ಮುಂಬಯಿ: ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದು ಬಿಜೆಪಿಗೆ ಅಜಿತ್ ಪವಾರ್ ಸಹಿತ ಕೆಲ ಎನ್.ಸಿ.ಪಿ. ಶಾಸಕರು ಬೆಂಬಲ ನೀಡಿರುವಂತೆ ದೇವೇಂದ್ರ ಫಡ್ನವೀಸ್ ಅವರು ಇಂದು ಬೆಳ್ಳಂಬೆಳಗ್ಗೆ ಎರಡನೇ ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮತ್ತು ಬಿಜೆಪಿಗೆ ಬೆಂಬಲ ಸೂಚಿಸಿದ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು.
ಈ ಕ್ಷಿಪ್ರ ರಾಜಕೀಯ ಸ್ತಿತ್ಯಂತರದಿಂದ ಕಂಗಾಲಾದ ಶಿವಸೇನೆ, ಎನ್.ಸಿ.ಪಿ. ಮತ್ತು ಕಾಂಗ್ರೆಸ್ ನಾಯಕರು ಕಂಗಾಲಾದರು. ಮತ್ತು ಮೂರೂ ಪಕ್ಷಗಳಲ್ಲಿ ಚುರುಕಿನ ಚಟುವಟಿಕೆಗಳು ನಡೆದವು. ಇದೆಲ್ಲದರ ನಡುವೆ ಅಜಿತ್ ಪವಾರ್ ಅವರ ಜೊತೆಯಲ್ಲಿದ್ದ ಏಳು ಜನ ಎನ್.ಸಿ.ಪಿ. ಶಾಸಕರು ಮತ್ತೆ ಶರದ್ ಪವಾರ್ ಅವರಿಗೆ ನಿಷ್ಠೆ ತೋರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಿಗ್ಗೆ ಅಜಿತ್ ಬಣದಲ್ಲಿದ್ದ ನಾಶಿಕ್ ಜಿಲ್ಲೆಯ ದಿಲೀಪ್ ಬಣ್ ಕರ್ ಮತ್ತು ಮಾನಿಕ್ ರಾವ್ ಕೋಕಟೆ ಅವರು ಪ್ರತ್ಯೇಕವಾಗಿ ಟ್ವೀಟ್ ಮಾಡಿ ತಮಗೆ ಪ್ರಮಾಣ ವಚನ ಸಮಾರಂಭದ ಕುರಿತಾಗಿ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿರುವುದಲ್ಲದೇ ತಮ್ಮ ನಿಷ್ಠೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಮತ್ತು ಅದರ ಅಧ್ಯಕ್ಷರಿಗೇ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಇನ್ನು ಇಂದು ಬೆಳಿಗ್ಗೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಐವರು ಎನ್.ಸಿ.ಪಿ. ಶಾಸಕರಾದ ರಾಜೇಂದ್ರ ಶಿಂಗ್ಣೆ, ಸಂದೀಪ್ ಕ್ಷೀರ್ ಸಾಗರ್, ಸುನಿಲ್ ಶೆಲ್ಕೆ, ಸುನಿಲ್ ಭೂಸರ, ನರಹರಿ ಝಿರ್ವಾಲ್, ಮತ್ತು ಸುನಿಲ್ ತಿಂಗ್ರೆ ಅವರು ಮತ್ತೆ ಎನ್.ಸಿ.ಪಿ. ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ತೋರ್ಪಡಿಸಿದ್ದಾರೆ. ಇನ್ನು ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗುತ್ತಿರುವ ಪಾರ್ಲಿ ಶಾಸಕ ಧನಂಜಯ ಮುಂಢೆ ಅವರು ಶರದ್ ಪವಾರ್ ಕರೆದಿದ್ದ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದಾರೆ.
‘ನಾನು ಪಕ್ಷದ ವಿರುದ್ಧ ಹೋಗಿಲ್ಲ. ನಮ್ಮ ಪಕ್ಷದ ಶಾಸಕಾಂಗ ನಾಯಕರಾಗಿರುವ ಅಜಿತ್ ಪವಾರ್ ಅವರು ಬೆಳಿಗ್ಗೆ ಕರೆ ಮಾಡಿ ರಾಜಭವನಕ್ಕೆ ಬರುವಂತೆ ಹೇಳಿದ್ದರಿಂದ ನಾನಲ್ಲಿಗೆ ಹೋಗಿದ್ದೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತಾಗಿ ನನಗೇನೂ ಸುಳಿವಿರಲಿಲ್ಲ. ನಾನೀವಾಗಲೂ ನನ್ನ ಪಕ್ಷದ ಜೊತೆಗೇ ಇದ್ದೇನೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ನಾನೆಂದೂ ಬದಲಾಯಿಸುವುದಿಲ್ಲ’ ಎಂದು ಮಾನಿಕ್ ರಾವ್ ಕೋಕಟೆ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
‘ನಾವು ಇಂದು ಬೆಳಿಗ್ಗೆ 8 ಗಂಟೆಗೆ ರಾಜಭವನವನ್ನು ತಲುಪಿದ ಸಂದರ್ಭದಲ್ಲಿ 8 ರಿಂದ 10 ಮಂದಿ ಶಾಸಕರು ಅಲ್ಲಿ ಸೇರಿದ್ದರು. ಆದರೆ ನಮಗ್ಯಾರಿಗೂ ನಮ್ನನ್ನು ಯಾಕೆ ಕರೆಸಲಾಗಿದೆ ಎಂಬ ವಿಚಾರ ತಿಳಿಸಿರಲಿಲ್ಲ. ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ನಾವೆಲ್ಲರೂ ಶರದ್ ಪವಾರ್ ಅವರನ್ನು ಭೇಟಿಯಾಗಲು ತೆರಳಿದೆವು’ ಎಂದು ರಾಜೇಂದ್ರ ಶಿಂಗ್ಣೆ ಹೇಳಿದ್ದಾರೆ.
ಪಕ್ಷದ ಆಂತರಿಕ ಬಳಕೆಗೆಂದು ಎನ್.ಸಿ.ಪಿ.ಯ ಎಲ್ಲಾ 54 ಶಾಸಕರ ಹೆಸರು ಸಹಿ ಮತ್ತು ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ಪಟ್ಟಿಯನ್ನು ಶಾಸಕಾಂಗ ಪಕ್ಷದ ನಾಯಕರಾಗಿರುವ ಅಜಿತ್ ಪವಾರ್ ಅವರು ಪಡೆದುಕೊಂಡಿದ್ದರು, ಅದೇ ಪಟ್ಟಿಯನ್ನು ಅಜಿತ್ ಅವರು ರಾಜ್ಯಪಾಲರಿಗೆ ನೀಡಿರುವ ಸಾಧ್ಯತೆ ಇದೆ ಎಂದು ಶರದ್ ಪವಾರ್ ಅವರು ಬಳಿಕ ತಮ್ಮ ಪಕ್ಷದ ಶಾಸಕರಿಗೆ ತಿಳಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಈ ಅನಿರೀಕ್ಷಿತ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಇದುವರೆಗೆ ಗೊಂದಲದ ಗೂಡಾಗಿದ್ದ ಇಲ್ಲಿನ ರಾಜಕೀಯ ಪರಿಸ್ಥಿತಿ ಇನ್ನಷ್ಟು ರಾಡಿಗೊಂಡಿರುವುದು ಮಾತ್ರ ಸುಳ್ಳಲ್ಲ.