Advertisement
ಕುಂದಾಪುರ: ರಸ್ತೆ ಒಂದೇ, ಅದರಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಕುಂದಾಪುರ-ಶಿರೂರು ವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯಲ್ಲಿ ಬಹುತೇಕ ಮುಗಿದಿದೆ ಎಂಬುದು ಸ್ಥಳೀಯಾಡಳಿತದ ಲೆಕ್ಕಾಚಾರ. ಹಾಗಾಗಿ ಈಗಾಗಲೇ ರಸ್ತೆ ಜನಬಳಕೆ ಲಭ್ಯವಾಗಿದೆ. ಆದರೆ ಕಾಮಗಾರಿಗಳು ಪೂರ್ಣವಾಗಿಲ್ಲ. ಇದರಿಂದ ದಿನೇದಿನೆ ಈ ರಸ್ತೆ ಹಾದು ಹೋಗುವ ಪ್ರದೇಶದ ಜನರು ಹೆಚ್ಚಿನ ಸಮಸ್ಯೆ ಅನುಭವಿಸುವಂತಾಗಿದೆ.ಒಟ್ಟು 42 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು 5-6 ವರ್ಷಗಳಿಂದ ಪ್ರಗತಿಯಲ್ಲಿದೆ. ಎರಡೂ ಕಡೆಗಳ ರಸ್ತೆ, ಸೇತುವೆ ಪೂರ್ಣಗೊಂಡಿದ್ದು ಬಿಟ್ಟರೆ ಇನ್ನೇನೂ ಆಗಿಲ್ಲ. ಆದರೂ ಶಿರೂರಲ್ಲಿ ಟೋಲ್ ಸಂಗ್ರಹ ಕಳೆದ ವರ್ಷದಿಂದಲೇ ಆರಂಭವಾಗಿದೆ.
ಹೆಮ್ಮಾಡಿಯಿಂದ ಶಿರೂರು ಗಡಿಭಾಗದವರೆಗಿನ 38 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ 5 ಕಿ.ಮೀ.ಗೊಂದರಂತೆ 7 ಅಂಡರ್‌ಪಾಸ್‌ಗಳಿವೆ. ಒಂದೆಡೆಯಂತೂ ಎರಡೇ ಕಿ.ಮೀ ವ್ಯಾಪ್ತಿಯಲ್ಲಿ ಎರಡೆರಡು ಅಂಡರ್ ಪಾಸ್‌ಗಳಿವೆ. ಮುಳ್ಳಿಕಟ್ಟೆ – ತ್ರಾಸಿ ಮಧ್ಯೆ, ನಾವುಂದದ ಮಸ್ಕಿ, ಕಿರಿಮಂಜೇಶ್ವರ, ನಾಯ್ಕನಕಟ್ಟೆ, ಉಪ್ಪುಂದ, ಬೈಂದೂರು ಹಾಗೂ ಶಿರೂರು ಪೇಟೆಯಲ್ಲಿ ಅಂಡರ್‌ಪಾಸ್ ನಿರ್ಮಾಣ ಯೋಜನೆಯಲ್ಲಿದೆ. ಆದರೆ ಇದಕ್ಕೆ ಮಾನದಂಡವೇನೆಂಬುದು ಸ್ಪಷ್ಟವಾಗಿಲ್ಲ. ಏನೇನು ಕಾಮಗಾರಿ ಬಾಕಿ?
ತಲ್ಲೂರಿನಿಂದ ಆರಂಭಗೊಂಡು ಶಿರೂರುವರೆಗಿನ ಪ್ರಮುಖ ಜಂಕ್ಷನ್‌ಗಳಲ್ಲಿ ಸರ್ವಿಸ್ ರಸ್ತೆ ಆಗಿಲ್ಲ. ಕೆಲವೆಡೆ ಹಿಂದೆ ಇದ್ದ ಬಸ್ ನಿಲ್ದಾಣಗಳನ್ನು ಹೆದ್ದಾರಿ ಕಾಮಗಾರಿಗಾಗಿ ಕೆಡವಲಾಗಿದ್ದು, ಅದನ್ನು ಇನ್ನೂ ಪುನರ್ ನಿರ್ಮಾಣ ಮಾಡಿಲ್ಲ. ಇನ್ನು ಬಸ್ ಬೇಗಳಿಲ್ಲದೆ ತ್ರಾಸಿ ಮತ್ತಿತರ ಜಂಕ್ಷನ್‌ಗಳಲ್ಲಿ ಬಸ್‌ಗಳು ಹೆದ್ದಾರಿಯಲ್ಲೇ ನಿಲ್ಲುವಂತಾಗಿದೆ. ಮಳೆಗಾಲದಲ್ಲಿ ಹೆದ್ದಾರಿಯ ನೀರು ಹರಿದು ಹೋಗಲು ಎಲ್ಲೂ ಚರಂಡಿಯೇ ನಿರ್ಮಾಣ ಮಾಡಿಲ್ಲ. ಹಲವೆಡೆಗಳಲ್ಲಿ ಹೆದ್ದಾರಿ ನೀರು ಆಸುಪಾಸಿನ ಗದ್ದೆಗಳಿಗೆ ಹರಿಯುತ್ತಿದ್ದು, ರೈತರು ಬೇಸಾಯ ಮಾಡದಂತಾಗಿದೆ. ತಲ್ಲೂರು, ತ್ರಾಸಿಯಂತಹ ಜಂಕ್ಷನ್‌ಗಳಲ್ಲಿ ಬೀದಿ ದೀಪಗಳಿಲ್ಲ. ಅನೇಕ ಕಡೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ. ಹಲವು ಜಂಕ್ಷನ್‌ಗಳಲ್ಲಿ ವಾಹನಗಳನ್ನು ತಿರುಗಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಉದ್ಯಾನದ ಮಾತು ಮುಗಿದು ಹೋದಂತಿದೆ. ಎಲ್ಲೂ ಸಹ ಉದ್ಯಾನಗಳನ್ನು ನಿರ್ಮಿಸಿಲ್ಲ.
