Advertisement

ಲೈಂಗಿಕ ದೌರ್ಜನ್ಯ: ಹೊಸ ಸಮಿತಿ ರಚನೆಗೆ ಸೂಚನೆ

12:28 PM Mar 21, 2017 | Team Udayavani |

ಬೆಂಗಳೂರು: ನಗರದ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಚಿಸಲಾಗಿದ್ದ ಆಂತರಿಕ ದೂರು ಸಮಿತಿ ವರದಿ ತಿರಸ್ಕರಿಸಿರುವ ಮಹಿಳಾ ದೌರ್ಜನ್ಯ ತಡೆ ಸಮಿತಿ, ಹೊಸ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದೆ.

Advertisement

ಸೋಮವಾರ ಕಾಲೇ ಜಿಗೆ ಭೇಟಿ ನೀಡಿದ್ದ ಮಹಿಳಾ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಮತ್ತು ಪದಾಧಿಕಾರಿಗಳು, ಆಂತರಿಕ ವರದಿ ಸಮಿತಿಯಲ್ಲಿ ಕಾಲೇಜಿಗೆ ಹೊರತಾದ ಸಿಬ್ಬಂದಿಯೂ ಇರಬೇಕಿತ್ತು. ಆದರೆ ಕಾಲೇಜಿನ ಸಿಬ್ಬಂದಿಯೇ ಸಮಿತಿಯಲ್ಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ತಯಾರಿಸಿದ್ದಾರೆ. ಈ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಕೂಡಲೇ ಹೊಸ ಸಮಿತಿ ರಚಿಸಿ, ಪಾರದರ್ಶಕವಾದ ವರದಿ ನೀಡುವಂತೆ ಸೂಚಿಸಿದರು.

ಈ ವೇಳೆ ಮಹಿಳಾ ದೌರ್ಜನ್ಯ ಸಮಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಅಜಯ್‌ ನಾಗಭೂಷಣ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ಮೋಟಮ್ಮ, ಪ್ರಫುಲ್ಲಾ ಮಜುಂದಾರ್‌, ಡಾ. ವಸುಂಧರಾ ಭೂಪತಿ, ಶರಣಪ್ಪ ಮಟ್ಟೂರು, ಲೀಲಾ ಸಂಪಿಗೆ, ಚಂದ್ರಮೌಳಿ, ರೇಣುಕಾ, ಕೆ.ಎಸ್‌. ವಿಮಲಾ  ಉಪಸ್ಥಿತರಿದ್ದರು.

ಘಟನೆ ಹಿನ್ನೆಲೆ: ಮಹಾರಾಣಿ ಕಾಲೇಜಿನಲ್ಲಿ ಕೆಲ ತಿಂಗಳ ಹಿಂದೆ ನಡೆದ ನುಡಿಹಬ್ಬದ ವೇಳೆ ಕನ್ನಡದ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಆರೋಪಕ ಕೇಳಿಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಹಿಳಾ ದೌರ್ಜನ್ಯ ತಡೆ ಸಮಿತಿ, ಆಂತರಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಮತ್ತು ಪ್ರಾಂಶುಪಾಲರಿಗೆ ಸೂಚಿಸಿತ್ತು.

ಮಹಾರಾಣಿ ಕಾಲೇಜಿನಲ್ಲಿ ರಾತ್ರಿವೇಳೆ ಸೈಕೊ ಉಪಟಳ 
ಬೆಂಗಳೂರು: ಕ
ಳೆದ ಏಳು ತಿಂಗಳ ಹಿಂದೆ ಮಹಾರಾಣಿ ಮಹಿಳಾ ಕಾಲೇಜು ಹಾಸ್ಟೆಲ್‌ನ ಟೆರೇಸ್‌ ಮೇಲೆ ಹುಡುಗಿಯರ ಒಳ ಉಡುಪು ಧರಿಸಿ ಓಡಾಡಿ ಆತಂಕ ಸೃಷ್ಟಿಸಿದ್ದ ಸೈಕೋ ಮತ್ತೆ ಪ್ರತ್ಯಕ್ಷವಾಗಿದ್ದಾನೆ. 

Advertisement

ಯುವತಿಯರ ಒಳ ಉಡುಪು ಧರಿಸಿ ಓಡಾಡುವ ವಿಕೃತ ಸೈಕೋನ ವಿಡಿಯೋ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಕಷ್ಟು ವೈರಲ್‌ ಆಗಿದೆ. ಏಕಾಏಕಿ ಹಾಸ್ಟೆಲ್‌ ಟೆರೇಸ್‌ ಏರುವ ಸೈಕೋನನ್ನು ಹಿಡಿಯಲು ಅಲ್ಲಿನ ಸಿಬ್ಬಂದಿಯೊಬ್ಬರು ಕೋಲು ಹಿಡಿದುಕೊಂಡು ಓಡಾಡಿಸಿಕೊಂಡು ಬಂದಿದ್ದಾರೆ. ಅವರ ಕೈಗೆ ಸಿಗದೆ ಚಂಗನೇ ಹಾರುವ ಸೈಕೋ, ಕಿಟಕಿ ಛಾವಣಿಯ ಮೂಲಕ ಇಳಿದು ಪರಾರಿಯಾಗಿದ್ದಾನೆ.

ಒಮ್ಮೆ ಹಾಸ್ಟೆಲ್‌ಗೆ ಭೇಟಿ ನೀಡಿದ ನಂತರ ಪುನ; ಮೂರ್ನಾಲ್ಕು ತಿಂಗಳುಗಳ ಕಾಲ ಅತ್ತ ಕಡೆ ಸುಳಿಯುವುದಿಲ್ಲ. ರಾತ್ರಿ 12ರಿಂದ 2ಗಂಟೆ ವೇಳೆಯಲ್ಲಿ ನಿಧಾನಕ್ಕೆ ಟೆರೇಸ್‌ ಹತ್ತುವ ಈತ, ಹುಡುಗಿಯರ ಒಳ ಉಡುಪುಗಳನ್ನು ಧರಿಸಿ ವಿಕೃತ ಆನಂದ ಅನುಭವಿಸಿ ಓಡಾಡುತ್ತಾನೆ. ಪುನ: ಹೊರಟು ಹೋಗುತ್ತಾನೆ.

ಮತ್ತೂಂದೆಡೆ ಕಳೆದ ಸೆಪ್ಟೆಂಬರ್‌ 19ರಂದು ಸೈಕೋವಿನ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದರೂ, ಇದುವರೆಗೂ ಆತನ ಬಂಧನವಾಗಿಲ್ಲ. ಕಳೆದ ವರ್ಷ ದಾಖಲಾದ ದೂರಿನ ಅನ್ವಯ ಆರೋಪಿ ಬಂಧನಕ್ಕೆ ಹಲವು ಬಾರಿ ಕಾರ್ಯಾಚರಣೆ ರೂಪಿಸಲಾಗಿತ್ತು. ಆದರೆ ಅವನ ಸುಳಿವು  ಪತ್ತೆಯಾಗಿಲ್ಲ. ಇತ್ತೀಚೆಗೆ ಮತ್ತೆ ಕಾಣಿಸಿಕೊಂಡಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next