Advertisement

ಕಾರ್ಕಳದಲ್ಲಿ ಸರಣಿ ಕಳ್ಳತನ; ಭೀತಿಯಲ್ಲಿ ಜನ

12:41 PM Oct 08, 2022 | Team Udayavani |

ಕಾರ್ಕಳ: ಕಾರ್ಕಳ ತಾ|ನಲ್ಲಿ ಕಳ್ಳರ ಹಾವಳಿ ಮಿತಿ ಮೀರಿದೆ. ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಕಳ್ಳತನ ಸುದ್ದಿಗಳು ಈ ಹಿಂದೆ ಹೆಚ್ಚಾಗಿ ಕೇಳಿಬರುತ್ತಿತ್ತು. ಇದೀಗ ನಗರದಲ್ಲೆ ಹೆಚ್ಚಿನ ಕಳ್ಳತನ ಪ್ರಕರಣಗಳು ಸಂಭವಿಸುತ್ತಲಿದೆ. ಚಿನ್ನದಂಗಡಿ ಸಹಿತ ವ್ಯಾಪಾರಿಗಳು ಕಳ್ಳತನ ಕೃತ್ಯಗಳಿಂದ ಬೆಚ್ಚಿ ಬಿದ್ದಿದ್ದಾರೆ.

Advertisement

ನಗರದೊಳಗೆ ಮಾರುಕಟ್ಟೆ ಪರಿಸರದಲ್ಲಿ ಎರಡು ದಿನಗಳಲ್ಲಿ ಎಂಟು ಕಡೆ ಕಳ್ಳತನಕ್ಕೆ ಯತ್ನ ನಡೆದಿದೆ. ಇಲ್ಲಿನ ವಾಚ್‌ ಅಂಗಡಿಯೊಂದಕ್ಕೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಪಕ್ಕದಲ್ಲಿ ಸ್ಟೋರೇಜ್‌ ಅಂಗಡಿಯ ಬೀಗ ಮುರಿಯಲು ಯತ್ನಿಸಿದ್ದಾರೆ. ಮೊಬೈಲ್‌ ಅಂಗಡಿಯೊಂದಕ್ಕೆ ಸಿಸಿ ಕೆಮರಾ ಅಳವಡಿಕೆಯ ಸಂಪರ್ಕ ತುಂಡರಿಸಿ, ಒಳನುಗ್ಗುವ ಯತ್ನ ನಡೆಸಿದ್ದಾರೆ. ಪಕ್ಕದ ಅಂಗಡಿಗಳಿಗೂ ನುಗ್ಗುವ ಪ್ರಯತ್ನ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳವನ್ನು ಕರೆಯಿಸಿ ಶೋಧ ಕಾರ್ಯ ನಡೆಸಿದ್ದು, ಶ್ವಾನವು ಪಕ್ಕದ ಥಿಯೇಟರ್‌ ಸಮೀಪದ ತನಕ ತೆರಳಿ ಓಣಿಯ ಮೂಲಕ ಹೊರಬಂದಿದೆ. ಈ ದಾರಿಯಲ್ಲಿ ಖದೀಮರು ಪರಾರಿ ಆಗಿರುವ ಸಾಧ್ಯತೆ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದೆ.

ನಗರ ಹಾಗೂ ಗ್ರಾಮೀಣ ಎರಡೂ ಭಾಗದಲ್ಲೂ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಕಳ್ಳರು ಭಯ, ಆತಂಕವಿಲ್ಲದೆ ಮಧ್ಯ ರಾತ್ರಿ ಮನೆ, ಅಂಗಡಿಗಳಿಗೆ ನುಗ್ಗಿ ಕಳ್ಳತನ ನಡೆಸುತ್ತಿರುವುದಲ್ಲದೆ ಭಯದ ವಾತಾವರಣ ಸೃಷ್ಟಿಸುತ್ತಿರುವುದು ನಾಗರಿಕರು, ವ್ಯಾಪಾರಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಉಭಯ ಠಾಣೆ ವ್ಯಾಪ್ತಿಯಲ್ಲಿ ವಾರಕ್ಕೆ ಕನಿಷ್ಠ ಮೂರ್‍ನಾಲ್ಕು ಕಡೆಯಾದರೂ ಕಳ್ಳತನದ ಸುದ್ದಿ ಕೇಳಿ ಬರುತ್ತಿರುತ್ತದೆ.

