“ಕಥಾ ಸಂಗಮ’ ಚಿತ್ರದ ಬಗ್ಗೆ ನಿಮಗೆ ಗೊತ್ತಿರಬಹುದು. 1976ರಲ್ಲಿ ಕನ್ನಡ ಚಿತ್ರರಂಗದ “ಚಿತ್ರಬ್ರಹ್ಮ’ ಖ್ಯಾತಿಯ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿ ತೆರೆಗೆ ತಂದಿದ್ದ “ಕಥಾ ಸಂಗಮ’ ಆಗಿನ ಕಾಲದಲ್ಲಿ ವಿಭಿನ್ನ ಪ್ರಯೋಗದ ಚಿತ್ರ ಎಂದೇ ಹೆಸರುವಾಸಿಯಾಗಿ, ಜನಪ್ರಿಯವಾಗಿತ್ತು. ಇಂದಿಗೂ ಅನೇಕ ಸಂದರ್ಭಗಳಲ್ಲಿ “ಕಥಾ ಸಂಗಮ’ ಚಿತ್ರದ ಬಗ್ಗೆ ಚಿತ್ರರಂಗದಲ್ಲಿ ಮಾತನಾಡುವುದನ್ನು ಕೇಳಿರಬಹುದು. ಎಪ್ಪತ್ತರ ದಶಕದಲ್ಲಿ ಸಾಕಷ್ಟು ಸದ್ದು ಮಾಡಿದ್ದ “ಕಥಾ ಸಂಗಮ’ ಚಿತ್ರ ಈಗ ಮತ್ತೆ ಅದೇ ಹೆಸರಿನಲ್ಲಿ ತೆರೆಗೆ ಬರುತ್ತಿದೆ.
ಹಾಗಂತ ಇದು ಪುಟ್ಟಣ್ಣ ಕಣಗಾಲರ “ಕಥಾ ಸಂಗಮ’ದ ರೀ-ರಿಲೀಸ್ ಅಲ್ಲ. ಅದೇ ಹೆಸರನ್ನ ಇಟ್ಟುಕೊಂಡು ನಿರ್ಮಾಪಕ ಕಂ ನಿರ್ದೇಶಕ ರಿಷಭ್ ಶೆಟ್ಟಿ ಹೊಸದಾಗಿ, ಮತ್ತೂಂದು “ಕಥಾ ಸಂಗಮ’ವನ್ನು ತೆರೆಗೆ ತರುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ “ಕಥಾಸಂಗಮ’ದಲ್ಲಿ ಏಳು ಜನ ನವ ನಿರ್ದೇಶಕರು, ಏಳು ವಿಭಿನ್ನ ಕಥೆಗಳನ್ನು, ಏಳು ಭಾಗಗಳಾಗಿ ನಿರ್ದೇಶಿಸಿದ್ದು, ಈ ಏಳು ಭಾಗಗಳು ಸೇರಿ ಕೊನೆಯಲ್ಲಿ ಒಂದು ಚಿತ್ರವಾಗುತ್ತದೆ.
ಕೆಲ ವರ್ಷಗಳ ಹಿಂದೆ ನಿರ್ದೇಶಕ ರಿಷಭ್ ಶೆಟ್ಟಿ ಅವರ ತಲೆಯಲ್ಲಿ ಹೊಳೆದ ಇಂಥದ್ದೊಂದು ಐಡಿಯಾ, ಈಗ ಚಿತ್ರರೂಪದಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಮೊದಲ ಹಂತವಾಗಿ ಇಂದು ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ತಮ್ಮ ಹೊಸ ಪ್ರಯೋಗದ ಮುಂದೆ ಮಾಹಿತಿ ನೀಡಲು ತಮ್ಮ ತಂಡವನ್ನು ಮಾಧ್ಯಮಗಳ ಮುಂದೆ ಕರೆತಂದಿದ್ದ ರಿಷಭ್ ಶೆಟ್ಟಿ, “ಕಥಾ ಸಂಗಮ’ದ ಕುರಿತು ಒಂದಷ್ಟು ಮಾತನಾಡಿದರು.
