ಮಾಸ್ ಆಡಿಯನ್ಸ್‌ನ ಸಿನಿಮಾ ಥಿಯೇಟರ್‌ನತ್ತ ಆಕರ್ಷಿಸಲು ಮುಂದಾಗಿರುವ ಸಿನಿಮಾ ಮಂದಿ ಒಂದರ ಹಿಂದೊಂದು ಮಾಸ್ ಕಂಟೆಂಟ್ ಸಿನಿಮಾಗಳನ್ನ ಸಿನಿಪ್ರಿಯರ ಮುಂದೆ ತರುತ್ತಿದ್ದಾರೆ. ಈ ವಾರ ಕೂಡ ಅಂಥದ್ದೇ ಚಿತ್ರ “ಶ್ಯಾಡೊ’ ತೆರೆಗೆ ಬಂದಿದೆ.
ಸುಮಾರು ಎರಡು ವರ್ಷದಿಂದ ವಿನೋದ್ ಪ್ರಭಾಕರ್ ಸಿನಿಮಾಗಳನ್ನ ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡಿದ್ದ ಆ್ಯಕ್ಷನ್ ಪ್ರಿಯರ ಮುಂದೆ, ವರ್ಷದ ಆರಂಭದಲ್ಲಿಯೇ “ಶ್ಯಾಡೊ’ ಎಂಬ ಆ್ಯಕ್ಷನ್ – ಥ್ರಿಲ್ಲರ್ ಸಿನಿಮಾ ಬಂದಿದೆ.
ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ, ಇದ್ದಕ್ಕಿದ್ದಂತೆ ಪೊಲೀಸ್ ಸ್ಟೇಷನ್‌ಗೆ ಬರುವ ಕಾಮನ್‌ಮ್ಯಾನ್ ಒಬ್ಬ ತನ್ನ ನೆರಳು (ಶ್ಯಾಡೊ) ಕಾಣೆಯಾಗಿದೆ ಎಂದು ಪೊಲೀಸರ ಮುಂದೆ ದೂರು ಕೊಡುತ್ತಾನೆ. ಆರಂಭದಲ್ಲಿ ಕಳೆದು ಹೋಗೋದಕ್ಕೆ ನೆರಳೇನು ಪರ್ಸ್‌ನಲ್ಲಿರುವ ಹಣನಾ? ಎಂದು ಈ ಕಂಪ್ಲೆಂಟ್ ಮತ್ತು ಅದನ್ನು ಕೊಟ್ಟ ಕಾಮನ್‌ಮ್ಯಾನ್ ಎರಡನ್ನೂ ಹಗುರವಾಗಿ ಪರಿಗಣಿಸುವ ಪೊಲೀಸರು, ನಂತರ ಒಂದು ಹಂತದಲ್ಲಿ, ಈ ಕಾಮನ್‌ಮ್ಯಾನ್‌ಗೆ ಸೆಕ್ಯೂರಿಟಿ ಕೊಟ್ಟು ಕಾಪಾಡುವಷ್ಟರ ಮಟ್ಟಿಗೆ ಈ ವಿಚಾರದಲ್ಲಿ ಸೀರಿಯಸ್ ಆಗುತ್ತಾರೆ. ಹಾಗಾದರೆ ನಿಜಕ್ಕೂ ನೆರಳು ಕಳೆದು ಹೋಗೋದಕ್ಕೆ ಸಾಧ್ಯನಾ? ಅದು ಹೇಗೆ? ಅನ್ನೋದು ಗೊತ್ತಾಗುವ ಹೊತ್ತಿಗೆ “ಶ್ಯಾಡೊ’ ಮಧ್ಯಂತರಕ್ಕೆ ಬಂದಿರುತ್ತದೆ. ಇದೆಲ್ಲದಕ್ಕೂ ತಾರ್ಕಿಕ ಅಂತ್ಯ ಸಿಕ್ಕು ಈ ನೆರಳು – ಬೆಳಕಿನ ಕಣ್ಣಾಮುಚ್ಚಾಲೆ ಮುಗಿಯುವ ಹೊತ್ತಿಗೆ “ಶ್ಯಾಡೊ’ ಕ್ಲೈಮ್ಯಾಕ್ಸ್‌ಗೆ ಬರುತ್ತದೆ.