ಓಣಿಯಂತಿರುವುದು ಸಹಕಾರಿ

ಕಾರ್ಕಳ ಸಣ್ಣ ಪೇಟೆಯಂತೆ ಇದ್ದು ಅಂಗಡಿ- ಮುಂಗಟ್ಟುಗಳು, ಮನೆಗಳು ಒಂದಕ್ಕೊಂದು ಹೊಂದಿ ಕೊಂಡಂತಿವೆ. ಮಾರುಕಟ್ಟೆ ಪ್ರದೇಶ ಸಹಿತ ಕೆಲವು ಪ್ರದೇಶಗಳು ಇಕ್ಕಟ್ಟಿನ ಪ್ರದೇಶಗಳಾಗಿವೆ. ಓಣಿಯಂತೆ ಇರುವ ಈ ಸ್ಥಳಗಳಲ್ಲಿ ಕಳ್ಳತನ ನಡೆಸುವವರಿಗೆ ತಪ್ಪಿಸಿಕೊಳ್ಳಲು, ಅಡಗಲು ಸಹಕಾರಿಯಾಗಿದೆ.

Advertisement

ಖಾಸಗಿ ಸಿಸಿ ಕೆಮರಾವಿದ್ದರೂ ಪ್ರಯೋಜನವಿಲ್ಲ

ನಗರದ ಎಲ್ಲ ಕಡೆ ಸಿಸಿ ಕೆಮರಾ ಅಳವಡಿಸಿಲ್ಲ. ಬಂಗ್ಲೆಗುಡ್ಡೆ, ಪುಲ್ಕೇರಿ, ಮೂರು ಮಾರ್ಗ, ಇನ್ನಿತರ ಕೆಲವು ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕೆಮರಾ ಅಳವಡಿಸಿದ್ದು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ಒಳಭಾಗ, ಓಣಿಗಳಲ್ಲಿ ಇರುವುದಿಲ್ಲ. ಅಂಗಡಿ ಮುಂಗಟ್ಟು, ವ್ಯಾಪಾರ ಕೇಂದ್ರಗಳ ಮಾಲಕರು ಖಾಸಗಿ ಸಿಸಿ ಕೆಮರಾ ಅಳವಡಿಕೊಂಡಿದ್ದರೂ ಕೆಲವರು ರಾತ್ರಿ ಗುಡುಗು ಮಿಂಚು ಇನ್ನಿತರ ಕಾರಣಕ್ಕೆ ಬಂದ್‌ ಮಾಡಿ ಮನೆಗಳಿಗೆ ಹೋಗುತ್ತಾರೆ. ಇನ್ನು ಕಳ್ಳತನ ನಡೆಸಲು ಬರುವ ಖದೀಮರು ಕೂಡ ಸಿಸಿ ಕೆಮರಾದ ಮುಂದೆ ಮುಖಕ್ಕೆ ಬಟ್ಟೆ ಕಟ್ಟಿ, ಕೆಮರಾ ಸಂಪರ್ಕಗಳನ್ನು ಕಡಿತಗೊಳಿಸಿ ನುಗ್ಗುವ ಪ್ರಯತ್ನ ನಡೆಸುತ್ತಾರೆ.

ಕಳ್ಳತನ ನಿಯಂತ್ರಣಕ್ಕೆ ಗಸ್ತು ಹೆಚ್ಚಿಸಿ

ನಗರದ ವ್ಯಾಪಾರ ಮಳಿಗೆ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಕಳ್ಳರು ಕಳ್ಳತನ ಮಾಡುತ್ತಿರುವುದು ಮತ್ತು ಕಳ್ಳತನಕ್ಕೆ ಯತ್ನಿಸುತ್ತಿದ್ದು ಇಂತಹ ಸ್ಥಳಗಳಲ್ಲಿ ರಾತ್ರಿ ವೇಳೆ ಪೊಲೀಸ್‌ ಗಸ್ತು ಹೆಚ್ಚಿಸುವ ಅಗತ್ಯವಿದೆ. ಅದಲ್ಲದೆ ಕಳ್ಳರ ಹಾವಳಿಗೆ ತಡೆಗೆ ವಿಶೇಷ ತಂಡ ರಚಿಸಿ ಕಳ್ಳರ ಪತ್ತೆ ಹಚ್ಚಬೇಕಿದೆ.

