Advertisement

Valmiki Nigama: ಹಣ ದುರ್ಬಳಕೆಯಾದರೂ ಈ ವರ್ಷದ ಅನುದಾನ ಕೊಡಲು ಸೂಚಿಸಿರುವೆ: ಸಿದ್ದರಾಮಯ್ಯ

08:45 PM Oct 15, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರವಾಗಿದ್ದರೂ ಈ ವರ್ಷದಲ್ಲಿ ನಿಗಮಕ್ಕೆ ನಿಗದಿಪಡಿಸಿರುವ ಅನುದಾನ ಸಂಪೂರ್ಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

Advertisement

ವಿಧಾನಸೌಧದಲ್ಲಿ ಮಂಗಳವಾರ ಪರಿಶಿಷ್ಟ ಪಂಗಡ ಸಮುದಾಯಗಳ ಸಭೆಯ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿ  ವಾಲ್ಮೀಕಿ ನಿಗಮದ ಅನುದಾನ ಕಡಿತಗೊಳಿಸದಂತೆ ಹಲವು ಮನವಿಗಳು ಬಂದಿವೆ ಆದ್ದರಿಂದ ಈ ವರ್ಷ ವಾಲ್ಮೀಕಿ ನಿಗಮಕ್ಕೆ ಮೀಸಲಿಟ್ಟಿರುವ ಅನುದಾನ ಸಂಪೂರ್ಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ‘ಪರಿಶಿಷ್ಟ ಪಂಗಡದ ಶಾಸಕರು ಹಾಗೂ ಸ್ವಾಮೀಜಿಗಳ ಜತೆಗಿನ ಸಭೆಯಲ್ಲಿ ಎರಡು ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಮೊದಲು ಅನುದಾನ ಕಡಿತ ಮಾಡದಂತೆ ಶಾಸಕರು ಹಾಗೂ ಸ್ವಾಮೀಜಿಗಳು ಮನವಿ ಮಾಡಿದ್ದರು. ಎರಡನೆಯದಾಗಿ ನಕಲಿ ಜಾತಿ ಪ್ರಮಾಣ ಪತ್ರ ಸಮಸ್ಯೆ ಕುರಿತ ಚರ್ಚೆ ನಡೆದಿದ್ದು ಗೊಂದಲ ನಿವಾರಣೆ ಮಾಡುವ ಕೆಲಸ ಮಾಡುತ್ತೇವೆ ಎಂದರು.

ಇನ್ನು ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಕುರಿತಂತೆ ಎಸ್ಐಟಿ ತನಿಖೆ ನಡೆಸುತ್ತಿದೆ. ನಿಗಮದ 89.63 ಕೋಟಿ ರೂ. ದುರುಪಯೋಗವಾಗಿದ್ದು, ಅದರಲ್ಲಿ 5 ಕೋಟಿ ರೂ. ವಾಪಸ್ ಬಂದಿದೆ. ಎಸ್‌ಐಟಿ ತನಿಖೆ ವೇಳೆ ರೂ.71.54 ಕೋಟಿ ರೂಪಾಯಿಯ ಮತ್ತೆ ವಶಕ್ಕೆ ಪಡೆದಿದೆ. ಇನ್ನು ಉಳಿದ 13 ಕೋಟಿ ರೂ.ಮೊತ್ತ  ನಿಗಮಕ್ಕೆ ವಾಪಸ್‌ ಬರಬೇಕಿದೆ. ಅವ್ಯವಹಾರದ ಪೂರ್ಣ ಮೊತ್ತ  ಮರು ಪಡೆಯಲಾಗುವುದು. ಈ ಪ್ರಕರಣವು ಪ್ರಸ್ತುತ ನ್ಯಾಯಾಲಯದ ಮುಂದಿದೆ. ನಾವು ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತೇವೆ. ಜಾತಿ ಪ್ರಮಾಣಪತ್ರದ ಬಗ್ಗೆ ಗೊಂದಲ ಪರಿಹರಿಸಿ ಅಗತ್ಯ ಆದೇಶಗಳ ಹೊರಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.


ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಚರ್ಚಿಸಿ ತೀರ್ಮಾನ:
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನ ನೀಡುತ್ತಿರುವ ಕೇಂದ್ರದ ಅನ್ಯಾಯದ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ವಿಚಾರ ಸದ್ಯಕ್ಕೆ ತೀರ್ಮಾನ ಮಾಡಿಲ್ಲ, ಪ್ರತಿಭಟನೆ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು. ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಸಿದ್ದರಾಮಯ್ಯ ಅವರು ಉಪಚುನಾವಣೆಗೆ ಸಿದ್ಧರಿದ್ದು, ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಹೇಳಿದರು.

ಪರಿಶಿಷ್ಟ ಪಂಗಡ ಸಮುದಾಯಗಳ ಸಭೆಯಲ್ಲಿ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಖ್‌ ಸೇರಿ ಹಿರಿಯ ಅಧಿಕಾರಿಗಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next