ಬೆಂಗಳೂರು: ಕೆಂಗೇರಿ ಉಪನಗರದ “ಖಾಸಗಿ ಅನಾಥಾಶ್ರವೊಂದರಲ್ಲಿ’ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಮಗ್ರ ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಈ ಕುರಿತಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಕೀಲೆ ಮೈತ್ರೆಯಿ ಕೃಷ್ಣನ್ ವಾದ ಮಂಡಿಸಿದರು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರಕರಣವನ್ನು ಸಿಐಡಿಗೆ ತನಿಖೆಗೆ ಒಪ್ಪಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಈವರೆಗೆ ಏನೆಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ನೋಡಿದ ಬಳಿಕವಷ್ಟೇ ಆ ಬಗ್ಗೆ ತೀರ್ಮಾನಿಸಲು ಸಾಧ್ಯ. ಹಾಗಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಸಮಗ್ರ ಮಾಹಿತಿ ಒದಗಿಸುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಆ.6ಕ್ಕೆ ಮುಂದೂಡಿತು.
ಚಾಮರಾಜನಗರ ಮಕ್ಕಳ ಕಲ್ಯಾಣ ಸಮಿತಿಯ ಮಾಹಿತಿ ಮೇರೆಗೆ ಬೆಂಗಳೂರು ನಗರ ಜಿಲ್ಲಾ ಪರಿಶೀಲನಾ ಸಮಿತಿಯು ಖಾಸಗಿ ಅನಾಥ ಆಶ್ರಮಕ್ಕೆ 2019ರ. ಮಾ.28ರಂದು ಭೇಟಿ ಕೊಟ್ಟಿತ್ತು. ಆಗ, ಅಲ್ಲಿ ಒಬ್ಬ ಅಪ್ರಾಪ್ತ ಬಾಲಕಿ ಶೋಚನೀಯ ಸ್ಥಿತಿಯಲ್ಲಿ ಇದ್ದದ್ದು ಕಂಡು ಬಂತು. ಅಲ್ಲದೇ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆಯೂ ಕುರುಹುಗಳು ಕಂಡು ಬಂದವು.
ಈ ವೇಳೆ ಬಾಲಕಿಯನ್ನು ರಕ್ಷಿಸಿ ಜಿಲ್ಲಾ ಸಮಿತಿಯು ಆಕೆಯನ್ನು “ಸರ್ಕಾರಿ ಹೆಣ್ಣು ಮಕ್ಕಳ ಗೃಹ’ಕ್ಕೆ ಸ್ಥಳಾಂತರಿಸಿತ್ತು. ಅದರ ಮರುದಿನ ನಾಲ್ಕೈದು ಮಂದಿ ಎರಡು ಕಾರುಗಳಲ್ಲಿ ಬಂದು ನಾವು ಸಿಬಿಐನವರು ನಮಗೆ ಕೆಲವು ಮಾಹಿತಿಗಳು ಬೇಕಾಗಿದ್ದವು ಎಂದು ಕೇಳಿದ್ದರು.
ಈ ಹಿನ್ನೆಲೆಯಲ್ಲಿ ಕೆಂಗೇರಿ ಉಪನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಮಧ್ಯೆ, ಅದರ ಮಾಲೀಕ ಜಾಮೀನು ಪಡೆದು ಹೊರ ಬಂದಿದ್ದಾನೆ. ಆದ್ದರಿಂದ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿದ್ದು, ಇದರ ತನಿಖೆಯನ್ನು ಸಿಐಡಿ ಅಥವಾ ಬೇರೆ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.