Advertisement

ರಾಮದುರ್ಗದ ಪ್ರವಾಸಿ ತಾಣ ‘ಶಬರಿ ಕೊಳ್ಳ’

09:30 AM Apr 03, 2021 | ಗಣೇಶ್ ಹಿರೇಮಠ |

ಈ ಊರಿನ ಹೆಸರಿನಲ್ಲಿಯೇ ‘ರಾಮ’ನಾಮ ಇದೆ. ರಾಮನಾಮ ಇರುವ ರಾಮದುರ್ಗದಲ್ಲಿ ‘ಶಬರಿ’ಕೊಳ್ಳ ಎನ್ನುವ ಪುಣ್ಯ ಕ್ಷೇತ್ರವೂ ನೆಲೆಸಿದೆ.

Advertisement

ರಾಮಾಯಣದಲ್ಲಿ ರಾಮ ಹಾಗೂ ಶಬರಿಯ ಕಥೆ ಎಲ್ಲರೂ ಕೇಳಿರಬಹುದು. ಅಯೋಧ್ಯೆಯ ಪುರಷೋತ್ತಮ ರಾಮನ ಬರುವಿಕೆಗೆ ಶಬರಿ ಹಗಲಿರುಳು ಕಾಯ್ದ ಪ್ರಸಂಗ ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ಕೊನೆಗೂ ಶಬರಿಗೆ ರಾಮನ ದರ್ಶನವಾಗುತ್ತದೆ. ಆತನಿಗಾಗಿ ಪ್ರೀತಿಯಿಂದ ಬೋರೆ ಹಣ್ಣು ನೀಡುತ್ತಾಳೆ. ಭಕ್ತೆ ಶಬರಿ ನೀಡಿ ಹಣ್ಣು-ಹಂಪಲ ಸೇವಿಸಿ ರಾಮ ಸಂತಸ ಪಡುತ್ತಾನೆ. ಹೀಗೆ ರಾಮ ಹಾಗೂ ಶಬರಿ ಸಂಧಿಸಿದ ಜಾಗವೇ ಈ ಶಬರಿ ಕೊಳ್ಳ ಎನ್ನುವ ಐತಿಹ್ಯ ಇದೆ.

ಇದು ಶಬರಿಕೊಳ್ಳದ ಬಗ್ಗೆ ಇರುವ ಪುರಾತನ ಕಥೆ. ಜಕಣಾಚಾರಿಯ ಉಳಿ ಏಟಿನಿಂದ ನಿರ್ಮಾಣಗೊಂಡಿರುವ ಭವ್ಯ ದೇವಾಲಯ, ಎರಡು ಪುಷ್ಕರಣೆಗಳು, 200 ಅಡಿ ಮೇಲಿಂದ ಧುಮುಕ್ಕುವ ಜಲಧಾರೆ ಶಬರಿ ಕೊಳ್ಳಕ್ಕೂ ಇತಿಹಾಸಕ್ಕೂ ಇರುವ ನಂಟಿಗೆ ಪುರಾವೆ ನೀಡುತ್ತವೆ.

ರಾಮದುರ್ಗ ಬೆಳಗಾವಿ ಜಿಲ್ಲೆಯ ತಾಲೂಕಾ ಕೇಂದ್ರ. ಈ ಊರಿನ ಪಕ್ಕದಲ್ಲೇ ನೆಲೆಸಿರುವುದು ಸುರೇಬಾನ. ಇಲ್ಲಿಂದ ಮೂರು ಕಿ.ಮೀ ಕ್ರಮಿಸಿದರೆ ಎದುರುಗುವುದೇ ಶಬರಿ ಕೊಳ್ಳ. ಶಬರಿ ದೇವಿ ಸುರೇಬಾನ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳ ಸಂಧಿಸುವ ಕಣಿವೆ ಪ್ರದೇಶದಲ್ಲಿ ಇರುವ ಸುಂದರ ಪ್ರಾಕೃತಿಕ ತಾಣದಲ್ಲಿ ನೆಲೆಸಿದ್ದಾಳೆ. ಜಕಣಾಚಾರಿ ಕೆತ್ತನೆಯ ಸುಂದರ ಮಂದಿರವಿದೆ. ಎರಡು ನೀರಿನ ಹೊಂಡಗಳು ಇಲ್ಲಿಯ ಮತ್ತೊಂದು ಆಕರ್ಷಣಿಯ ಸ್ಥಳ. ಕಿರು ಜಲಪಾತ, ಸುಮಾರು 120 ಅಡಿಗಳಷ್ಟು ಎತ್ತರದ ಗುಹೆಯಲ್ಲಿ ಆಕಳ ಮೊಲೆಯಂತೆಯೇ ನೈಸರ್ಗಿಕವಾಗಿ ಕಲ್ಲಿನಲ್ಲಿ ಮೂಡಿದ ಆಕಳಮೊಲೆ, ಇದರಲ್ಲಿ ಜಿಣುಗುವ ನೀರಿನ ಹನಿಗಳು ನೋಡುಗರನ್ನು ಬೆರಗುಗೊಳಿಸುತ್ತದೆ.

