Advertisement

ರಕ್ಷಿತಾರಣ್ಯಗಳಲ್ಲಿ ನಕ್ಸಲರಿಗಾಗಿ ತೀವ್ರ ಶೋಧ

02:23 PM Jan 18, 2018 | |

ಸುಬ್ರಹ್ಮಣ್ಯ: ನಕ್ಸಲರ ಅಡಗುದಾಣ ಹಾಗೂ ಚಟುವಟಿಕೆಗೆ ಪೂರಕ ವಾತಾವರಣ ಹೊಂದಿರುವುದರಿಂದ ರಾಜ್ಯದ ಮಲೆನಾಡು ಭಾಗದಲ್ಲಿ ಹಲವು ವರ್ಷಗಳಿಂದ ಕೆಂಪು ಉಗ್ರರ ಕರಿನೆರಳು ಹಾಸಿದೆ.

Advertisement

ದಟ್ಟ ಕಾಡುಗಳು ಅಪರಿಚಿತವಾಗಿದ್ದ ಕಾರಣ ಆರಂಭದಲ್ಲಿ ಅವರಿಗೆ ಕಷ್ಟವಾಗಿ, ಹಿನ್ನಡೆ ಅನುಭವಿಸಿದ್ದರು. ಆದರೆ, ಮಲೆ ನಾಡಿನಲ್ಲಿ ತಮ್ಮ ಚಟುವಟಿಕೆ ವಿಸ್ತರಿಸುವ ಉದ್ದೇಶದಿಂದ ಉಡುಪಿ, ಚಿಕ್ಕಮಗಳೂರಿನಲ್ಲಿ ಸಕ್ರಿಯರಾಗಿದ್ದ ನಕ್ಸಲರು 2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳನ್ನೂ ಪ್ರವೇಶಿ ಸಿದರು. ಅದಕ್ಕೆ ಕಾರಣವೂ ಇತ್ತು. ಫ‌ಶ್ಚಿಮ ಘಟ್ಟದ ಪ್ರದೇಶಗಳ ಕೆಲ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ವಿಚಾರಕ್ಕೆ ಸಂಬಂಧಿಸಿ ಈ ಭಾಗದಲ್ಲಿ ನಿರಂತರ ಚಳವಳಿಗಳು ನಡೆಯುತ್ತಿದ್ದವು. ಇದರ ಪ್ರಯೋಜನ ಪಡೆದು, ಗಟ್ಟಿಯಾಗಿ ಬೇರೂರುವ ಉದ್ದೇಶವೂ ನಕ್ಸಲ್‌ ಸಂಘಟನೆಗಳಿಗಿತ್ತು.

ಕಾಡಿನಂಚಿನ ಮನೆಗಳಿಗೆ ಭೇಟಿ
2012ರ ಆಗಸ್ಟ್‌ನಲ್ಲಿ ಪುತ್ತೂರು, ಸುಳ್ಯ ಗಡಿಭಾಗದಲ್ಲಿ ಓಡಾಡಿದ್ದ ನಕ್ಸಲರು, ಚೇರು, ಭಾಗ್ಯ, ಎರ್ಮಾಯಿಲ್‌, ನಡು ತೋಟ ಮುಂತಾದೆಡೆ ಕಾಡಿನಂಚಿನ ಮನೆಗಳಿಗೆ ಭೇಟಿ ನೀಡಿದ್ದಲ್ಲದೆ, ಪಳ್ಳಿಗದ್ದೆಯ ಮನೆಗಳಲ್ಲಿ ಎರಡು ದಿನ ಬಂದಿದ್ದರು. ಇದರ ಸುಳಿವರಿತ ನಕ್ಸಲ್‌ ನಿಗ್ರಹ ದಳ ಇಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯಿತು. ಆಗ ನಕ್ಸಲರು ತಪ್ಪಿಸಿಕೊಂಡರೂ ಬಿಸಿಲೆ ಗಡಿಭಾಗದ ಕಾಡಿನಲ್ಲಿ ನಕ್ಸಲ್‌ ತಂಡದ ಸದಸ್ಯ, ರಾಯಚೂರಿಯ ಯಲ್ಲಪ್ಪ ಸೆ. 4ರಂದು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ. ಇದರಿಂದ ಬೆದರಿದ ನಕ್ಸಲರು ಕಾಡು ದಾರಿ ಮೂಲಕ ಪರಾರಿಯಾಗಿದ್ದರು. ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು – ಈ ಮೂರು ಜಿಲ್ಲೆಗಳಿಗೆ ಕಾಡು ಹೊಂದಿಕೊಂಡಿರುವುದರಿಂದ ತಪ್ಪಿಸಿಕೊಳ್ಳಲೂ ಹಲವು ದಾರಿಗಳಿವೆ. ಹೀಗಾಗಿ, ಸುಲಭವಾಗಿ ಕಾಲು ಕಿತ್ತಿದ್ದರು. ಪರಾರಿಯಾಗುವ ವೇಳೆ ಮೂರು ಜಿಲ್ಲೆಗಳ ಜನವತಿ ಪ್ರದೇಶಗಳ ಕೆಲ ಮನೆಗಳಿಗೆ
ಭೇಟಿ ನೀಡಿ, ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿದ್ದರು.