ಹೆಸರೇ ಹೇಳುವಂತೆ “ಶ್ಯಾಡೊ’ ಒಂದು ಸಸ್ಪೆನ್ಸ್ – ಕ್ರೈಂ ಸ್ಟೋರಿ. ಅದನ್ನಿಟ್ಟುಕೊಂಡು ಆ್ಯಕ್ಷನ್-ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ತರಲಾದ ಸಿನಿಮಾ. ಆರಂಭದಲ್ಲಿ ನಡೆದ ನಿಗೂಢ ಕೊಲೆಯೊಂದಕ್ಕೆ ಅಂತ್ಯದಲ್ಲಿ ಕಾರಣ ಸಿಗುತ್ತದೆ.
ಒಂದು ಕೊಲೆಯ ಸುತ್ತ ಇಡೀ ಚಿತ್ರ ಒಂದಷ್ಟು ಕುತೂಹಲ ಅಂಶಗಳನ್ನು ಇಟ್ಟುಕೊಂಡು ಸಾಗುತ್ತದೆ. ಹಾಗಾದರೆ ಇದಕ್ಕೆಲ್ಲ ಕಾರಣ ಯಾರಿರಬಹುದು ಅನ್ನೋದು ಊಹಿಸುವ ಹೊತ್ತಿಗೆ ಅಲ್ಲೊಂದು ಟ್ವಿಸ್ಟ್ ಇರುತ್ತದೆ! ಅಲ್ಲಲ್ಲಿ ಒಂದಷ್ಟು ಟ್ವಿಸ್ಟ್ – ಟರ್ನ್ ಕೊಟ್ಟು ಚಿತ್ರಕಥೆಯನ್ನು ಹೇಳುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಇದನ್ನೂ ಓದಿ:ಕಲರ್‌ಫುಲ್ ಪೊಲೀಸ್ ಸ್ಟೋರಿ! ‘ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ವಿಮರ್ಷೆ
ಇನ್ನು ವಿನೋದ್ ಪ್ರಭಾಕರ್ ಅವರ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್ “ಶ್ಯಾಡೊ’ದಲ್ಲಿದೆ. ಪಕ್ಕಾ ಆ್ಯಕ್ಷನ್ ಸಿನಿಮಾ ಎಂಬ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ಆ್ಯಕ್ಷನ್ ಜೊತೆಗೆ ಥ್ರಿಲ್ಲಿಂಗ್ ಅನುಭವವೂ ಚಿತ್ರದಲ್ಲಿ ಆಗುತ್ತದೆ. ವಿನೋದ್ ಪ್ರಭಾಕರ್ ತಮ್ಮ “ಶ್ಯಾಡೊ’ವನ್ನು ತೆರೆಮೇಲೆ ಸಮರ್ಥವಾಗಿ ನಿರ್ವಹಿಸಿದ್ದಾರೆ. ನಾಯಕಿ ಶೋಭಿತಾ ರಾಣಾ ಕೂಡ ಹೋಮ್ಲಿ ಮತ್ತು ಗ್ಲಾಮರಸ್ ಲುಕ್‌ನಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಶರತ್ ಲೋಹಿತಾಶ್ವ, ಗಿರಿ ಸೇರಿದಂತೆ ಬಹುತೇಕ ಕಲಾವಿದರದ್ದು ಅಚ್ಚಕಟ್ಟಾದ ಅಭಿನಯ. ಮನೋಹರ
ಜೋಶಿ ಛಾಯಾಗ್ರಹಣ “ಶ್ಯಾಡೊ’ವನ್ನು ತೆರೆಮೇಲೆ ಚೆನ್ನಾಗಿ ಕಟ್ಟಿಕೊಟ್ಟಿದೆ. ಚಿತ್ರದ ಸಂಕಲನ ಮತ್ತು ಸಂಭಾಷಣೆ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಕೊಡಬಹುದಿತ್ತು. ಹಾಡುಗಳು ಅಷ್ಟಾಗಿ ಕಿವಿಯಲ್ಲಿ ಉಳಿಯುವುದಿಲ್ಲ. ಒಟ್ಟಾರೆ ಮಾಸ್ ಸಿನಿಪ್ರಿಯರಿಗೆ “ಶ್ಯಾಡೊ’ ಮಿನಿಮಮ್ ಮನರಂಜನೆ ಕೊಡೋದರಲ್ಲಿ ಎರಡು ಮಾತಿಲ್ಲ.
ಜಿ. ಎಸ್ ಕಾರ್ತಿಕ ಸುಧನ್