“ಕೆಲ ವರ್ಷಗಳ ಹಿಂದೆ ನನಗೆ ಬಂದ ಈ ಯೋಚನೆಯನ್ನು ನನ್ನ ತಂಡದ ಜೊತೆ ಹಂಚಿಕೊಂಡೆ. ಅವರಿಂದಲೂ ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ, ಕೊನೆಗೆ ನಮ್ಮ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾದೆವು. ಅದರಂತೆ ಪ್ರತಿಭಾನ್ವಿತ ಏಳು ನಿರ್ದೇಶಕರು, ಕಥೆ, ಅದಕ್ಕೆ ತಕ್ಕಂತ ಕಲಾವಿದರು ಮತ್ತು ತಂತ್ರಜ್ಞರನ್ನು ಹುಡುಕಿ ಒಂದೊಳ್ಳೆ ಚಿತ್ರವನ್ನು ಮಾಡಿದ್ದೇವೆ. ಚಿತ್ರದಲ್ಲಿ ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಹಕರು ಸೇರಿದಂತೆ ಸಂಪೂರ್ಣ ಏಳು ತಂಡವನ್ನು ಕಟ್ಟಿಕೊಂಡು ಈ ಚಿತ್ರ ಮಾಡಿದ್ದೇವೆ.
ಸದ್ಯ ಚಿತ್ರ ಸೆನ್ಸಾರ್ ಮುಂದಿದ್ದು, ಅನುಮತಿ ಸಿಗುತ್ತಿದ್ದಂತೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಿದೆ’ ಎಂದರು. ಇನ್ನು “ಕಥಾಸಂಗಮ’ ಚಿತ್ರದಲ್ಲಿರುವ ಏಳು ಕಥೆಗಳನ್ನು, ಏಳು ಜನ ನವ ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ. ಕಿರಣ್ ರಾಜ್. ಕೆ, ಶಶಿ ಕುಮಾರ್. ಪಿ, ಚಂದ್ರಜಿತ್ ಬೆಳ್ಳಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್. ಎ, ಕರಣ್ ಅನಂತ್, ಜಮದಗ್ನಿ ಮನೋಜ್ ಚಿತ್ರದಲ್ಲಿ ಒಂದೊಂದು ಕಥೆಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಚಿತ್ರದಲ್ಲಿ ತಾವು ನಿರ್ದೇಶಿಸಿರುವ ಏಳು ವಿಭಿನ್ನ ಕಥೆಗಳ ಬಗ್ಗೆ ಮಾತನಾಡಿದ ಏಳು ನಿರ್ದೇಶಕರು, ಚಿತ್ರದ ಚಿತ್ರೀಕರಣ ಮತ್ತಿತರ ವಿಷಯಗಳನ್ನು ಹಂಚಿಕೊಂಡರು. ಅಂತಿಮವಾಗಿ ರಿಷಭ್ ಶೆಟ್ಟಿ ವಿಷನ್‌ನಂತೆ ಈ ಏಳು ನಿರ್ದೇಶಕರ “ಕಥಾ ಸಂಗಮ’ ಒಂದು ಚಿತ್ರವಾಗಿ ತೆರೆಗೆ ಬರುತ್ತಿದ್ದು, ರಿಷಭ್ ಶೆಟ್ಟಿ ಅವರ ಇಂಥದ್ದೊಂದು ವಿಭಿನ್ನ ಕನಸಿಗೆ ಅವರ ಜೊತೆ ನಿರ್ಮಾಪಕರಾಗಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್.ಆರ್ ಬಂಡವಾಳ ಹೂಡಿ ಕೈ ಜೋಡಿಸಿದ್ದಾರೆ.
ರಾಜ್ ಬಿ ಶೆಟ್ಟಿ, ರಿಷಭ್ ಶೆಟ್ಟಿ, ಹರಿಪ್ರಿಯಾ, ಅವಿನಾಶ್, ಪ್ರಕಾಶ್ ಬೆಳವಾಡಿ, ಕಿಶೋರ್, ಪ್ರಮೋದ್ ಶೆಟ್ಟಿ, ಯಜ್ಞಾ ಶೆಟ್ಟಿ, ಬಾಲಾಜಿ ಮನೋಹರ್ ಮೊದಲಾದವರು “ಕಥಾ ಸಂಗಮ’ದ ಏಳು ಕಥೆಗಳ ವಿಭಿನ್ನ ಪಾತ್ರಗಳಿಬೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ “ಕಥಾ ಸಂಗಮ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯ ಚಿತ್ರತಂಡ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ.
ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ನವೆಂಬರ್ ಅಂತ್ಯಕ್ಕೆ “ಕಥಾ ಸಂಗಮ’ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಹೊಸ ಪ್ರಯೋಗವಾಗಿ ಬರುತ್ತಿರುವ “ಕಥಾ ಸಂಗಮ’ವನ್ನು ಕನ್ನಡ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಅಪ್ಪಿಕೊಳ್ಳುತ್ತಾರೆ, “ಕಥಾ ಸಂಗಮ’ ಎಷ್ಟರ ಮಟ್ಟಿಗೆ ಪ್ರೇಕ್ಷಕ ಪ್ರಭುಗಳ ಮನಗೆಲ್ಲಲಿದೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.