ಮುಂಬೈ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆಗೆ ಇಂದಿಗೆ ಏಳು ವರ್ಷ ಸಂದಿದೆ. 2013ರ ಜೂನ್ 23ರಂದು ನಡೆದ 50 ಓವರ್ ಗಳ ಮಿನಿ ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.
ಇಂಗ್ಲೆಂಡ್ ನ ಎಡ್ಜ್ ಬಾಸ್ಟನ್ ನಲ್ಲಿ ನಡೆದ ಫೈನಲ್ ನಲ್ಲಿ ಭಾರಿ ಮಳೆಯಿಂದಾಗಿ ತಲಾ 20 ಓವರ್ ಗಳ ಪಂದ್ಯ ನಡೆಸಲಾಯಿತು. ಮೊದಲ ಬ್ಯಾಟಿಂಗ್ ನಡೆಸಿದ ಭಾರತ ಗಳಿಸಿದ್ದು, ಏಳು ವಿಕೆಟ್ ನಷ್ಟಕ್ಕೆ 129 ರನ್ ಮಾತ್ರ. ವಿರಾಟ್ ಕೊಹ್ಲಿ 34 ಎಸೆತ ಎದುರಿಸಿ 43 ರನ್ ಗಳಿಸಿದ್ದೇ ತಂಡದ ಪರ ಅತೂ ಹೆಚ್ಚಿನ ಗಳಿಕೆ. ಅಂತಿಮವಾಗಿ ಜಡೇಜಾ 33 ರನ್ ಗಳಿಸಿದ್ದರು, ಇಂಗ್ಲೆಂಡ್ ಪರ ರವಿ ಬೋಪಾರ ಮೂರು ವಿಕೆಟ್ ಕಬಳಿಸಿದ್ದರು.
ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡಿತು. ಎಂಟು ಓವರ್ ಗಳಲ್ಲಿ 46 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಆದರೆ ಐದನೇ ವಿಕೆಟ್ ಗೆ ಜೊತೆಯಾದ ಬೋಪಾರ ಮತ್ತು ಇಯಾನ್ ಮೋರ್ಗನ್ 64 ರನ್ ಜೊತೆಯಾಟ ನಡೆಸಿದರು. ಆದರೆ ಇಂಗ್ಲೆಂಡ್ ಗೆಲುವಿಗೆ 20 ರನ್ ಬೇಕಿದ್ದಾಗ ಇವರಿಬ್ಬರನ್ನೂ ಪೆವಿಲಿಯನ್ ಗೆ ಕಳುಹಿಸಿದ ಇಶಾಂತ್ ಶರ್ಮಾ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಅಂತಿಮ ಓವರ್ ನಲ್ಲಿ ಅಶ್ವಿನ್ ಕಡಿವಾಣ ಹಾಕಿ, ಭಾರತಕ್ಕೆ ಐದು ರನ್ ಗಳ ವೀರೋಚಿತ ಗೆಲುವು ಸಾಧಿಸಲು ಸಾಧ್ಯವಾಗಿಸಿದರು.
ಈ ಗೆಲುವಿನೊಂದಿಗೆ ಮಹೇಂದ್ರ ಸಿಂಗ್ ಧೋನಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದ ಏಕೈಕ ನಾಯಕನಾಗಿ ಮೂಡಿಬಂದರು.