ನವದೆಹಲಿ: ಉತ್ತರ ಭಾರತದ ಹಲವು ಭಾಗಗಳಲ್ಲಿ ಇನ್ನೂ ಕೆಲವು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು – ಕಾಶ್ಮೀರದಲ್ಲಿ ಭಾರೀ ಮಳೆಯಾಗುತ್ತಿದೆ.
ರಾಷ್ಟ್ರ ರಾಜಧಾನಿಯಲ್ಲಿ ಸತತ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಹಲವು ಭಾಗಗಳಲ್ಲಿ ನೀರು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 153 ಮಿ.ಮೀ ದಾಖಲೆ ಮಳೆಯಾಗಿದೆ ಇದರಿಂದ ಸುಮಾರು 40 ವರ್ಷಗಳ ಹಿಂದಿನ ದಾಖಲೆ ಮುರಿದಿದೆ. 1982ರಲ್ಲಿ ದೆಹಲಿಯಲ್ಲಿ ಭಾರೀ ಮಳೆಯಾಗಿತ್ತು.
ದೆಹಲಿ ಮತ್ತು ಗುರುಗ್ರಾಮ್‌ನ ಹಲವಾರು ಭಾಗಗಳು ಜಲಾವೃತವಾಗಿದೆ. ದೆಹಲಿಯಲ್ಲಿ 58 ವರ್ಷದ ಮಹಿಳೆಯೊಬ್ಬರು ಫ್ಲಾಟ್‌ನ ಮೇಲ್ಛಾವಣಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ 24 ಗಂಟೆಗಳ ಅವಧಿಯಲ್ಲಿ ಮಳೆಯಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ರಾಜ್‌ಸಮಂದ್, ಜಲೋರ್, ಪಾಲಿ, ಅಜ್ಮೀರ್, ಅಲ್ವಾರ್, ಬನ್ಸ್‌ವಾರಾ, ಭರತ್‌ಪುರ, ಭಿಲ್ವಾರಾ, ಬುಂದಿ, ಚಿತ್ತೋರ್‌ಗಢ, ದೌಸಾ, ಧೌಲ್‌ಪುರ, ಜೈಪುರ ಮತ್ತು ಕೋಟಾ ಜಿಲ್ಲೆ ಸೇರಿದಂತೆ ರಾಜಸ್ಥಾನದ ಒಂಭತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮತ್ತೊಂದೆಡೆ ಭಾರೀ ಮಳೆಯಿಂದಾಗಿ ಜಮ್ಮು – ಕಾಶ್ಮೀರ ಮತ್ತು ಉತ್ತರಾಖಂಡದಲ್ಲಿ ಭೂಕುಸಿತ ಉಂಟಾಗುತ್ತಿದೆ. ಇದರೊಂದಿಗೆ ಸತತ ಮೂರನೇ ದಿನವೂ ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ.
ಕೇರಳ ಮತ್ತು ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೇರಳದ ಕೋಝಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಹಿಮಾಚಲ ಪ್ರದೇಶದ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಹರ್ಯಾಣ ಮತ್ತು ಪಂಜಾಬ್‌ನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.