Advertisement

ನಾಗಾ ಉಗ್ರರಿಗೆ ಗುಂಡೇಟಿನ ಶಿಕ್ಷೆ; ರಾತ್ರೋರಾತ್ರಿ ಕಾರ್ಯಾಚರಣೆ

06:00 AM Sep 28, 2017 | Team Udayavani |

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದಿದ್ದ ಭಾರತೀಯ ಸೇನೆ, ಅಂಥದ್ದೇ ಮಾದರಿಯಲ್ಲಿ ಭಾರತ-ಮ್ಯಾನ್ಮಾರ್‌ ಗಡಿಯಲ್ಲೂ ಭಾರಿ ಕಾರ್ಯಾಚರಣೆ ನಡೆಸಿ, ನಾಗಾ ಬಂಡುಕೋರರ ಹತ್ಯೆ ಮಾಡಿದೆ.

Advertisement

ಆದರೆ, ಈ ಕಾರ್ಯಾಚರಣೆಯನ್ನು ಸರ್ಜಿಕಲ್‌ ಸ್ಟ್ರೈಕ್‌ ಎಂದು ಕರೆಯದ ಸೇನೆ, ಇದೊಂದು ವ್ಯವಸ್ಥಿತ ಕಾರ್ಯಾಚರಣೆ ಎಂದು ಸ್ಪಷ್ಟಪಡಿಸಿದೆ. ಬುಧವಾರ ಬೆಳಗಿನ ಜಾವ 4.45ಕ್ಕೆ ನ್ಯಾಷನಲಿಸ್ಟ್‌ ಸೋಶಿಯಲಿಸ್ಟ್‌ ಕಾನ್ಸಿಲ್‌ ಆಫ್ ನಾಗಾಲ್ಯಾಂಡ್‌(ಎನ್‌ಎಸ್‌ಸಿಎನ್‌-ಕೆ) ಉಗ್ರ ಸಂಘಟನೆಗೆ ಸೇರಿದ ಅಸಂಖ್ಯಾತ ಬಂಡುಕೋರರನ್ನು ಹತ್ಯೆ ಮಾಡಿರುವುದಾಗಿ ಸೇನೆ ಹೇಳಿದೆ. 

ಆದರೆ ಅಂತಾರಾಷ್ಟ್ರೀಯ ಗಡಿ ರೇಖೆ ದಾಟಿಲ್ಲ ಎಂದಿರುವ ಅದು, ಭಾರತದ ಪ್ರದೇಶದಲ್ಲೇ ಈ ದಾಳಿ ನಡೆಸಿರುವುದಾಗಿ ಹೇಳಿದೆ. ಈ ಮೂಲಕ ಅಂತಾರಾಷ್ಟ್ರೀಯ ಗಡಿ ರೇಖೆ ಒಪ್ಪಂದ ಗೌರವಿಸಿರುವುದಾಗಿ ತಿಳಿಸಿದೆ. ಇದೇ ವೇಳೆ, ಸೇನೆ ಕಡೆಯಿಂದ ಯಾರೊಬ್ಬರೂ ಹತರಾಗಿಲ್ಲ ಎಂದೂ ಸೇನೆಯ ಪೂರ್ವ ಕಮಾಂಡ್‌ನ‌ ವಕ್ತಾರರು ಸ್ಪಷ್ಟಪಡಿಸಿದ್ದಾರೆ. 

ಬೆಳಗಿನ ಜಾವ 4.45ಕ್ಕೆ ಈಸ್ಟ್ರನ್‌ ಕಮಾಂಡ್‌ನ‌ ಒಂದು ತುಕಡಿಯು ಭಾರತ-ಮ್ಯಾನ್ಮಾರ್‌ ಗಡಿಯಲ್ಲಿ ಭಾರಿ ಕಾರ್ಯಾಚರಣೆ ನಡೆಸಿ, ಹಲವಾರು ಬಂಡುಕೋರರನ್ನು ಹತ್ಯೆ ಮಾಡಿದೆ. ನಮ್ಮ ಸೇನೆ ಬಂಡುಕೋರರ ಅಡಗುದಾಣಗಳಲ್ಲಿ ಸ್ಪಷ್ಟವಾಗಿ ಗುರುತಿಸಿ, ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿತು. ಬಂಡುಕೋರರು ತಪ್ಪಿಸಿಕೊಳ್ಳಲಾರದೇ ಪರಾರಿಯಾಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಭಾರತೀಯ ಯೋಧರು, ಅಸಂಖ್ಯಾತ ಬಂಡುಕೋರರನ್ನು ಹತ ಮಾಡಿದರು ಎಂದು ಸೇನೆ ಹೇಳಿಕೆ ನೀಡಿದೆ.

