Advertisement

ಶಾದಿ ಭಾಗ್ಯ ಅನುದಾನ ದುಪ್ಪಟ್ಟು?

12:11 PM Jun 26, 2018 | |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಸಮುದಾಯದ ಬೇಡಿಕೆ ಮತ್ತು ಆದ್ಯತೆಗಳ ಕುರಿತು ಚರ್ಚಿಸಲು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ನೇತೃತ್ವದಲ್ಲಿ ಸೋಮವಾರ ಎಲ್ಲ ಪಕ್ಷಗಳ ಮುಸ್ಲಿಂ ನಾಯಕರ ಸಭೆ ನಡೆಯಿತು.

Advertisement

ಖಾಸಗಿ ಹೊಟೇಲ್‌ನಲ್ಲಿ ಸಂಜೆ ನಡೆದ ಸಭೆಯಲ್ಲಿ, ಶಾದಿ ಭಾಗ್ಯ ಯೋಜನೆಗೆ ಈಗ ಒಬ್ಬ ಹೆಣ್ಣುಮಗಳಿಗೆ ನೀಡುತ್ತಿರುವ 50 ಸಾವಿರ ರೂ. ಸಹಾಯಧನವನ್ನು 1 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂಬ ವಿಷಯವೂ ಸಭೆಯಲ್ಲಿ ಪ್ರಸ್ತಾಪವಾಗಿದೆ.

ಅದೇ ರೀತಿ ಸಮುದಾಯದ ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ಒತ್ತು ನೀಡುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಅದಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕು. ಈ ಬಗ್ಗೆ ಮುಖ್ಯಮಂತ್ರಿಯವರು ನಡೆಸುವ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಮನವರಿಕೆ ಮಾಡಿಕೊಡಬೇಕೆಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿವೆ ಎಂದು ಹೇಳಲಾಗಿದೆ.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌, ಮಾಜಿ ಕೇಂದ್ರ ಸಚಿವ ಕೆ. ರಹಮಾನ್‌ ಖಾನ್‌, ಶಾಸಕರಾದ ಎನ್‌.ಎ. ಹ್ಯಾರಿಸ್‌, ಕನೀಜ್‌ ಫಾತೀಮಾ, ಜೆಡಿಎಸ್‌ ವಿಧಾನಪರಿಷತ್‌ ಸದಸ್ಯ ಬಿ.ಎ. ಫಾರೂಕ್‌ ಸೇರಿದಂತೆ ಹಲವು ಮುಸ್ಲಿಂ ನಾಯಕರು ಇದ್ದರು.

ನಾಯಕತ್ವದ ಗುಣ ಇಲ್ಲದವರನ್ನು ಸಚಿವರನ್ನಾಗಿ ಮಾಡಲಾಗಿದೆ ಎಂದು ಮಾಜಿ ಸಚಿವ ತನ್ವೀರ್‌ ಸೇs… ಅವರು ಜಮೀರ್‌ ಅಹ್ಮದ್‌ ಕುರಿತು ಹೇಳಿಕೆ ನೀಡಿದ್ದರು. ಅದಕ್ಕೆ ತಿರುಗೇಟು ನೀಡಲು ಸೋಮವಾರ ಸಭೆ ನಡೆಸಿದ ಜಮೀರ್‌ ಅಹ್ಮದ್‌ ಆ ಮೂಲಕ ತಮ್ಮ ನಾಯಕತ್ವ ಪ್ರದರ್ಶಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಬೇಗ್‌, ಸೇಠ್ ಗೈರು: ತಮ್ಮ “ಹಿರಿತನ’ ಕಡೆಗಣಿಸಿ ಜಮೀರ್‌ ಅಹ್ಮದ್‌ ಅವರನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ಮುನಿಸಿಕೊಂಡಿರುವ ಮಾಜಿ ಸಚಿವರಾದ ಆರ್‌. ರೋಷನ್‌ ಬೇಗ್‌, ತನ್ವೀರ್‌ ಸೇಠ್ ಹಾಗೂ ಶಾಸಕ ರಹೀಮ್‌ ಖಾನ್‌ ಸಭೆಗೆ ಗೈರು ಹಾಜರಾಗಿದ್ದರು. ಅದೇ ರೀತಿ ವಿಧಾನಪರಿಷತ್‌ ಸದಸ್ಯರಾದ ಸಿ.ಎಂ ಇಬ್ರಾಹೀಂ, ರಿಜ್ವಾನ್‌ ಅರ್ಷದ್‌ ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಫ‌ರ್‌ ಶರೀಫ್ ಸಹ ಸಭೆಗೆ ಬಂದಿರಲಿಲ್ಲ. 

ಹಜ್‌ ಭವನಕ್ಕೆ ಟಿಪ್ಪು ಹೆಸರಿಡಲು ನಾನು ಹೇಳಿಲ್ಲ. ಜನರಿಂದ ಮನವಿ ಬಂದಿದೆ ಎಂದಷ್ಟೇ ಹೇಳಿದ್ದೇನೆ. ಅಬ್ದುಲ್‌ ಕಲಾಂ ಹೆಸರಿಡುವಂತೆ ಯಡಿಯೂರಪ್ಪ ಸಲಹೆ ನೀಡಿದ್ದಾರೆ. ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.
-ಜಮೀರ್‌ ಅಹ್ಮದ್‌ ಖಾನ್‌, ಅಲ್ಪಸಂಖ್ಯಾತ ಕಲ್ಯಾಣ ಸಚಿವ

“ಹಜ್‌ ಭವನಕ್ಕೆ ಟಿಪ್ಪು ಹೆಸರಿಡುವ ಮತ್ತು ಸಚಿವ ಸಂಪುಟ ವಿಸ್ತರಣೆ ವೇಳೆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿಲ್ಲ. ರೋಷನ್‌ ಬೇಗ್‌, ಜಾಫ‌ರ್‌ ಶರೀಫ್, ಸಿ.ಎಂ.ಇಬ್ರಾಹೀಂ ಅವರಿಗೂ ಆಹ್ವಾನವಿತ್ತು. ಯಾಕೆ ಬಂದಿಲ್ಲ ಎಂದು ಗೊತ್ತಿಲ್ಲ’
-ಯು.ಟಿ.ಖಾದರ್‌, ನಗರಾಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next