ದಿಲ್ಲಿ: ದಿಲ್ಲಿಯ ಹೊರ ವಲಯದಲ್ಲಿ 12ರ ಬಾಲಕಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅತ್ಯಾಚಾರಗೈದ ಬಗ್ಗೆ ದಿಲ್ಲಿ ಪೊಲೀಸ್‌ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. 5.30ರ ವೇಳೆಗೆ ಬಾಲ್ಕನಿಯಲ್ಲಿ ಗಂಭೀರ ಗಾಯಗೊಂಡು ರಕ್ತಸಿಕ್ತ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಸಂಜೆ ನೆರೆಮನೆಯವರು ನೋಡಿ ಪೊಲೀಸರಿಗೆ ದೂರು ನೀಡಿ ಬಳಿಕ, ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದು ಭಾರ ಮತ್ತು ತೀಕ್ಷ್ಣವಾದ ವಸ್ತುವಿನಿಂದ ಆಕೆಯ ಮುಖಕ್ಕೆ ಮತ್ತು ತಲೆಗೆ 5-6 ಬಾರಿ ಹೊಡೆದಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ.
ನೆರೆಮನೆಯ ಮಹಿಳೆಯೊಬ್ಬರು ಬಾಲಕಿಯನ್ನು ನೋಡಿ ಸಹಾಯಕ್ಕೆ ಕೂಗಿದರು. ಆ್ಯಂಬುಲೆನ್ಸ್ ಬರುವ ವೇಳೆಗಾಗಲೇ ಆಕೆ ಪ್ರಜ್ಞೆ ತಪ್ಪಿದ್ದಳು. ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ, ಆಕೆಯ ತಲೆ, ಮುಖ, ಕಾಲು, ಹೊಟ್ಟೆಯಲ್ಲಿದ್ದ ಗಾಯದ ಸ್ವರೂಪವನ್ನು ನೋಡಿದ ವೈದ್ಯರು ಸಂಜಯ್‌ಗಾಂಧಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಅಲ್ಲಿ ಆಕೆಯನ್ನು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಲಾಯಿತು.
ಬಾಲಕಿಗೆ ವೆಂಟಿಲೇಟರ್ ಸಹಾಯವನ್ನು ನೀಡಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ. ಸದ್ಯ ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ವಿಧಿ ವಿಜ್ಞಾನ ತಂಡವು ಪ್ರಕರಣದ ತನಿಖೆ ನಡೆಸಲಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.
ಬಾಲಕಿ ತನ್ನ ಕುಟುಂಬದೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು, ತಂದೆ, ತಾಯಿ, ಸಹೋದರಿ ಹತ್ತಿರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಘಟನೆ ಬಾಲಕಿ ಒಬ್ಬಂಟಿಯಾಗಿರುವಾಗ ಮಧ್ಯಾಹ್ನ ವೇಳೆಗೆ ನಡೆದಿದೆ. ಅಲ್ಲಿ ಆರೋಪಿಯ ಯಾವುದೇ ಗುರುತು ಕಂಡುಬಂದಿಲ್ಲ. ಅಲ್ಲದೆ ಸಿಸಿ ಟಿವಿಯಲ್ಲೂ ಪತ್ತೆಯಾಗಿಲ್ಲ. ಅಲ್ಲದೆ ಘಟನೆ ನಡೆದ ವೇಳೆಗೆ ಯಾರೂ ಆ ಅಪಾರ್ಟ್‌ಮೆಂಟ್‌ಗೆ ಹೋಗಿದ್ದನ್ನು ನೆರೆಮನೆಯವರು ನೋಡಿಲ್ಲ. ಆರೋಪಿ ಸಂತ್ರಸ್ತೆಗೆ ಮೊದಲೇ ಪರಿಚಯವಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ವೈದ್ಯಕೀಯ ವರದಿ ಮತ್ತು ವಿಧಿ ವಿಜ್ಞಾನದ ತನಿಖೆಯಾಗದ ಹೊರತು ಅತ್ಯಾಚಾರವೆಂದು ದೃಢಪಡಿಸಲು ಸಾಧ್ಯವಿಲ್ಲ.
ಕೊಲೆ ಯತ್ನ ಮತ್ತು ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.