ಕಲಬುರಗಿ: ಮಹಾಮಾರಿ ಕೋವಿಡ್ ಸೋಂಕಿನ ರೂಪಾಂತರ ಹಾವಳಿ ಭೀತಿ ಹುಟ್ಟಿಸಿರುವ ನಡುವೆಯೇ ಬ್ರಿಟನ್‍ನಿಂದ ಕಲಬುರಗಿ ನಗರಕ್ಕೆ ಇದೇ ತಿಂಗಳು ಏಳು ಜನರು ಆಗಮಿಸಿದ್ದಾರೆ. ಇವರೆಲ್ಲರೂ ನಗರಕ್ಕೆ ಆಗಮಿಸುವ ಮುನ್ನ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದು, ನೆಗೆಟಿವ್ ವರದಿ ಬಂದಿದೆ ಎನ್ನಲಾಗಿದೆ.
ಬ್ರಿಟನ್‍ನಲ್ಲಿ ಕೋವಿಡ್ ಮತ್ತೆ ಅಬ್ಬರಿಸುತ್ತಿದ್ದು, ಈಗಾಗಲೇ ವಿಮಾನಯಾನ ಸೇವೆ ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿಂದೆ ಬಂದವರ ಮಾಹಿತಿಯನ್ನು ರಾಜ್ಯ ಸರ್ಕಾರ ಕಲೆ ಹಾಕಿದೆ. ಈ ಪೈಕಿ ಜಿಲ್ಲೆಗೆ ಏಳು ಜನರು ಬಂದಿರುವ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ.
ಡಿ.6ರಂದು ಒಬ್ಬರು, 10ರಂದು ಮೂವರು, 17ರಂದು ಇಬ್ಬರು ಹಾಗೂ 18ರಂದು ಒಬ್ಬರು ಹೀಗೆ ಏಳು ಜನರು ನಗರಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಎರಡು ದಿನಗಳ ಹಿಂದೆಯಷ್ಟೇ ತಾಯಿ ಮತ್ತು ಮಗು ಇಬ್ಬರು ಬೀದರ್ ಗೆ ಹೋಗಿದ್ದಾರೆ. ಉಳಿದ ಐವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾ ಕುಟುಂಬ ಮತ್ತು ಆರೋಗ್ಯಾಧಿಕಾರಿ ಡಾ.ರಾಜಶೇಖರ್ ಮಾಲಿ ‘ಉದಯವಾಣಿ’ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ರಸಗೊಬ್ಬರ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: ಇಬ್ಬರು ಅಧಿಕಾರಿಗಳು ಸಾವು, 15 ಮಂದಿ ಅಸ್ವಸ್ಥ
ಜಿಲ್ಲೆಗೆ ಆಗಮಿಸುವ ಮೊದಲೇ ಇವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಎಲ್ಲರ ವರದಿ ನೆಗೆಟಿವ್ ಇದೆ. ಇವರಲ್ಲಿ ಕೆಲವರು ಜಿಲ್ಲೆಗೆ ಬಂದು 15 ದಿನಗಳು ಕಳೆದಿದ್ದು, ಯಾವುದೇ ಲಕ್ಷಣಗಳು ಪತ್ತೆಯಾಗಿಲ್ಲ. ಆದರೂ, ಬ್ರಿಟನ್ ನಿಂದ ಬಂದವರು ಹಾಗೂ ಅವರ ಕುಟುಂಬದವರಿಗೆ ಡಿ.23ರಂದು ಮತ್ತೊಮ್ಮೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಲಾಗುವುದು. ಜಿಲ್ಲೆಯ ಜನರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಯಜುವೇಂದ್ರ ಚಹಾಲ್