ಪೊಲೀಸರು ಅರಣ್ಯದ ಅಂಚಿನ ಜನವಸತಿ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುವ ಜತೆಗೆ, ಸ್ಥಳೀಯರಲ್ಲಿ ಧೈರ್ಯ ತುಂಬಿದ್ದರು. ಹಾಸನ ಜಿಲ್ಲೆಯ ಗಡಿಭಾಗ ಬಿಸಿಲೆ, ಕೊಡಗು ಜಿಲ್ಲೆ ಗಡಿಭಾಗ ಕಲ್ಮಕಾರು, ಕಡಮಕಲ್ಲು, ಕೇರಳದ ಗಡಿಭಾಗ ಸಂಪಾಜೆ ಹಾಗೂ ಕುಮಾರಪರ್ವತ ಮತ್ತು ತಪ್ಪಲಿನ ಪ್ರದೇಶಗಳಲ್ಲಿ ನಕ್ಸಲ್‌ ನಿಗ್ರಹ ದಳ ಶೋಧ ಕಾರ್ಯಕೈಗೊಂಡಿತ್ತು.

ಪ್ರತಿ ವರ್ಷ ಶೋಧ
ಇದಾದ ಬಳಿಕ ಪ್ರತಿ ವರ್ಷ ಶೋಧ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ನಕ್ಸಲರು ಹಲವು ಸಲ ಈ ಭಾಗದಲ್ಲಿ ಸಂಚರಿಸಿದ್ದಾರೆ. ಈ ಬಾರಿಯೂ ಶಿರಾಡಿ-ಅಡ್ಡಹೊಳೆ ಭಾಗದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಜನರಲ್ಲಿ ಭೀತಿ ಮೂಡಿಸಿದೆ. ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಇದ್ದ ನಕ್ಸಲರ ತಂಡದ ಚಲನವಲನವನ್ನು ಪೊಲೀಸರೂ ಖಚಿತಪಡಿಸಿದ್ದು, ಶಿರಾಡಿ ಹಾಗೂ ಶಿಶಿಲ ಭಾಗದ ರಕ್ಷಿತಾರಣ್ಯದಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ.

Advertisement

ಕಾರ್ಯಾಚರಣೆ ವೇಳೆ ಪೊಲೀಸರು ಗ್ರಾಮಸ್ಥರಿಗೆ ಶಂಕಿತ ನಕ್ಸಲರ ಫೋಟೋಗಳನ್ನು ತೋರಿಸಿದ್ದು, ಈ ಪೈಕಿ ರಾಜೇಶ್‌ ಹಾಗೂ ಲತಾ ಎಂದು ಹೇಳಿಕೊಂಡು ಇಬ್ಬರು ಬಂದಿದ್ದರೆಂದು ಗ್ರಾಮಸ್ಥರು ಹೇಳಿದ್ದಾರೆ.

ಎರಡು ತಂಡಗಳಲ್ಲಿ ಕಾರ್ಯಾಚರಣೆ
ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪದ ಮಿತ್ತಮಜಲು ಎಂಬಲ್ಲಿಗೆ ಮೂವರು ನಕ್ಸಲರು ಬಂದಿರುವುದನ್ನು ಧೃಡಪಡಿಸಲಾಗಿದೆ. ಈ ನಿಟ್ಟಿನಲ್ಲಿ ನಕ್ಸಲ್‌ ನಿಗ್ರಹ ಪಡೆಯ 2 ತಂಡ ಕಾಡಿನಲ್ಲಿ ಶೋಧ ಕಾರ್ಯ ಆರಂಭಿಸಿದೆ. ನಕ್ಸಲ್‌ ನಿಗ್ರಹ ಪಡೆಯ ಕಾರ್ಕಳ ವಿಭಾಗದ ಇನ್‌ಸ್ಪೆಕ್ಟರ್‌ ತಿಮ್ಮಪ್ಪ ನಾಯ್ಕ ಮತ್ತು ಹೆಬ್ರಿ ಘಟಕದ ಸಬ್‌ ಇನ್‌ಸ್ಪೆಕ್ಟರ್‌ ಅಮರೇಶ್‌ ನೇತೃತ್ವದ 2 ಪ್ರತ್ಯೇಕ ತಂಡ ಕಾರ್ಯಾಚರಣೆ ನಡೆಸುತ್ತಿದ್ದು. ಒಟ್ಟು 26 ಮಂದಿ ಪಾಲ್ಗೊಂಡಿದ್ದಾರೆ.
-ಶ್ರೀನಿವಾಸ್‌,
ಪುತ್ತೂರು ವಿಭಾಗದ ಡಿವೈಎಸ್ಪಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next