ಪಣಜಿ: ಪ್ರವಾಸಿ ಸೀಸನ್ ಆರಂಭವಾಗುವ ಮುನ್ನವೇ ಪ್ರವಾಸಿಗರು ಪ್ರವಾಸೋದ್ಯಮ ನಿಯಮಗಳನ್ನು ಉಲ್ಲಂಘಿಸಿ ಖೋಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬೀಚ್‍ನಲ್ಲಿ ಬಾರ್ ಮತ್ತು ರೆಸ್ಟೊರೆಂಟ್ ಹಾಕುತ್ತಿದ್ದಾರೆ.
ಖೋಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಅನಧಿಕೃತ ರೆಸಾರ್ಟ್‍ಗಳ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ, ಖೋಲಾ ಪಂಚಾಯತ್ ವ್ಯಾಪ್ತಿಯಲ್ಲಿರುವ 9 ಬೀಚ್ ರೆಸಾರ್ಟ್‍ಗಳಲ್ಲಿ ಇನ್ನೂ 6 ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ.
ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಪರವಾನಿಗೆ ಇಲ್ಲದೇ ಈ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮಗಳು ನಡೆಯುತ್ತಿವೆ. ಪಂಚಾಯತ್ ನಲ್ಲಿ ಈ ಅವ್ಯವಹಾರದಲ್ಲಿ ಕೆಲ ಪಂಚಾಯತ್ ಸದಸ್ಯರು ಶಾಮೀಲಾಗಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿದೆ.
9 ಸದಸ್ಯರ ಖೋಲಾ ಪಂಚಾಯತ್‍ನ ಅಧ್ಯಕ್ಷ ಅಜಯ್ ಪಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇನ್ನೂ ನೂತನ ಅಧ್ಯಕ್ಷರ ಆಯ್ಕೆಯಾಗಿಲ್ಲ. ಅಕ್ರಮದಲ್ಲಿ ಯಾರು, ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.
ಸಿ.ಆರ್.ಝಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಪಂ.ಸದಸ್ಯ ಶ್ರೀನಿವಾಸ ನಾಯ್ಕ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.