Advertisement

ವಿಶಿಷ್ಟ ಚೇತನರಿಗೆ ಶಾದಿ ಭಾಗ್ಯ ಕರುಣಿಸುವ ಸಂಗಾತಿ ವೇದಿಕೆ 

07:30 AM Mar 02, 2018 | |

ಬೆಂಗಳೂರು: ಎರಡು ಸಂಬಂಧಗಳನ್ನು ಬೆಸೆಯುವ “ಮದುವೆ’ಗೆ ಭಾರತೀಯ ಪರಂಪರೆಯಲ್ಲಿ ವಿಶೇಷ ಮಹತ್ವವಿದೆ. ಸಾಮಾನ್ಯವಾಗಿ ಮದುವೆ ಎಂದ ಕೂಡಲೆ ವಯಸ್ಸಿಗೆ ಬಂದ ಗಂಡು ಮತ್ತು ಹೆಣ್ಣು ಮಕ್ಕಳ ಚಿತ್ರಣ ನಮ್ಮ ಕಣ್ಣ ಮುಂದೆ ಬರುತ್ತದೆ.
ಆದರೆ ಮದುವೆ ಎನ್ನುವುದು ಸಮಾಜದ ಸಿದ್ಧ ಮಾದರಿಯ ಕಟ್ಟು ಪಾಡುಗಳನ್ನು ಮೀರಿದ್ದು ಎನ್ನುತ್ತಾರೆ ಶ್ರೀಮತಿ ಶಾಂತಾ
ಕೊಟ್ರೇಶ್‌. ವಿಧವೆಯರು, ವಿದುರರು ಮತ್ತು ವಿಶಿಷ್ಟಚೇತನರಿಗೆ ಉಚಿತವಾಗಿ ಮದುವೆ ಮಾಡಿಸುವ ಸದುದ್ದೇಶದಿಂದ 2006ರಲ್ಲಿ “ಸಂಗಾತಿ ವೇದಿಕೆ’ ಸಂಸ್ಥೆಯನ್ನು ಸ್ಥಾಪಿಸಿದ್ದು ಶಾಂತಾ ಅವರ ಹೆಗ್ಗಳಿಕೆ.

Advertisement

ಸಂಗಾತಿ ವೇದಿಕೆ ಬಳಗ: ಬೆಂಗಳೂರಿನಲ್ಲಷ್ಟೇ ಅಲ್ಲ; ಕರ್ನಾಟಕದಾದ್ಯಂತ “ಸಂಗಾತಿ ವೇದಿಕೆ’ ಕಾರ್ಯಾಚರಿಸುತ್ತಿದೆ. ಹತ್ತಕ್ಕೂ ಹೆಚ್ಚು ಉಚಿತ ವಧು-ವರರ ಸಮಾವೇಶಗಳನ್ನು ನಡೆಸಿದೆ. ಈ ಸಂಸ್ಥೆಯ ಮುಖ್ಯಸ್ಥೆಯೇ ಶಾಂತಾ ಕೊಟ್ರೇಶ್‌. ಈವರೆಗೆ 300ಕ್ಕೂ ಹೆಚ್ಚು ಎರಡನೇ ಮದುವೆಗಳನ್ನು ಮಾಡಿಸಿರುವ ಖ್ಯಾತಿ ಅವರದ್ದು. ಈ ಸೇವೆಯಲ್ಲಿ ಅವರಿಗೆ ಸ್ನೇಹಿತೆಯರಾದ ಜ್ಯೋತಿ ತ್ರಿವೇದಿ, ಮಂಗಳಾ ಭಾಸ್ಕರ್‌ ಹಾಗೂ ಆಶಾ ಪಾಟೀಲ್‌ ಸಹಕರಿಸುತ್ತಿದ್ದಾರೆ. ಗೃಹಿಣಿಯಾಗಿ ತಮ್ಮ ಮನೆ ನಿರ್ವಹಣೆಯ ಜತೆ ಜೊತೆಗೇ,
ಇನ್ನೊಬ್ಬರ ಮನೆಯನ್ನು ಬೆಳಗುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

ನೊಂದ ಜೀವಗಳಿಗೆ ನೆರವು: ಎರಡನೇ ಮದುವೆ, ತಡವಾದ ಮದುವೆ, ವಿಶಿಷ್ಟಚೇತನರ ಮದುವೆ ಹಾಗೂ ಹಿರಿಯ ನಾಗರಿಕರ ಮದುವೆಗೂ ಇಲ್ಲಿ ಪ್ರಾಮುಖ್ಯತೆ ಕೊಡಲಾಗುತ್ತದೆ. ಮೊದಲನೇ ಮದುವೆಯವರಿಗೂ ಕೂಡಾ ಅವಕಾಶ ಮಾಡಿ ಕೊಡಲಾಗುತ್ತದೆ. ಇದುವರೆಗೂ ಪ್ರಶಸ್ತಿಗಾಗಿ ಕೈ ಚಾಚದೆ; ನಿಸ್ವಾರ್ಥ ಭಾವದಿಂದ “ಸಂಗಾತಿ ವೇದಿಕೆ’ ಈ ಕೆಲಸ ನಿರ್ವಹಿಸಿದೆ. ನಾಡಿನ ಮೂಲೆ ಮೂಲೆಗಳಿಂದ ಆಗಮಿಸುವ ನೊಂದ ಜೀವಗಳ ಪ್ರಶ್ನೆಗಳಿಗೆ ಉತ್ತರಿಸಿ, ಅಗತ್ಯ ನೆರವು ನೀಡುವ ಕೆಲಸದಲ್ಲೂ ವೇದಿಕೆ ನಿರತವಾಗಿದೆ.