ಈ ಸಂಬಂಧ ದೆಹಲಿಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್‌ ಸಿಂಗ್‌, ಮ್ಯಾನ್ಮಾರ್‌ ನಮ್ಮ ಸ್ನೇಹಿ ರಾಷ್ಟ್ರ. ನಾಗಾಲ್ಯಾಂಡ್‌ ಪ್ರದೇಶದಲ್ಲಿ ಏನಾಗಿದೆಯೋ ಈ ಬಗ್ಗೆ ಆ ದೇಶಕ್ಕೆ ಮೊದಲೇ ಮಾಹಿತಿ ನೀಡಿದ್ದೇವೆ. ಇದರಲ್ಲಿ ಎರಡು ಮಾತೇ ಇಲ್ಲ ಎಂದರು. 

Advertisement

ನಮ್ಮಲ್ಲಿ ಯಾರು ಸತ್ತಿಲ್ಲ: ಸೇನಾ ಕಾರ್ಯಾಚರಣೆಗೆ ಪ್ರತಿಯಾಗಿ ಫೇಸ್‌ಬುಕ್‌ನಲ್ಲಿ ಹೇಳಿಕೆ ಹೊರಡಿಸಿರುವ ಇಸಾಕ್‌ ಸುಮಿ ಎಂಬ ಬಂಡುಕೋರ, ಕಾರ್ಯಾಚರಣೆ ನಡೆದದ್ದು ಸತ್ಯ. ಆದರೆ ಅದು ಬೆಳಗಿನ ಜಾವ 4.45ಕ್ಕಲ್ಲ, 3 ಗಂಟೆಗೇ ಆರಂಭವಾಯಿತು. ಕಾರ್ಯಾಚರಣೆಗೆ ಬಂದವರ ಮೇಲೆ ನಾವೇ ದಾಳಿ ಮಾಡಿದೆವು. ನಮ್ಮ ಕಡೆಯಿಂದ ಒಬ್ಬರೇ ಒಬ್ಬರು ಸತ್ತಿಲ್ಲ. ನಮ್ಮ ಯೋಧರೆಲ್ಲಾ ಸುರಕ್ಷಿತರಾಗಿದ್ದಾರೆ. ಆದರೆ ಭಾರತೀಯ ಸೇನೆಗೆ ಸೇರಿದ ಮೂವರನ್ನು ಹತ್ಯೆ ಮಾಡಿದ್ದೇವೆ. ಅಲ್ಲದೆ, ಭಾರಿ ಪ್ರಮಾಣದಲ್ಲಿ ಗಾಯಗಳಾಗಿವೆ ಎಂದು ಬರೆದುಕೊಂಡಿದ್ದಾರೆ. ಇದರ ಜತೆಗೆ ತಾನು ಈಗಲೂ ಆಕ್ರಮಿತ ಮ್ಯಾನ್ಮಾರ್‌ನಲ್ಲೇ ಇದ್ದೇನೆ ಎಂದೂ ಹೇಳಿದ್ದಾರೆ. 

ಆದರೆ ಫೇಸ್‌ಬುಕ್‌ನ ಪೋಸ್ಟ್‌ ಬಗ್ಗೆ ಪರಿಶೀಲನೆ ನಡೆಸಿದಾಗ, ಇದು ನಾಗಾಲ್ಯಾಂಡ್‌ನ‌ ಪ್ರದೇಶವೊಂದರಲ್ಲೇ ಕುಳಿತು ಮಾಡಿರುವ ಬಗ್ಗೆ ಪತ್ತೆಯಾಗಿದೆ. ಜತೆಗೆ ಈಗ ತನ್ನನ್ನು ನಾಗಾ ಬಂಡುಕೋರ ಸಂಘಟನೆಯ ಪಿಆರ್‌ಒ ಎಂದೂ ಕರೆದುಕೊಂಡಿದ್ದಾನೆ.

ಈತನ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿರುವ ಸೇನೆ, ನಮ್ಮ ಕಡೆಯ ಮೂವರು ಯೋಧರ ಸಾವಿನ ಬಗ್ಗೆ ನಾಗಾ ಉಗ್ರರು ನೀಡಿರುವ ಮಾಹಿತಿ ಸುಳ್ಳು. ಅಲ್ಲದೆ 4.45ಕ್ಕೇ ದಾಳಿ ಶುರು ಮಾಡಿದೆವು ಎಂದಿದೆ. 

2015ರಲ್ಲೂ ಭಾರತೀಯ ಸೇನೆ 20 ಯೋಧರ ಸಾವಿಗೆ ಕಾರಣರಾಗಿದ್ದ ಉಗ್ರರನ್ನು ಇಂಥದ್ದೇ ಕಾರ್ಯಾಚರಣೆ ಮಾಡಿ ಹೊಡೆದುರುಳಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next