Advertisement

ಪುಣ್ಯ ಕ್ಷೇತ್ರ  :

ಇತಿಹಾಸದ ಪುಟಗಳು ನುಡಿಯುವಂತೆ ಶಬರಿಕೊಳ್ಳಕ್ಕೆ ರಾಮನ ಆಗಮನವಾಗುತ್ತದೆ. ಶಬರಿಗೆ ಶ್ರೀರಾಮನ ದರ್ಶನವಾಗುತ್ತದೆ.  ಶ್ರೀರಾಮ ಆಕೆಯ ಭಕ್ತಿಯನ್ನು ಮೆಚ್ಚಿ ಏನು ವರ ಬೇಕು ಕೇಳು ನಿನಗೆ ಎಂದು ಕೇಳುತ್ತಾನೆ. ಆಕೆ ಶ್ರೀರಾಮನ ತೊಡೆಯ ಮೇಲೆ ಪ್ರಾಣ ಬಿಡಲು ಬಯಸುತ್ತಾಳೆ. ರಾಮನ ತೊಡೆಯ ಮೇಲೆ ಮಲಗಿದ್ದಾಗ ರಾಮನು ಸುತ್ತಲೂ  ನೀರಿಗಾಗಿ ವೀಕ್ಷಿಸಿದನೆಂದೂ, ನೀರು ಕಂಡು ಬರದೇ ಇದ್ದಾಗ ಬಾಣ ಪ್ರಯೋಗಿಸಿ ತನ್ನ ಬಿಲ್ವಿದ್ಯೆಯ ಮೂಲಕ ನೀರು ತರಿಸಿದನೆಂಬ ಪ್ರತೀತಿ ಹೊಂದಿದ ಎರಡು ಹೊಂಡಗಳು ಸಾಕ್ಷಿಯಾಗಿ ಇಲ್ಲಿವೆ. ಇವು ಇಂದಿಗೂ ಜೀವಜಲದಿಂದ ತುಂಬಿಕೊಂಡಿರುತ್ತವೆ. ಅದರಲ್ಲೂ ಗಣಪತಿ ಹೊಂಡದ ನೀರು ಎಂದಿಗೂ ಬರಿದಾಗುವುದಿಲ್ಲ.

ರಾಮ ಹಾಗೂ ಶಬರಿ ಭೇಟಿಗೆ ಸಾಕ್ಷಿಯಾದ ಈ ಸ್ಥಳ ಶಬರಿಕೊಳ್ಳ ಎಂದೇ ಪ್ರಸಿದ್ಧಿ ಪಡೆದಿದೆ. ಸುತ್ತಮುತ್ತಲಿನ ಜನರು ಶಬರಿ ದೇವಸ್ಥಾನಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ನೂರಾರು ಸಾಧು-ಸಂತರು ಬಂದು ಶ್ರೀ ಶಬರಿಯ ಸನ್ನಿಧಿಯಲ್ಲಿ ಜಪ-ತಪ ಗೈದು ಪುನೀತರಾಗುತ್ತಾರೆ.

ಸುಂದರತಾಣ :

ಶಬರಿಕೊಳ್ಳ ಪ್ರವಾಸಿಗರ ಮನಸ್ಸು ಸೂರೆಗೊಳ್ಳುವಂತಹ ತಾಣ. ದೂರದೂರಿನಿಂದ ಬರುವವರಿಗೆ ನಿರಾಶೆಯಂತೂ ಆಗುವುದಿಲ್ಲ. ಇಲ್ಲಿರುವ ಪ್ರಕೃತಿ ಸೊಬಗು ನೋಡುಗರನ್ನ ಮಂತ್ರಮುಗ್ದರನ್ನಾಗಿಸುತ್ತದೆ.

ಸುಲಭದ ಪ್ರಯಾಣ :

ಶಬರಿಕೊಳ್ಳಕ್ಕೆ ಪ್ರಯಾಣಿಸುವುದು ಸುಲಭ. ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಯಿಂದ ರಾಮದುರ್ಗಕ್ಕೆ ಸಾಕಷ್ಟು ಬಸ್‍ಗಳ ಸೌಲಭ್ಯವಿದೆ. ಇಲ್ಲಿಂದ ಅರ್ಧಗಂಟೆಯಲ್ಲಿ ಶಬರಿಕೊಳ್ಳಕ್ಕೆ ತಲುಪಹುದು.

Advertisement

Udayavani is now on Telegram. Click here to join our channel and stay updated with the latest news.

Next