2006ರಲ್ಲಿ ನಡೆದ ಮೊದಲ ವಧು-ವರರ ಸಮಾವೇಶದಲ್ಲೇ 500ಕ್ಕೂ ಅಧಿಕ ಜನರು ಸೇರಿದ್ದನ್ನು ನೋಡಿದ ಶಾಂತಾ ಅವರು, ಸಮಾಜದಲ್ಲಿ ಇಂಥದ್ದೊಂದು ವೇದಿಕೆಯ ಅಗತ್ಯವಿದೆ ಎಂಬುದನ್ನು ಮನಗಂಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ಈ ವೇದಿಕೆಯಲ್ಲಿ ನೋಂದಾಯಿಸಿದ್ದಾರೆ. ನೂರಾರು ಜೋಡಿಗಳು ತಮ್ಮ ಸಂಗಾತಿಯನ್ನು ಆರಿಸಿಕೊಂಡು 
ದಾಂಪತ್ಯ ಜೀವನಕ್ಕೆ ಕಾಲಿರಿಸಿವೆ. 

ಎಲ್ಲವೂ ವ್ಯವಸ್ಥಿತ: ಖುದ್ದು ಶಾಂತಾ ಅವರೇ ಗಂಡು ಹೆಣ್ಣುಗಳನ್ನು ನೋಡಿ, ಅವರಿಗೆ ಸರಿಹೊಂದುವವರನ್ನು ಜೊತೆ ಮಾಡುವುದು ವಿಶೇಷ. ಮೊದಲು, ತಮ್ಮ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿದ ನಂತರ ಆರು ತಿಂಗಳಿಗೊಮ್ಮೆ ಏರ್ಪಡಿಸಲಾಗುವ
ಸಮಾವೇಶಗಳಲ್ಲಿ ವಧು- ವರರು ಪರಸ್ಪರ ಪರಿಚಯ ಮಾಡಿಕೊಳ್ಳುತ್ತಾರೆ. ನಂತರ ಹೆಣ್ಣು ಗಂಡುಗಳ ಮನೆಯವರು ಮಾತಾಡಿಕೊಳ್ಳುತ್ತಾರೆ. ಎರಡೂ ಕಡೆಯವರು ಒಪ್ಪಿದ ನಂತರವೇ ಮದುವೆ ಪ್ರಕ್ರಿಯೆ ಶುರುವಾಗುತ್ತದೆ. ವಧು- ವರರ ಸಮಾವೇಶದಲ್ಲಿ ವೈದ್ಯಕೀಯ ಮಾಹಿತಿ ಮತ್ತು ಮಾರ್ಗದರ್ಶನವನ್ನೂ ಮನೆಯವರಿಗೆ ಒದಗಿಸಲಾಗುತ್ತದೆ. 
ಸಂಪರ್ಕ ಸಂಖ್ಯೆ-9448151068

Advertisement

ನಾವು ನಡೆಸುವ ವಧು- ವರರ ಸಮಾವೇಶ ಯಾವ ಮದುವೆಗೂ ಕಡಿಮೆ ಇಲ್ಲ ಅಂತ ಇತರರು ಹೇಳುವುದನ್ನು ಕೇಳಿದಾಗ ತುಂಬಾ ಸಂತೋಷ ಆಗುತ್ತೆ. ಅಲ್ಲದೇ, ಮಿಕ್ಕವರ ಸಮಾವೇಶಗಳಂತೆ ನಮ್ಮಲ್ಲಿ ಅಧ್ಯಕ್ಷೀಯ ಭಾಷಣ, ಸಮಾರೋಪ ಅಂತೆಲ್ಲಾ ಇರುವುದೇ
ಇಲ್ಲ. ಬಾಳಲ್ಲಿ ಸಾರ್ಥಕತೆ ತರುವ ಇಂಥ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಬೇಕು.

● ಶಾಂತಾ ಕೊಟ್ರೇಶ್‌

● ಪ್ರವೀಣರಾಜು ಸೊನ್ನದ

Advertisement

Udayavani is now on Telegram. Click here to join our channel and stay updated with the latest news.

Next