Advertisement

ನೀರಿನ ಕುಂಟೆಗೆ ಒಳಚರಂಡಿ ತ್ಯಾಜ್ಯ: ಆಕ್ರೋಶ

03:46 PM Feb 05, 2023 | Team Udayavani |

ದೇವನಹಳ್ಳಿ: ತಾಲೂಕಿನ ಕನ್ನಮಂಗಲ ಗ್ರಾಪಂ ವ್ಯಾಪ್ತಿಯಲ್ಲಿರುವ ಪಾಳ್ಯದ ದರ್ಗಾದ ಬಳಿ ನೀರಿನ ಕುಂಟೆಗೆ ಸಮೀಪದ ಹಳ್ಳಿಗಳಿಂದ ಒಳಚರಂಡಿ ತ್ಯಾಜ್ಯ ಸಂಪರ್ಕ ಕಲ್ಪಿಸಲಾಗಿದ್ದು, ಇದರಿಂದ ಸ್ಥಳೀಯರು ವಿವಿಧ ರೋಗಗಳಿಂದ ಬಾಧಿತರಾಗುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಸೋಮಶೇಖರ್‌ ಆರೋಪಿಸಿದರು.

Advertisement

ಕನ್ನಮಂಗಲ ಪಾಳ್ಯದಲ್ಲಿ ಒಳಚರಂಡಿ ವ್ಯವಸ್ಥೆಗಾಗಿ 45 ಲಕ್ಷ ರೂ. ವೆಚ್ಚದ ಪೈಪ್‌ಲೈನ್‌ ಕಾಮಗಾರಿ ಕೈಗೊಂಡಿದ್ದರು. ಸತತ 4 ವರ್ಷಗಳಿಂದಲೂ ದರ್ಗಾಗೆ ಹೊಂದಿಕೊಂಡಿರುವ ಸರ್ಕಾರಿ ಕುಂಟೆಗೆ ಕಲುಷಿತ ನೀರು ಹೋಗುವಂತೆ ಮಾಡಲಾಗಿದೆ. ಕಾಮಗಾರಿ ಪ್ರಾರಂಭದ ಮೊದಲು ನೀರು ಮರುಬಳಕೆ ಮಾಡಿ ಉಪಯೋಗಿಸುವಂತಹ ವ್ಯವಸ್ಥೆ ಮಾಡಿ ಕೊಡಲಾಗುತ್ತದೆ ಎಂದು ತಿಳಿಸಿದ್ದು ಅದನ್ನು ಮಾಡಲಾಗಿಲ್ಲ ಎಂದು ದೂರಿದರು.

ಸಂಪೂರ್ಣ ಅವೈಜ್ಞಾನಿಕ: ದರ್ಗಾ ಪಕ್ಕದಲ್ಲಿರುವ ನೀರಿನ ಕುಂಟೆಯನ್ನು ಹಿರಿಯರ ಕಾಲದಿಂದಲೂ ಜಾನವಾರುಗಳಿಗೆ ಹಾಗೂ ಕೃಷಿ ಕಾರ್ಯಗಳಿಗೆ ಬಳಸುವಷ್ಟು ಸ್ವತ್ಛವಾಗಿತ್ತು. ಆದರೆ, ಅಂದಾಜು 1200 ಜನರ ನಿತ್ಯ ತ್ಯಾಜ್ಯವೂ ಇಲ್ಲಿಗೆ ಬಂದು ಸೇರಿ ಸಂಪೂರ್ಣವಾಗಿ ಹಾಳಾಗಿದೆ. ಸ್ಥಳೀಯ ಜಲಮೂಲಗಳು ಇದರಿಂದ ಬಾಧಿತವಾಗುತ್ತಿದೆ. ಕಾಮಗಾರಿ ಮುನ್ನ ಇಲ್ಲಿ ಎಸ್ಟಿಪಿ ಪ್ಲಾಂಟ್‌ ಮಾಡಲಾಗುತ್ತದೆ ಎಂದವರು ಇಂದು ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ದೊಡ್ಡಪ್ಪನಹಳ್ಳಿಯಲ್ಲಿ ಒಳಚರಂಡಿ ಪೈಪ್‌ ಲೈನ್‌ಗಾಗಿ 22 ಲಕ್ಷದ ಕಾಮಗಾರಿ ನಡೆಯುತ್ತಿದೆ. ಆ ತ್ಯಾಜ್ಯವನ್ನೂ ಇಲ್ಲಿಯೇ ಬಂದು ಸೇರುವಂತೆ ಮಾಡಲಾಗುತ್ತಿದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಅಧಿಕಾರಿಗಳು ಮಾಡುವ ತಪ್ಪಿನಿಂದ ಗ್ರಾಮಸ್ಥರು ಅನುಭವಿಸುತ್ತಿದ್ದಾರೆ ಎಂದರು.

ಸಮಸ್ಯೆಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಪಡೆದು, ಅದನ್ನು ಪರಿಶೀಲನೆ ಮಾಡಿ. ಸ್ಥಳೀಯರಿಗೆ ತೊಂದರೆ ಆಗದಂತೆ ನೈರ್ಮಲ್ಯ ಕಾಪಾಡಲು ಪಂಚಾಯಿತಿ ವತಿಯಿಂದ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ. – ಲಕ್ಷ್ಮೀಕಾಂತ್‌, ಕನ್ನಮಂಗಲ ಗ್ರಾಪಂ ಅಧ್ಯಕ್ಷ

ಗ್ರಾಪಂ ಸದಸ್ಯರು ಸಮಸ್ಯೆಯ ಕುರಿತು ಮಾಹಿತಿ ನೀಡಿದ್ದು, ಗ್ರಾಪಂ ಆಡಳಿತ ಮಂಡಳಿಯ ಸಭೆಯಲ್ಲಿ ವಿಷಯವನ್ನು ಚರ್ಚಿಸಿ, ಸಭಾ ತೀರ್ಮಾನದಂತೆ ಮುಂದಿನ ಕ್ರಮಕ್ಕೆ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಲಾಗುವುದು. – ಆದರ್ಶ್‌ ಕುಮಾರ್‌, ಪಿಡಿಒ

Advertisement
Advertisement

Udayavani is now on Telegram. Click here to join our channel and stay updated with the latest news.

Next