ಎಲ್ಲ ಪ್ರಕರಣ ದಾಖಲಿಸಿ

ಗ್ರಾಮಾಂತರ, ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮನೆ, ಅಂಗಡಿ, ಕಟ್ಟಡಗಳಿಂದ ನಿರಂತರ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಹೆಚ್ಚಿನ ಪ್ರಕರಣಗಳು ದಾಖಲಾಗುವುದೇ ಇಲ್ಲ. ದೇವಸ್ಥಾನ, ಮನೆಗಳಲ್ಲಿ ಕಳ್ಳತನವಾದಲ್ಲಿ ಪ್ರಕರಣ ದಾಖಲಾಗುತ್ತದೆ. ಅಂಗಡಿ, ಕಟ್ಟಡಗಳ ಕಳ್ಳತನ ನಡೆದಾಗ ಕೆಲವಷ್ಟೆ ಪ್ರಕರಣ ದಾಖಲಾಗುತ್ತವೆ.

ಪೊಲೀಸರಿಗೆ ಸುಳಿವೇ ಸಿಗುತ್ತಿಲ್ಲ

ಕಳ್ಳತನ ನಡೆದಾಗ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಬರುತ್ತಾರೆ. ಘಟನೆ ನಡೆಸ ಸ್ಥಳದ ಪಕ್ಕದ ಸಿಸಿ ಕೆಮಾರಾಗಳ ದೃಶ್ಯಾವಳಿಗಳನ್ನು ಪಡೆದು ತನಿಖೆ ನಡೆಸುತ್ತೇವೆ ಎನ್ನುತ್ತಾರೆ. ಆದರೇ ಸರಿಯಾದ ಮಾಹಿತಿ, ಸಾಕ್ಷಾಧಾರಗಳ ಕೊರತೆಯಿಂದ ಕಳ್ಳರ ಸ್ಪಷ್ಟ ಸುಳಿವು ಪೊಲೀಸರಿಗೆ ತಿಳಿಯುತ್ತಿಲ್ಲ. ಇದರಿಂದ ಪೊಲೀಸರು ಕೈ ಚೆಲ್ಲಿ ಕುಳಿತುಕೊಳ್ಳುವ ಸ್ಥಿತಿಯಿದೆ.

ಸಕಲ ಕ್ರಮ: ಕಳ್ಳತನ ಕೃತ್ಯಗಳಿಗೆ ಕಡಿವಾಣ ಹಾಕಿ ಅಪರಾಧ ತಡೆಗೆ ಪೊಲೀಸ್‌ ಇಲಾಖೆ ಕಡೆಯಿಂದ ಏನೇನೋ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆಯೋ ಅದೆಲ್ಲವನ್ನೂ ಮಾಡುತ್ತಾ ಇದ್ದೇವೆ. ಸಾರ್ವಜನಿಕರು, ನಾಗರಿಕರು, ವ್ಯಾಪಾರಿಗಳು ಹೀಗೆ ಎಲ್ಲರೂ ಸಹಕಾರ ಇಲಾಖೆಗೆ ಅತ್ಯಗತ್ಯ.  – ವಿಜಯಪ್ರಸಾದ್‌ , ಡಿವೈಎಸ್ಪಿ, ಕಾರ್ಕಳ

ಗಸ್ತು ಹೆಚ್ಚಿಸಿ: ನಿರಂತರ ಕಳ್ಳತನದಿಂದ ಸಾರ್ವಜನಿಕರಲ್ಲಿ ಒಂದು ರೀತಿಯ ಭಯದ ವಾತಾವರಣವಿದೆ.ಅದನ್ನು ನಿವಾರಿಸುವಲ್ಲಿ ಪೊಲೀಸ್‌ ಇನ್ನು ಹೆಚ್ಚು ಪರಿಣಾಮಕಾರಿ ಯಾಗಿ ಕಾರ್ಯನಿರ್ವಹಿಸಬೇಕು. ಸಿಸಿ ಕೆಮರಾ, ಗಸ್ತು, ಶೋಧನೆ ಹೆಚ್ಚಿಸಬೇಕು. –ರವಿರಾಜ್‌, ನಾಗರಿಕ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next