ಸುಬ್ರಹ್ಮಣ್ಯ: ಪಂಜ ಪೇಟೆ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಮುಖ ಮಾಡುತ್ತಿದೆ. ಆರ್ಥಿಕ ವ್ಯವಹಾರ ಕೇಂದ್ರವಾಗಿ ಗುರುತಿಸಿಕೊಂಡಿರುವ ಪಂಜದಲ್ಲಿ ಕಟ್ಟಡಗಳು ಒಂದೊಂದೇ ನಿರ್ಮಾಣಗೊಳ್ಳುತ್ತಿದೆ ಆದರೆ ಪೇಟೆಯಲ್ಲಿ ಚರಂಡಿ ವ್ಯವಸ್ಥಿತವಾಗಿ ಅಭಿವೃದ್ಧಿಯಾಗಿಲ್ಲ.
ಪಂಜ ಪೇಟೆಯ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದ್ದರೂ ಅದರ ನಿರ್ವಹಣೆ ಮಾಡದ ಪರಿಣಾಮ ಚರಂಡಿಯಲ್ಲಿ ಮಳೆ ನೀರಿನೊಂದಿಗೆ ಬಂದ ಮಣ್ಣು ತುಂಬಿಕೊಂಡಿದೆ. ಜತೆಗೆ ಕಸ, ಕಡ್ಡಿ, ಗಿಡ-ಗಂಟಿ ಬೆಳೆದಿವೆ. ಸಿಮೆಂಟ್ ಪೈಪ್ ಅಳವಡಿಸಿದ ಹೆಚ್ಚಿನೆಡೆ ಮಣ್ಣು ತುಂಬಿ ಬಂದ್ ಆಗಿದೆ.
ಪಂಜ ಪೇಟೆ, ಗ್ರಾಮ ಪಂಚಾಯತ್ ಬಳಿ, ಗುತ್ತಿಗಾರು ಸಂಪರ್ಕ ರಸ್ತೆ ಕಡೆಗಳಲ್ಲೂ ಸಮರ್ಪಕ ಚರಂಡಿ ಇಲ್ಲದೆ ಮಳೆ ಬರುವ ಸಂದರ್ಭದಲ್ಲಿ ಮಳೆ ನೀರು ರಸ್ತೆಯಲ್ಲೇ ತುಂಬಿ ಹರಿಯುತ್ತಿರುತ್ತದೆ. ಈ ವೇಳೆ ಜನರು, ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಬರುವ ಮಣ್ಣು ರಸ್ತೆಯಲ್ಲೇ ಉಳಿದು ಅಪಾಯಕಾರಿಯಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಜತೆಗೆ ಕೆಸರುಮಯ ವಾಗಲೂ ಕಾರಣವಾಗುತ್ತಿದೆ.
ನಿರ್ವಹಣೆಯಾಗಬೇಕಿದೆ
ಚರಂಡಿ ವ್ಯವಸ್ಥೆ ಕಲ್ಪಿಸಿದ್ದರೂ ಮಳೆಗಾಲದ ಮೊದಲು ಅದರ ದುರಸ್ತಿ ಕಾರ್ಯ ನಡೆಯುವುದು ಅವಶ್ಯಕ. ಮಳೆಗಾಲ ಆರಂಭವಾಗುವಲ್ಲಿ ವರೆಗೆ ಕಾಯುವುದಕ್ಕಿಂತ ಈಗಿನಿಂದಲೇ ಕೆಲಸ ಆರಂಭಿಸಿದ್ದಲ್ಲಿ ಸೂಕ್ತ ಎನ್ನುತ್ತಾರೆ ಇಲ್ಲಿನ ಜನರು. ಪಂಜ ಪೇಟೆ ಮಾತ್ರವಲ್ಲದೇ ಒಳ ರಸ್ತೆ ಹಾಗೂ ಇತರೆಡೆಯಲ್ಲೂ ಚರಂಡಿಗಳು ಸರಿ ಇಲ್ಲದೆ ಮಳೆ ನೀರು ಎಲ್ಲೆಂದರಲ್ಲಿ ಹರಿಯುತ್ತಿದ್ದು, ಮನೆ, ಕೃಷಿ ಪ್ರದೇಶದತ್ತ ಹರಿಯುತ್ತವೆ ಎಂಬ ದೂರು ಕೇಳಿಬಂದಿದೆ.