Advertisement

ಶೈಕ್ಷಣಿಕ ಸಮಸ್ಯೆ ನಿವಾರಣೆಗೆ ಎಸ್‌ಎಫ್‌ಐ ಆಗ್ರಹ

05:50 PM Sep 09, 2022 | Team Udayavani |

ರಾಯಚೂರು: ವಿದ್ಯಾರ್ಥಿ ವೇತನ, ವಸತಿ ನಿಲಯಗಳ ಸಮಸ್ಯೆ ಸೇರಿದಂತೆ ವಿವಿಧ ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ ಸದಸ್ಯರು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ವಿದ್ಯಾರ್ಥಿಗಳು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಭವಿಷ್ಯಕ್ಕೆ ಪೆಟ್ಟು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಸತಿ ನಿಲಯಗಳ ಪ್ರವೇಶಕ್ಕೆ ಕೌನ್ಸೆಲಿಂಗ್‌ ಪ್ರಕ್ರಿಯೆ ಕೈಬಿಟ್ಟು ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು, ಹಾಸ್ಟೆಲ್‌ ವಿದ್ಯಾರ್ಥಿಗಳ ತಿಂಗಳ ಆಹಾರ ಭತ್ಯೆ ಕೇರಳ ಮಾದರಿಯಲ್ಲಿ ಕನಿಷ್ಠ 3500 ರೂ. ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳಿಗೆ ಬೈಸಿಕಲ್‌, ಸಮವಸ್ತ್ರ, ವಿದ್ಯಾರ್ಥಿ ವೇತನ, ಫೆಲೋಶೀಫ್‌ ಸರಿಯಾಗಿ ನೀಡಬೇಕು, ಈ ಯೋಜನೆಗಳಿಗೆ ಅನುದಾನ ಹೆಚ್ಚಿಸಬೇಕು, ಪಠ್ಯ ಪುಸ್ತಕಗಳ ಕೋಮುವಾದೀಕರಣ ಹಾಗೂ ಅವೈಜ್ಞಾನಿಕ ಪಾಠಗಳನ್ನು ಕೈ ಬಿಡಬೇಕು, ತುಮಕೂರು ವಿವಿಯಲ್ಲಿ ಸಾವರ್ಕರ್‌ ಪೀಠ ಸ್ಥಾಪನೆ ರದ್ದುಪಡಿಸಬೇಕು, ಮಾದರಿ ಶಾಲೆ ನೆಪದಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದನ್ನು ಕೈ ಬಿಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹೆಸರಿನಲ್ಲಿ ಅಂಗನವಾಡಿ, ಸರ್ಕಾರಿ ಶಿಕ್ಷಣ ವ್ಯವಸ್ಥೆ ದುರ್ಬಲಗೊಳಿಸುವುದನ್ನು ವಿರೋಧಿಸಿ ಅದನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ಭೀಮನಗೌಡ ಸುಂಕಶ್ವೇರಹಾಳ, ರಾಜ್ಯ ಸಮಿತಿ ಸದಸ್ಯ ಚಿದಾನಂದ, ಬಸವರಾಜ ದೀನಸಮುದ್ರ ಸೇರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next