Advertisement

ಶಾ ವಿರುದ್ಧ ಬರಹ: ಪೊಲೀಸ್‌ಆಯುಕ್ತರಿಗೆ ಬಿಜೆಪಿ ದೂರು

08:00 AM Sep 21, 2017 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣಗಳಾದ ವೆಬ್‌ಸೈಟ್‌ ಮತ್ತು ಫೇಸ್‌ಬುಕ್‌ ಪೇಜ್‌ಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕುರಿತು ಮಾಡುತ್ತಿರುವ ಅಪಪ್ರಚಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಬೆಂಗಳೂರು ಪೊಲೀಸ್‌ ಆಯುಕ್ತರು ಮತ್ತು ಮಲ್ಲೇಶ್ವರ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಪ್ರತ್ಯೇಕ ದೂರು ನೀಡಿದೆ.

Advertisement

ಈ ದೂರಿನ ಪ್ರತಿಯನ್ನು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೂ ನೀಡಲಾಗಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ದುರುಪಯೋಗವಾಗುತ್ತಿರುವ ವೈಬ್‌ಸೈಟ್‌ ಮತ್ತು ಫೇಸ್‌ಬುಕ್‌ ಪೇಜ್‌ಗಳನ್ನು ಸ್ಥಗಿತಗೊಳಿ ಸಬೇಕೆಂದು ಒತ್ತಾಯಿಸಲಾಗಿದೆ. 
ಮೈಬೆಂಗಳೂರು.ಕಾಮ್‌ ವೆಬ್‌ಸೈಟ್‌ ಮೂಲಕ ಅಮಿತ್‌ ಶಾರವರು ನವೆಂಬರ್‌ 1ರಂದು ಕನ್ನಡ ಧ್ವಜದ ಬದಲು ಬಿಜೆಪಿ ಧ್ವಜ ಹಾರಿಸುವಂತೆ ಕರೆ ನೀಡಿದ್ದಾರೆಂಬ ಸುಳ್ಳು ಸುದ್ದಿ ಹರಿಬಿಡಲಾಗಿದೆ. ಇದು ಚುನಾವಣೆ ಸಮೀಪಿಸುತ್ತಿರುವಂತೆ ಕುಚೋದ್ಯದಿಂದ ಭಾಷೆ ಹೆಸರಿನಲ್ಲಿ ಶಾಂತಿ ಕದಡುವ ಪ್ರಯತ್ನವಾಗಿದ್ದು, ಈ ಹಿಂದೆಯೂ ಭಾಷೆಯ ಹೆಸರಿನಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆತರುವ ಪ್ರಯತ್ನ ಮಾಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಲ್ಲದೆ, ನಮ್ಮ ಮೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಫೇಸ್‌ಬುಕ್‌ ಪೇಜಿಗೂ ಮೈಬೆಂಗಳೂರು.ಕಾಮ್‌ ವೆಬ್‌ಸೈಟ್‌ ಲಿಂಕ್‌ ಹಾಕಿ ಈ ಮಾಹಿತಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಬಿಜೆಪಿ ಮತ್ತು ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ಅಪಪ್ರಚಾರ ನಡೆಸುವ ಸಲುವಾಗಿ ಮುಖ್ಯಮಂತ್ರಿಗಳ ಆಪ್ತರೇ ಈ ವೆಬ್‌ಸೈಟ್‌ ಆರಂಭಿಸಿ ದ್ದಾರೆಂದು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ. 

ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಎನ್‌.ರವಿಕುಮಾರ್‌, ರಾಜ್ಯ ವಕ್ತಾರರಾದ ಗೋ.ಮಧುಸೂಧನ್‌, ಅಶ್ವತ್ಥನಾರಾಯಣ ಮತ್ತು ಸಹವಕ್ತಾರ ಎಸ್‌. ಪ್ರಕಾಶ್‌ ದೂರು ನೀಡಿದರೆ, ಮಲ್ಲೇಶ್ವರ ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರಿಗೆ ಬಿಜೆಪಿ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಸಹ ಸಂಚಾಲಕ ಪ್ರಶಾಂತ ಮಾಕನೂರ ದೂರು ನೀಡಿದ್ದಾರೆ. 

ರಾಜ್ಯಕ್ಕಿಂದು ಜಾವಡೇಕರ್‌
ಬೆಂಗಳೂರು: ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಚುನಾವಣಾ
ಸಿದ್ಧತೆಗಳ ಕುರಿತಂತೆ ಚರ್ಚಿಸಲು ಗುರುವಾರ ರಾಜ್ಯಕ್ಕೆ ಆಗಮಿಸುತ್ತಿದ್ದು, ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಸಭೆಗಳನ್ನು ನಡೆಸಲಿದ್ದಾರೆ. ಗುರುವಾರ ಬೆಳಗ್ಗೆ ಬೀದರ್‌ ಜಿಲ್ಲೆಯ ಹುಮ್ನಾಬಾದ್‌ಗೆ ಆಗಮಿಸಲಿರುವ ಜಾವಡೇಕರ್‌ ಬೀದರ್‌ ಜಿಲ್ಲಾ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳುವರು. ನಂತರ ಕಲಬುರಗಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಸಂಜೆ ಸೆಂಟ್ರಲ್‌
ಯೂನಿವರ್ಸಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ (ಸೆ.22)ಯಾದಗಿರಿ ಹಾಗೂ ರಾಯಚೂರು, ಶನಿವಾರ (ಸೆ.23) ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next