ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ನೆಲೆ ಹೊಂದಿರುವ ಜಮಾತ್ ಉದ್ ದಾವಾ (ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಜತೆಗೆ ಸಂಪರ್ಕ ಹೊಂದಿರುವ ಕಾಶ್ಮೀರದ ಪ್ರತ್ಯೇಕತಾ ನಾಯಕ ಶಬ್ಬೀರ್ ಶಾ ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬಂಧಿಸಿದರು.
ಜಾರಿ ನಿರ್ದೇಶನಾಲಯದ ಚಾರ್ಜ್ ಶೀಟ್ ಪ್ರಕಾರ ಕಾಶ್ಮೀರೀ ಪ್ರತ್ಯೇಕತಾ ನಾಯಕ ಶಬ್ಬೀರ್ ಶಾ, ಪಾಕಿಸ್ಥಾನದ ಜೆಯುಡಿ ಮುಖ್ಯಸ್ಥನಾಗಿರುವ ಉಗ್ರ ಹಫೀಜ್ ಸಯೀದ್ ಜತೆಗೆ ಫೋನಿನಲ್ಲಿ ಕಾಶ್ಮೀರ ವಿಷಯವನ್ನು ಚರ್ಚಿಸುತ್ತಿದ್ದ ಮತ್ತು 2008ರ ಮುಂಬಯಿ ದಾಳಿಯ ಸೂತ್ರಧಾರನಾಗಿರುವ ಆತನ (ಹಫೀಜ್) ಜತೆಗೆ 2017ರ ಜನವರಿಯಲ್ಲಿ ಟೆಲಿಫೋನ್ ನಲ್ಲಿ ಸಂಭಾಷಣೆ ನಡೆಸಿದ್ದಾನೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚಾರ್ಜ್ ಶೀಟ್‌ನಲ್ಲಿ ಹೇಳಲಾಗಿರುವಂತೆ ಶಬ್ಬೀರ್ ಶಾ ಕಾಶ್ಮೀರ ಮತ್ತು ಭಾರತದ ಇತರ ಭಾಗಗಳಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಪಾಕಿಸ್ಥಾನದ ಉಗ್ರ ಸಂಘಟನೆಯಿಂದ ಹಣ ಪಡೆದುಕೊಂಡಿದ್ದಾನೆ. ಉಗ್ರ ನಿಧಿಗೆ ಹವಾಲಾ ಮೂಲಕ ಹಣವನ್ನು ಪಡೆದುಕೊಳ್ಳುವಲ್ಲಿ ಶಬ್ಬೀರ್ ಪತ್ನಿ ಡಾ. ಬಿಲ್ಕಿಸ್ ಕೂಡ ಶಾಮೀಲಾಗಿದ್ದಾಳೆ.
ಈಗ ನ್ಯಾಯಾಂಗ ಬಂಧನದಲ್ಲಿರುವ ಮೊಹಮ್ಮದ್ ಅಸ್ಲಾಂ ವಾನಿ, ತಾನು ದಿಲ್ಲಿಯಲ್ಲಿ ಶಬ್ಬೀರ್ ಶಾ ಪರವಾಗಿ ಹವಾಲಾ ಹಣವನ್ನು ಉಗ್ರ ನಿಧಿಗಾಗಿ ಪಡೆದುಕೊಳ್ಳುತ್ತಿದ್ದೆ; ಅದನ್ನು ತನಗೆ ಪಾಕ್ ಹವಾಲಾ ನಿರ್ವಾಹಕ ಶಫಿ ಶಹರ್‌ಯಾರ್ ಪೂರೈಸುತ್ತಿದ್ದ ಎಂದು ತನಿಖಾಧಿಕಾರಿಗಳಲ್ಲಿ ಬಾಯಿ ಬಿಟ್ಟಿದ್ದಾನೆ.