ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿಕಾಬೂಲ್‌ನಲ್ಲಿರುವ ಇಂಟರ್‌ಕಾಂಟಿನೆಂಟಲ್ ಹೋಟೆಲ್ ಮೇಲೆ ನಾಲ್ವರು ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಸ್ಥಳೀಯ ಕಾಲಮಾನ ರಾತ್ರಿ 9:30ರ ಸುಮಾರಿಗೆ ಬಂದ ಉಗ್ರರು, ಅಲ್ಲಿದ್ದ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದಾರೆ.
ಇದರಿಂದ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಎಂದು “ದ ಸನ್’ ವರದಿ ಮಾಡಿದೆ. ನಾಲ್ವರು ಸ್ವಯಂಚಾಲಿತ ಮತ್ತು ಅತ್ಯಾಧುನಿಕ ರೈಫಲ್‌ಗಳನ್ನು ಹಿಡಿದುಕೊಂಡು ನುಗ್ಗಿದ ಉಗ್ರರು, ಕೆಲವು ಮಹಡಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆ ನ್ಯಾಷನಲ್ ಡೈರೆಕ್ಟೊರೇಟ್ ಆಫ್ ಸೆಕ್ಯುರಿಟಿ (ಎನ್‌ಡಿಎಸ್) ಹೇಳಿದೆ.
ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ಹೋಟೆಲ್‌ನತ್ತ ಕಳುಹಿಸಲಾಗಿದ್ದು ಒಬ್ಬ ದಾಳಿಕೋರ ಅಸುನೀಗಿದ್ದಾನೆ ಎಂದು ಹೇಳಲಾಗಿದೆ. ಹೋಟೆಲ್‌ನಲ್ಲಿರುವ ಅತಿಥಿಗಳು ಸುದ್ದಿ ಸಂಸ್ಥೆ ಜತೆಗೆ ಮಾತನಾಡಿ “ಹೋಟೆಲ್ ನಲ್ಲಿ ಗುಂಡು ಹಾರಾಟದ ಸದ್ದು ಕೇಳಿದೆ. ದಾಳಿ ಮಾಡಿದ ವ್ಯಕ್ತಿಗಳು ಒಳಗಿದ್ದಾರೋ, ಹೊರಗಿದ್ದಾರೋ ಎಂಬ ಬಗ್ಗೆ ತಿಳಿದಿಲ್ಲ’ ಎಂದಿದ್ದಾರೆ.
ಸದ್ಯಕ್ಕೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಮೊದಲ ಮಹಡಿಯಲ್ಲಿ ವಿಚಾರ ಸಂಕಿರಣ ನಡೆಯುತ್ತಿದ್ದಾಗ ನಾಲ್ವರು ಒಳನುಗ್ಗಿ ಗುಂಡು ಹಾರಿಸಿದರು ಎಂದು ಹೋಟೆಲ್‌ನ ಮ್ಯಾನೇಜರ್ ಅಹಮದ್ ಹ್ಯಾರಿಸ್ ನಯಾಜ್ ತಿಳಿಸಿದ್ದಾರೆ.
2011ರಲ್ಲಿ ಕೂಡ ಈ ಹೋಟೆಲ್ ಮೇಲೆ ದಾಳಿ ನಡೆದು 10 ಮಂದಿ ನಾಗರಿಕರೂ ಸೇರಿದಂತೆ 21 ಮಂದಿ ಅಸುನೀಗಿದ್ದರು.