Advertisement

ಆರ್‌ಎಸ್‌ಎಸ್‌ ನಾಯಕರ ಜತೆ ಶಾ ಸಮಾಲೋಚನೆ

06:25 AM May 01, 2018 | |

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೋಮವಾರ ಆರ್‌ಎಸ್‌ಎಸ್‌ ನಾಯಕರನ್ನು ಭೇಟಿ ಮಾಡಿ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ, ಟಿಕೆಟ್‌ ಹಂಚಿಕೆಯಲ್ಲಿನ ಲೋಪ ಹಾಗೂ ಕಳಂಕಿತರಿಗೆ ಮಣೆ ಹಾಕಿರುವುದರ ಬಗ್ಗೆ ಅಸಮಾಧಾನ ಹೊಂದಿದ್ದ ಆರ್‌ಎಸ್‌ಎಸ್‌ ನಾಯಕರನ್ನು ಸಮಾಧಾನಪಡಿಸಿದರು ಎಂದು ಮೂಲಗಳು ತಿಳಿಸಿವೆ.

Advertisement

ಆರ್‌ಎಸ್‌ಎಸ್‌ ನಿಗದಿಪಡಿಸಿದ್ದ ಮಾನದಂಡದಡಿ ಟಿಕೆಟ್‌ ನೀಡದಿರುವುದು. ಪಕ್ಷದ ನಿಷ್ಠಾವಂತರು, ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಟಿಕೆಟ್‌ ನೀಡದಿರುವುದು. ಕಳಂಕಿತರಿಗೆ ಮತ್ತೆ ಅವಕಾಶ ಕೊಟ್ಟಿರುವುದರಿಂದ 40 ಕ್ಷೇತ್ರಗಳಲ್ಲಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದ ಆರ್‌ಎಸ್‌ಎಸ್‌ ತಳಮಟ್ಟದ ಕಾರ್ಯಕರ್ತರು ಬೇಸರಗೊಂಡು ತಟಸ್ಥರಾಗಿದ್ದರು. ಹೀಗಾಗಿ,  ಶಾ ನಗರದಲ್ಲಿರುವ ಆರ್‌ಎಸ್‌ಎಸ್‌ ಕಚೇರಿ “ಕೇಶವ ಕೃಪ’ಗೆ ಭೇಟಿ ನೀಡಿ ಮುಖಂಡರಾದ ವಿ.ನಾಗರಾಜ್‌, ಮುಕುಂದ್‌ ಅವರ ಜತೆ ಚರ್ಚಿಸಿದರು ಎಂದು ಹೇಳಲಾಗಿದೆ.

ಮುಂದೆ ತಪ್ಪು ಸರಿಪಡಿಸಲಾಗುವುದು. ಸರ್ಕಾರ ಬಂದರೆ ಮತ್ತೆ ತಪ್ಪುಗಳಾಗದಂತೆ ಎಚ್ಚರವಹಿಸಲಾಗುವುದು ಎಂದು ಆರ್‌ಎಸ್‌ಎಸ್‌ ನಾಯಕರಿಗೆ ಭರವಸೆ ನೀಡಿದರು ಎನ್ನಲಾಗಿದೆ.ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್‌ ಉಪಸ್ಥಿತರಿದ್ದರು.

ಸಮಾಲೋಚನೆ: ಇದಕ್ಕೂ ಮುನ್ನ  ಶಾ ಬೆಂಗಳೂರಿನ ನಿವಾಸದಲ್ಲಿ ಕೇಂದ್ರ ಸಚಿವ ಅನಂತಕುಮಾರ್‌, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್‌, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಜತೆ ಚುನಾವಣಾ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಿದರು.

ಅತೃಪ್ತಿ: ರಾಜ್ಯ ಬಿಜೆಪಿ ನಾಯಕರ ಕಾರ್ಯವೈಖರಿ ಬಗ್ಗೆಯೂ ಆರ್‌ಎಸ್‌ಎಸ್‌ ನಾಯಕರು  ಶಾ ಬಳಿ ಅತೃಪ್ತಿ ವ್ಯಕ್ತಪಡಿಸಿದ್ದು, ಸಾಮೂಹಿಕ ನಾಯಕತ್ವದಡಿ ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲ. ಹೊಂದಾಣಿಕೆ ರಾಜಕಾರಣದಿಂದ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ನಿರೀಕ್ಷಿತ ಸೀಟು ಬರುವುದು ಅನುಮಾನ ಎಂದು ಹೇಳಿದರು ಎನ್ನಲಾಗಿದೆ.

Advertisement

ಇಂದು ಶೃಂಗೇರಿಗೆ ಶಾ: ಅಮಿತ್‌ ಶಾ ಅವರು ಮಂಗಳವಾರ ಶೃಂಗೇರಿಗೆ ಭೇಟಿ ನೀಡಲಿದ್ದು ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ಸಾರ್ವಜನಿಕ ಸಭೆ ಮುಗಿಸಿ ಸಂಜೆ ಬಾಳೆ ಹೊನ್ನೂರು ಮಠದ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಅಲ್ಲೇ ಭೋಜನ ಸ್ವೀಕರಿಸಲಿದ್ದಾರೆ.  ಮೂಡಿಗೆರೆಯಲ್ಲಿ ಕಾಫಿ ಬೆಳೆಗಾರರೊಂದಿಗೆ ಸಂವಾದ ಸಹ ನಡೆಸುವರು.

ಪ್ರಣಾಳಿಕೆ ಮೇ 4?
ಪ್ರಣಾಳಿಕೆ ಮೂಲಕ ಭರ್ಜರಿ ಘೋಷಣೆಗಳನ್ನು ಮಾಡಲು ಬಿಜೆಪಿ ಸಿದ್ಧತೆ ನಡೆಸಿದ್ದು, 1 ಲಕ್ಷ ರೂ. ವರೆಗಿನ ರೈತರ ಸಾಲ ಮನ್ನಾ, ಮೂಲಸೌಕರ್ಯ ಅಭಿವೃದ್ಧಿಯ ಹೊಸ ಯೋಜನೆಗಳನ್ನು  ಘೋಷಿಸಲು ಮುಂದಾಗಿದೆ. ಮೇ 2 ರಂದು ಪ್ರಣಾಳಿಕೆ ಬಿಡುಗಡೆಗೆ ನಿರ್ಧರಿಸಲಾಗಿತ್ತಾದರೂ ಇದೀಗ ಮೇ 4 ರಂದು ಬಿಡುಗಡೆಗೆ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next