ಬೆಂಗಳೂರು: ಮಾರತ್‌ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ನರ್ಸರಿ ಶಾಲೆಯಲ್ಲಿ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಭಾನುವಾರ ಪೋಷಕರು ಎಚ್‌ಎಎಲ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ವಿಶೇಷವೆಂದರೆ ಪ್ರತಿಭಟನೆಯಲ್ಲಿ ಮಹಿಳಾ ಪೊಲೀಸರೂ ಭಾಗಿಯಾಗುವ ಮೂಲಕ ಬೆಂಬಲ ನೀಡಿದರು.
ಮಕ್ಕಳ ಮೇಲೆ ದೌರ್ಜನ್ಯ ನಡೆಯುವಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮಕ್ಕಳ ಸುರಕ್ಷತಾ ವಿಚಾರದಲ್ಲಿ ಆಡಳಿತ ಮಂಡಳಿ ನಿರ್ಲಕ್ಷ್ಯ ಮಾಡಿದರೂ ಕಠಿಣ ಕ್ರಮ ಜರುಗಿಸಬೇಕು ಎಂದು ಪೋಷಕರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಲವು ಐಟಿ-ಬಿಟಿ ಕಂಪನಿ ನೌಕರರು ಭಾಗಿಯಾಗಿ ಬೆಂಬಲ ಸೂಚಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಪೊಲೀಸರ ತನಿಖೆಗೆ ಸಹಕರಿಸಬೇಕು. ಇಲ್ಲದಿದ್ದಲ್ಲಿ ಆರೋಪಿಗೆ ಶಿಕ್ಷೆ ಆಗುವುದಿಲ್ಲ. ಆದ್ದರಿಂದ ಧೈರ್ಯವಾಗಿ ತನಿಖೆಗೆ ಸಹಕರಿಸಬೇಕೆಂದು ಸಾರ್ವಜನಿಕರು, ಪೋಷಕರಿಗೆ ಮನವಿ ಮಾಡಿದರು.
ಪೊಲೀಸರಿಂದ ಜಾಗೃತಿ: ಪ್ರತಿಭಟನೆ ವೇಳೆ ಮಹಿಳಾ ಪೊಲೀಸರು ಮಕ್ಕಳ ರಕ್ಷಣೆ ಕುರಿತ ಬರಹಗಳ ಪೋಸ್ಟರ್‌ಗಳನ್ನು ಹಿಡಿದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮಕ್ಕಳ ರಕ್ಷಣೆಗೆ ಇಲಾಖೆ ಬದ್ಧವಾಗಿದೆ ಎಂದು ಪೋಷಕರಿಗೆ ಧೈರ್ಯ ಹೇಳಿದರು. ಈ ವೇಳೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಮಕ್ಕಳ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ಧವಾಗಿದೆ.
ಪೋಷಕರು ಯಾವುದೇ ಆತಂಕವಿಲ್ಲದೇ ಮಕ್ಕಳನ್ನು ಶಾಲೆ ಕಳುಹಿಸಿ. ಒಂದು ವೇಳೆ ನಿಮ್ಮ ಮಕ್ಕಳ ಮೇಲೆ ದೌರ್ಜನ್ಯವಾದರೆ ಭಯಪಡದೆ ಪೊಲೀಸರಿಗೆ ಮಾಹಿತಿ ನೀಡಿ, ಅಂತಹ ಪೋಷಕರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು. ಮಾರತ್‌ಹಳ್ಳಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ ಎಂದು ಹೇಳಿದರು.