ವಾರ್ಡ್‌ ನಂ.18ರಲ್ಲಿ 998 ಮತದಾರರಿದ್ದು, ಅದರಲ್ಲಿ 490 ಪುರುಷ ಹಾಗೂ 508 ಮಹಿಳಾ ಮತದಾರರಿದ್ದಾರೆ. ಅದರಲ್ಲಿ 615 ಮತದಾರರು (314 ಪುರುಷ, 301 ಮಹಿಳೆ) ಮತ ಚಲಾಯಿಸಿದರು. ತಾಲೂಕಿನಲ್ಲಿ ಒಟ್ಟು ಶೇ 66.6 ಮತದಾನದಲ್ಲಿ ಶೇ. 64 ಪುರುಷ ಮತದಾರು ಹಾಗೂ ಶೇ. 59.25 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆಂದು ತಹಶೀಲ್ದಾರ್‌ ಸುರೇಶ ವರ್ಮಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next