Related Articles
Advertisement
2019ರಲ್ಲಿ ತಲ್ಲೂರು – ಹೆಮ್ಮಾಡಿ ಮಧ್ಯದ ರಾಜಾಡಿ ಸಮೀಪದ ಹೆದ್ದಾರಿಯ ಒಂದು ಬದಿ ಮಳೆಗಾಲದಲ್ಲಿ ಕುಸಿದು, ಬಿರುಕು ಬಿಟ್ಟಿತ್ತು. ಆಗ ಸಂಚಾರ ಆರಂಭಗೊಂಡು ಕೆಲವೇ ತಿಂಗಳುಗಳಾಗಿತ್ತು. ಇನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಅರಾಟೆ ಸೇತುವೆಯ ಪಿಲ್ಲರ್ ಹಾಗೂ ಸ್ಲಾಬ್‌ನ ಮಧ್ಯೆ ಬಿರುಕು ಕಾಣಿಸಿಕೊಂಡು, ಸೇತುವೆಯ ಕಂದಕ ಸೃಷ್ಟಿಯಾಗಿತ್ತು. ಕೆಲವು ತಿಂಗಳ ಕಾಲ ವಾಹನ ಸಂಚಾರವನ್ನೇ ಸ್ಥಗಿತಗೊಳಿಸಲಾಗಿತ್ತು. ಇನ್ನು ಒತ್ತಿನೆಣೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿತಗೊಂಡು ಹೆದ್ದಾರಿಯ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದರಿಂದಾಗಿ ಈ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಸಂಸ್ಥೆಯ ಕಾರ್ಯನಿರ್ವಹಣೆಯ ಗುಣಮಟ್ಟದ ಬಗ್ಗೆಯೇ ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಸಾರ್ವಜನಿಕರು.
ಸರ್ವೀಸ್ ರಸ್ತೆ ಕೇಳಬೇಡಿರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರ ಪ್ರಕಾರ, ಜನರು ಸರ್ವೀಸ್ ರೋಡ್ ಅನ್ನು ಕೇಳುವಂತಿಲ್ಲ. ಸ್ಥಳೀಯರು ಎಲ್ಲಿ ಸರ್ವೀಸ್ ರೋಡ್, ಡಿವೈಡರ್ ಬೇಕು ಎನ್ನುತ್ತಾರೋ ಅಲ್ಲಿಗೆ ಅನುಮತಿ ನೀಡುವುದಿಲ್ಲ. ಅವರು ಎಲ್ಲಿಗೆ ಏನು ಬೇಕು ಎಂಬುದನ್ನು ಕೇಳದೇ ತಮ್ಮ ಇಚ್ಛೆಗೆ ಬಂದಲ್ಲಿ ಸೌಲಭ್ಯವನ್ನು ಕಲ್ಪಿಸಲು ಯತ್ನಿಸುತ್ತಿದ್ದಾರೆ. ಇದರಿಂದ ಜನರು ರೋಸಿ ಹೋಗಿದ್ದಾರೆ. ಸರ್ವೀಸ್ ರೋಡ್ ಕಥೆ ಒಬ್ಬರದಲ್ಲ; ಎಲ್ಲ ಊರುಗಳಲ್ಲೂ ಈ ಸಮಸ್ಯೆ ಇದೆ. ಕುಂದಾಪುರದ ಹೃದಯ ಭಾಗದಲ್ಲೇ ಮೇಲುಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಳ್ಳುತ್ತಲೇ ಇದೆ. ಹಲವು ಬಾರಿ ಗುತ್ತಿಗೆದಾರರಿಗೆ ಗಡುವು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ಮಾರ್ಚ್ 31ರೊಳಗೆ ಮುಗಿಯ ಬೇಕಿದ್ದರೂ, ಲಕ್ಷಣಗಳು ತೋರುತ್ತಿಲ್ಲ. ಈ ರೀತಿಯ ಹಲವಾರು ಅರೆಬರೆ ಕಾಮಗಾರಿ ಯಿಂದಾಗಿ ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಸುರಕ್ಷವಾದುದಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.